Cricket World Cup 2019, AUS vs WI: ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ; ಕೆರಿಬಿಯನ್ನರಿಗೆ ಮೊದಲ ಸೋಲು

Australia vs West Indies: ವೆಸ್ಟ್​ ಇಂಡೀಸ್ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದು ಗೆಲುವಿನ ನಗೆ ಬೀರಿತ್ತು. ಇತ್ತ ಫಿಂಚ್ ಪಡೆ ದುರ್ಬಲ ಅಫ್ಘಾನಿಸ್ತಾನ ವಿರುದ್ಧ ಜಯ ಸಾಧಿಸಿತ್ತು.

Vinay Bhat | news18
Updated:June 6, 2019, 11:04 PM IST
Cricket World Cup 2019, AUS vs WI: ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ; ಕೆರಿಬಿಯನ್ನರಿಗೆ ಮೊದಲ ಸೋಲು
ಆಸ್ಟ್ರೇಲಿಯಾ ಆಟಗಾರರು
  • News18
  • Last Updated: June 6, 2019, 11:04 PM IST
  • Share this:
ಬೆಂಗಳೂರು (ಜೂ. 06): ನಾಟಿಂಗ್​ಹ್ಯಾಮ್​ನ ಟ್ರೆಂಟ್​​ಬ್ರಿಡ್ಜ್​ ಮೈದಾನದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 15 ರನ್​ಗಳ ಗೆಲುವು ಸಾಧಿಸಿದೆ. ನಾಯಕ ಹೋಲ್ಡರ್ ಹಾಗೂ ಶಾಯ್ ಹೋಪ್​ರ ಹೋರಾಟದ ಹೊರತಾಗಿಯು ಕೆರಿಬಿಯನ್ನರು ವಿಶ್ವಕಪ್​​ನಲ್ಲಿ ಮೊದಲ ಸೋಲು ಕಂಡಿದ್ದಾರೆ.

ಆಸ್ಟ್ರೇಲಿಯಾ ನೀಡಿದ್ದ 289 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಆರಂಭಲ್ಲೇ ಎಡವಿತು. 2ನೇ ಓವರ್​ನಲ್ಲಿ ಎವಿಲ್ ಲೆವಿಸ್(1) ಔಟ್ ಆದರೆ, ಕ್ರಿಸ್ ಗೇಲ್ ಆಟ 21 ರನ್​ಗೆ ನಿಂತಿತು. ಈ ಸಂದರ್ಭ ಒಂದಾದ ಶಾಯ್ ಹೋಪ್ ಹಾಗೂ ನಿಕೋಲಸ್ ಪೂರನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 68 ರನ್​ಗಳ ಜೊತೆಯಾಟ ಆಡಿದ ಈ ಜೋಡಿ ಪೈಕಿ ಪೂರನ್ 36 ಎಸೆತಗಳಲ್ಲಿ 40 ರನ್​ಗೆ ಔಟ್ ಆದರು.

ಹೆಟ್ಮೇರ್ ಕೂಡ ತಂಡಕ್ಕೆ ಬಲವಾಗಿ ನಿಲ್ಲಲಿಲ್ಲ. 21 ರನ್ ಗಳಿಸಿರುವಾಗ ರನೌಟ್​ಗೆ ಬಲಿಯಾದರು. ಶಾಯ್ ಹೋಪ್68) ಹೋರಾಟ ನಡೆಸಿದರಾದರು ಅರ್ಧಶತಕ ಬಾರಿಸಿ ಪ್ರಮುಖ ಹಂತದಲ್ಲೇ ನಿರ್ಗಮಿಸಿದರೆ, ರಸೆಲ್ ಸ್ಫೋಟಕ ಆಟ 15 ರನ್​ಗೆ ಅಂತ್ಯವಾಗಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಆದರೂ ನಾಯಕ ಜೇಸನ್ ಹೋಲ್ಡರ್ ಅರ್ಧಶತಕ ಸಿಡಿಸಿ ಕೊನೆಯವರೆಗೂ ತಂಡವನ್ನು ಗೆಲುವಿನ ದಡ ಸೇರಿಸಬೇಕೆಂದು ನೆಲ ಕಚ್ಚಿ ಆಡಿದರು. ಆದರೆ ಉಳಿದ ಬ್ಯಾಟ್ಸ್​ಮನ್​ಗಳು ಇವರಿಗೆ ಸಾತ್ ನೀಡಲಿಲ್ಲ. ಅಂತಿಮವಾಗಿ ಹೋಲ್ಡರ್ ಕೂಡ 51 ರನ್​ ಗಳಿಸಿ ಜಂಪಾಗೆ ಕ್ಯಾಚಿತ್ತು ಔಟ್ ಆಗಿದ್ದು ವಿಂಡೀಸ್ ಸೋಲು ಖಚಿತವಾಯಿತು. ಪರಿಣಾಮ 50 ಓವರ್​ಗೆ ವಿಂಡೀಸ್ 9 ವಿಕೆಟ್ ಕಳೆದುಕೊಂಡು 273 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್​ 5 ವಿಕೆಟ್ ಕಿತ್ತು ಮಿಂಚಿದರೆ, ಪ್ಯಾಟ್ ಕಮಿನ್ಸ್​ 2 ಹಾಗೂ ಆ್ಯಡಂ ಜಂಪಾ 1 ವಿಕೆಟ್ ಪಡೆದರು.

 ಇದಕ್ಕೂ ಮೊದಲು ಟಾಸ್ ಗೆದ್ದ ವೆಸ್ಟ್​ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಕಾಂಗರೂ ಪಡೆ ಆರಂಭದಲ್ಲೇ ಆಘಾತ ಅನುಭವಿಸಿತು.

ಓಪನರ್​ಗಳಾಗಿ ಕಣಕ್ಕಿಳಿದ ನಾಯಕ  ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದಾರೆ. 6 ರನ್ ಗಳಿಸಿ ಫಿಂಚ್ ನಿರ್ಗಮಿಸಿದರೆ, ವಾರ್ನರ್ ಆಟ ಕೇವಲ 3 ರನ್​ಗೆ ಅಂತ್ಯವಾಯಿತು. ಉಸ್ಮಾನ್ ಖ್ವಾಜಾ ಕೂಡ 13 ರನ್ ಬಾರಿಸಿ ಔಟ್ ಆದರೆ, ಮ್ಯಾಕ್ಸ್​ವೆಲ್​​ ಸೊನ್ನೆ ಸುತ್ತಿದರು.

ಮಾರ್ಕಸ್ ಸ್ಟಾಯಿನಿಸ್ ಕೊಂಚ ಹೊತ್ತು ಸ್ಮಿತ್ ಜೊತೆಗೂಡಿ ಇನ್ನಿಂಗ್ಸ್​ ಕಟ್ಟಲು ಹೊರಟರಾದರು ಹೋಲ್ಡರ್ ಮಾರಕವಾಗಿ ಪರಿಣಮಿಸಿದರು. ಸ್ಟಾಯಿನಿಸ್ 19 ರನ್ ಬಾರಿಸಿ ಪೂರನ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಸಂದರ್ಭ ಸ್ಮಿತ್ ಜೊತೆಗೂಡಿ ಅಲೆಕ್ಸ್​ ಕ್ಯಾರಿ ಕುಸಿದ ತಂಡವನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸಿದರು. ಅದರಂತೆ ಇವರಿಬ್ಬರ ಖಾತೆಯಿಂದ 68 ರನ್​ಗಳ ಕಾಣಿಕೆ ಮೂಡಿಬಂತು. ಚೆನ್ನಾಗಿಯೆ ಆಡುತ್ತಿದ್ದ ಅಲೆಕ್ಸ್​ 45 ರನ್ ಗಳಿಸಿರುವಾಗ ರಸೆಲ್ ಬೌಲಿಂಗ್​​ನಲ್ಲಿ ನಿರ್ಗಮಿಸಿದರು.

ಹೀಗೆ 6 ವಿಕೆಟ್ ಕಳೆದುಕೊಂಡು ಆಲೌಟ್ ಭೀತಿಯಲ್ಲಿದ್ದ ಆಸೀಸ್​ಗೆ ಸ್ಟೀವ್ ಸ್ಮಿತ್ ಹಾಗೂ ಕಲ್ಟರ್ ನೈಲ್ ಆಪತ್ಬಾಂದವರಾದರು. 7ನೇ ವಿಕೆಟ್​ಗೆ ಶತಕದ ಜೊತೆಯಾಟವಾಡಿದ ಇವರಿಬ್ಬರು ತಂಡದ ರನ್ ಗತಿಯನ್ನು ಏರಿಸಿದರು. ಅಮೋಘ ಆಟ ಪ್ರದರ್ಶಿಸಿದ ಸ್ಮಿತ್ 103 ಎಸೆತಗಳಲ್ಲಿ 73 ರನ್​ಗೆ ಔಟ್ ಆದರೆ, ಕೊನೆ ಹಂತದಲ್ಲಿ ಕಲ್ಟರ್ 60 ಎಸೆತಗಳಲ್ಲಿ 92 ರನ್ ಚಚ್ಚಿ ಬ್ಯಾಟ್ ಕೆಳಗಿಟ್ಟರು.

ಅಂತಿಮವಾಗಿ ಆಸ್ಟ್ರೇಲಿಯಾ 49 ಓವರ್​ಗೆ ತನ್ನೆಲ್ಲಾ ಕಳೆದುಕೊಂಡು 288 ರನ್ ಕಲೆಹಾಕಿತು. ವಿಂಡೀಸ್ ಪರ ಬ್ರಾಥ್​ವೈಟ್ 3 ವಿಕೆಟ್ ಕಿತ್ತರೆ, ಒಶಾನೆ ಥೋಮಸ್, ಶೆಲ್ಡನ್ ಹಾಗೂ ರಸೆಲ್ ತಲಾ 2 ವಿಕೆಟ್ ಪಡೆದರು.

ವೆಸ್ಟ್​ ಇಂಡೀಸ್ ತಂಡ: ಜೇಸನ್ ಹೋಲ್ಡರ್ (ನಾಯಕ), ಶಾಯ್ ಹೋಪ್, ಕ್ರಿಸ್ ಗೇಲ್, ಎವಿನ್ ಲೆವಿಸ್, ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೇರ್, ಆ್ಯಂಡ್ರೊ ರಸೆಲ್, ಕಾರ್ಲೆಸ್ ಬ್ರಾಥ್​​ವೈಟ್, ಆ್ಯಶ್ಲೆ ನರ್ಸ್​​​, ಶೆಲ್ಡನ್ ಕಟ್ರೆಲ್, ಒಶಾನೆ ಥೋಮಸ್.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್ (ನಾಯಕ), ಉಸ್ಮಾನ್ ಖ್ವಾಜಾ, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟಾಯಿನಿಸ್, ಗ್ಲೆನ್ ಮ್ಯಾಕ್ಸ್​ವೆಲ್​, ಅಲೆಕ್ಸ್​ ಕ್ಯಾರಿ, ನೇಥನ್ ಕಲ್ಟರ್ ನೈಲ್, ಪ್ಯಾಟ್ ಕಮಿನ್ಸ್​, ಮಿಚೆಲ್ ಸ್ಟಾರ್ಕ್​​, ಆ್ಯಡಂ ಜಂಪಾ.
First published: June 6, 2019, 2:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading