Aus vs Ind- 2ನೇ ಟಿ20: ಭಾರತ ವಿರುದ್ಧ ಆಸ್ಟ್ರೇಲಿಯಾಗೆ ರೋಚಕ ಜಯ; ಸರಣಿ ಗೆದ್ದ ಕಾಂಗರೂ ಪಡೆ

ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನ 2-1ರಿಂದ ಗೆದ್ದಿದ್ದ ಆಸ್ಟ್ರೇಲಿಯಾ ಮಹಿಳಾ ತಂಡ ಈಗ ಭಾರತ ವಿರುದ್ಧ 2ನೇ ಟಿ20 ಪಂದ್ಯ ಗೆದ್ದಿದೆ. ಈ ಮೂಲಕ ಪ್ರವಾಸದ ಕ್ರಿಕೆಟ್ ಸರಣಿಯನ್ನ ಗೆದ್ದುಕೊಂಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಾಯಕಿಯರು

ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಾಯಕಿಯರು

 • Share this:
  ಕರಾರ, ಕ್ವೀನ್ಸ್​ಲ್ಯಾಂಡ್, ಅ. 9: ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ದುರದೃಷ್ಟ ಕಾಡಿದಂತಿದೆ. ಮೊದಲ ಏಕದಿನ ಕ್ರಿಕೆಟ್ ಪಂದ್ಯ ಹೊರತುಪಡಿಸಿ ಪ್ರವಾಸದ ಉಳಿದ ಪಂದ್ಯಗಳಲ್ಲಿ ಭಾರತವೇ ಪಾರಮ್ಯ ಸಾಧಿಸಿದರೂ ಸರಣಿ ಅಂತಿಮವಾಗಿ ಆತಿಥೇಯ ಆಸ್ಟ್ರೇಲಿಯನ್ನರ ಪಾಲಾಗಿದೆ. ಇಂದು ನಡೆದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳೆಯರು 4 ವಿಕೆಟ್​ಗಳಿಂದ ಭಾರತೀಯರನ್ನ ಸೋಲಿಸಿದರು. ಭಾರತದ 118 ರನ್​ಗಳ ಸ್ಕೋರಿಗೆ ಪ್ರತಿಯಾಗಿ ಆಸ್ಟ್ರೇಲಿಯಾ 5 ಎಸೆತ ಬಾಕಿ ಇರುವಂತೆ ಗೆಲುವಿನ ಗಡಿ ಮುಟ್ಟಿತು. ಟಾಹ್ಲಿಯಾ ಮೆಗ್​ಗ್ರಾತ್ ಅಜೇಯ 42 ರನ್ ಗಳಿಸಿ ಭಾರತದ ಸೋಲಿಗೆ ಪ್ರಮುಖ ಕಾರಣರಾದರು. ರಾಜೇಶ್ವರಿ ಗಾಯಕ್ವಾಡ್ ಅವರು 3 ವಿಕೆಟ್ ಸಾಧನೆ ಭಾರತಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

  ಭಾರತ 17 ಓವರ್​ವರೆಗೂ ಗೆಲುವಿನ ಹಾದಿಯಲ್ಲೇ ಇತ್ತು. 6 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ 3 ಓವರ್​ನಲ್ಲಿ 25 ರನ್ ಗಳಿಸಬೇಕಿತ್ತು. ಆದರೆ, ಶಿಖಾ ಪಾಂಡೆ ಮಾಡಿದ 18ನೇ ಓವರ್​ನಲ್ಲಿ ಆಸ್ಟ್ರೇಲಿಯನ್ನರು 11 ರನ್ ಗಳಿಸಿದರು. ಈ ವೇಳೆ, ದೀಪ್ತಿ ಶರ್ಮಾ ಒಂದು ಕ್ಯಾಚ್ ಡ್ರಾಪ್ ಮಾಡಿದ್ದೂ ಭಾರತಕ್ಕೆ ದುಬಾರಿ ಆಯಿತು. ನಂತರ ರೇಣುಕಾ ಸಿಂಗ್ ಮಾಡಿದ 19ನೇ ಓವರ್​ನಲ್ಲೂ 13 ರನ್​ಗಳು ಹರಿದುಹೋದವು. ಇಡೀ ಸರಣಿಯಲ್ಲಿ ಭಾರತದ ಮಗ್ಗುಲ ಮುಳ್ಳಾಗಿ ಕಾಡಿರುವ ಟಾಹ್ಲಿಯಾ ಮೆಕ್​ಗ್ರಾಥ್ ಅವರು ಹೆಚ್ಚೂಕಡಿಮೆ ಏಕಾಂಗಿಯಾಗಿ ನಿಂತು ತಂಡವನ್ನ ಗೆಲುವಿನ ದಡ ಮುಟ್ಟಿಸಿದರು.

  ಇದಕ್ಕೆ ಮುನ್ನ ಟಾಸ್ ಸೋತು ಭಾರತ ಮೊದಲು ಬ್ಯಾಟ್ ಮಾಡಿತು. ನಾಯಕಿ ಹರ್ಮಾನ್​ಪ್ರೀತ್ ಕೌರ್ ಹೊರತುಪಡಿಸಿ ಉಳಿದ ಅಗ್ರಪಂಕ್ತಿಯ ಬ್ಯಾಟರ್ಸ್ ಒಂದಂಕಿ ಸ್ಕೋರನ್ನೂ ಗಳಿಸಲು ಶಕ್ಯರಾಗಲಿಲ್ಲ. ನಾಯಕಿ ಕೌರ್, ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಾಕರ್ ಈ ಮೂವರು ಮಾತ್ರವೇ ಎರಡಂಕಿ ಸ್ಕೋರ್ ಗಡಿ ದಾಟಿದ್ದು. ಪೂಜಾ ವಸ್ತ್ರಾಕರ್ ಅವರು ಅಜೇಯ 37 ರನ್ ಗಳಿಸಿದರು. ಒಂದು ಹಂತದಲ್ಲಿ ನೂರು ರನ್ ಒಳಗೆ ಆಲೌಟ್ ಆಗುವ ಭೀತಿಯಲ್ಲಿದ್ದ ಭಾರತ ತಂಡಕ್ಕೆ ಪೂಜಾ ವಸ್ತ್ರಾಕರ್ ಚೇತರಿಕೆ ನೀಡಿದರು. ಸ್ಕೋರು 118 ರನ್ ವರೆಗೆ ಹಿಗ್ಗುವಂತೆ ಮಾಡಿದರು. ಪೂಜಾ ವಸ್ತ್ರಾಕರ್ ಅವರು 37 ರನ್ ಗಳಿಸಲು ತೆಗೆದುಕೊಂಡಿದ್ದು ಕೇವಲ 26 ಎಸೆತ ಮಾತ್ರ. ದೀಪ್ತಿ ಶರ್ಮಾ ಕೂಡ 19 ಬಾಲ್​ನಲ್ಲಿ 16 ರನ್ ಗಳಿಸಿ ಗಮನ ಸೆಳೆದರು. ಪೂಜಾ ವಸ್ತ್ರಾಕರ್ ಅವರು ಕೊನೆಯ ವಿಕೆಟ್​ಗೆ ರಾಜೇಶ್ವರಿ ಗಾಯಕ್ವಾಡ್ ಜೊತೆ 37 ರನ್​ಗಳ ಮುರಿಯದ ಜೊತೆಯಾಟ ಆಡಿದರು. ಈ ಜೊತೆಯಾಟದಲ್ಲಿ ರಾಜೇಶ್ವರಿ ಒಂದೂ ರನ್ ಗಳಿಸಲಿಲ್ಲ. ಜೊತೆಯಾಟದಲ್ಲಿ ಬಂದ ಬಹುಪಾಲು ರನ್ ಪೂಜಾ ವಸ್ತ್ರಾಕರ್ ಶಾಟ್​ಗಳಿಂದಲೇ ಬಂದವು.

  ಇದನ್ನೂ ಓದಿ: Indians in WBBL- ಆಸ್ಟ್ರೇಲಿಯಾದ ಮಹಿಳಾ ಬಿಗ್ ಬ್ಯಾಷ್​ಗೆ ಭಾರತದ 8 ಆಟಗಾರ್ತಿಯರು (Pic Story)

  ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ 3 ಏಕದಿನ ಪಂದ್ಯ, ಒಂದು ಟೆಸ್ಟ್ ಪಂದ್ಯ ಹಾಗು 2 ಟಿ20 ಪಂದ್ಯ ಆಡಿದೆ. ಏಕದಿನ ಕ್ರಿಕೆಟ್ ಸರಣಿಯನ್ನ ಆಸ್ಟ್ರೇಲಿಯಾ 2-1ರಿಂದ ಗೆದ್ದುಕೊಂಡಿತು. ಮೊದಲ ಪಂದ್ಯವನ್ನ ಆತಿಥೇಯರು ಸುಲಭವಾಗಿ ಗೆದ್ದರು. ಎರಡನೇ ಪಂದ್ಯದಲ್ಲಿ ಭಾರತದ ಮಹಿಳೆಯರು ಗೆಲುವಿನಂಚಿಗೆ ಬಂದು ಎಡವಿದರು. ತೇವಾಂಶದ ಕಾರಣ ಚೆಂಡಿನ ಬಿಗಿ ಹಿಡಿತ ಕಷ್ಟವಾದ ಹಿನ್ನೆಲೆಯಲ್ಲಿ ಕರಾರುವಾಕ್ ಬೌಲಿಂಗ್ ಮಾಡಲು ಸಾಧ್ಯವಾಗದೇ ಎರಡನೇ ಪಂದ್ಯ ಸೋತಿತು. ಆದರೆ, ಮೂರನೇ ಪಂದ್ಯದಲ್ಲಿ ಭಾರತೀಯರು ದಾಖಲೆಯ ಮೊತ್ತವನ್ನು ಚೇಸ್ ಮಾಡಿ ಗೆದ್ದು ಬೀಗಿದರು. ನಂತರ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಮಳೆಯ ಅಡಚಣೆ ನಡುವೆ ಭಾರತೀಯರೇ ಪಾರಮ್ಯ ಮೆರೆದರು. ಸಮಯ ಸಾಕಾಗದ್ದರಿಂದ ಆಸ್ಟ್ರೇಲಿಯನ್ನರು ಸೋಲಿನ ದವಡೆಯಿಂದ ಪಾರಾಗಿ ಡ್ರಾ ಮಾಡಿಕೊಂಡರು. ನಂತರ ಮೊದಲ ಟಿ20 ಪಂದ್ಯದಲ್ಲಿ ಭಾರತೀಯರು ಉತ್ತಮ ಮೊತ್ತದತ್ತ ಸಾಗುತ್ತಿರುವಾಗಲೀ ಮಳೆ ಬಂದು ಪಂದ್ಯ ಸ್ಥಗಿತಗೊಂಡಿತ್ತು. ಈಗ ಎರಡನೇ ಪಂದ್ಯವನ್ನ ಆಸ್ಟ್ರೇಲಿಯಾ ರೋಚಕವಾಗಿ ಗೆದ್ದಿದೆ. ಸೋಮವಾರ ಮೂರನೇ ಟಿ20 ಪಂದ್ಯ ನಡೆಯಲಿದೆ. ಆದರೆ, ಏಕದಿನ ಮತ್ತು ಟಿ20 ಸರಣಿ ಪಂದ್ಯಗಳನ್ನ ಒಟ್ಟು ಸೇರಿಸಿ ಈ ಭಾರತ-ಆಸ್ಟ್ರೇಲಿಯಾ ಸರಣಿಯಲ್ಲಿ ಆಸ್ಟ್ರೇಲಿಯಾ ವಿಜೇತವಾಗಿದೆ.

  ಸ್ಕೋರು ವಿವರ:

  ಭಾರತ ಮಹಿಳಾ ತಂಡ 20 ಓವರ್ 118/9
  (ಪೂಜಾ ವಸ್ತ್ರಾಕರ್ ಅಜೇಯ 37, ಹರ್ಮಾನ್​ಪ್ರೀತ್ ಕೌರ್ 28, ದೀಪ್ತಿ ಶರ್ಮಾ 16 ರನ್- ಸೋಫೀ ಮೋಲಿನೂಕ್ಸ್ 11/2, ಟಾಯ್ಲಾ ಲೇಮಿಂಕ್ 18/2)

  ಆಸ್ಟ್ರೇಲಿಯಾ ಮಹಿಳಾ ತಂಡ 19.1 ಓವರ್ 119/6
  (ಟಾಹ್ಲಿಯಾ ಮೆಕ್​ಗ್ರಾತ್ ಅಜೇಯ 42, ಬೆತ್ ಮೂನೀ, ಮೆಗ್ ಲ್ಯಾನಿಂಗ್ 15 ರನ್- ರಾಜೇಶ್ವರಿ ಗಾಯಕ್ವಾಡ್ 21/3)
  Published by:Vijayasarthy SN
  First published: