ಬೆಂಗಳೂರು (ನ. 06): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಟಿ-20 ಸರಣಿ ಆಡುತ್ತಿದೆ. ನಿನ್ನೆ ನಡೆದ ಎರಡನೇ ಟಿ-20 ಪಂದ್ಯದಲ್ಲಿ ನಂಬರ್ ಒನ್ ಟಿ-20 ತಂಡ ಪಾಕಿಸ್ತಾನಕ್ಕೆ ಸೋಲುಣಿಸಿದ ಕಾಂಗರೂ ಪಡೆ 7 ವಿಕೆಟ್ಗಳಿಂದ ಗೆದ್ದು ಬೀಗಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡದ ನೂತನ ನಾಯಕ ಬಾಬರ್ ಅಜಮ್ ಲೆಕ್ಕಾಚಾರವನ್ನು ಆಸೀಸ್ ಆರಂಭದಲ್ಲೇ ತಲೆಕೆಳಗಾಗಿಸಿತು. ಫಖರ್ ಜಮನ್ 2 ರನ್ಗೆ ಔಟ್ ಆದರೆ, ಹ್ಯಾರಿಸ್ ಸೊಹೈಲ್ 6 ರನ್ ಗಳಿಸಿ ನಿರ್ಗಮಿಸಿದರು. ಮೊಹಮ್ಮದ್ ರಿಜ್ವಾನ್ ಕೂಡ 14 ರನ್ಗೆ ಸುಸ್ತಾದರು.
ಹೀಗೆ ಪವರ್ ಪ್ಲೇನಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡರು ಓಪನರ್ ಪಾಕ್ ನಾಯಕ ಬಾಬರ್ ಅಜಮ್ ಮಾತ್ರ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದರು. ಆದರೆ, ಯಾವೊಬ್ಬ ಬ್ಯಾಟ್ಸ್ಮನ್ ಇವರಿಗೆ ಸಾತ್ ನೀಡಲಿಲ್ಲ. 4ನೇ ವಿಕೆಟ್ಗೆ ಬಾಬರ್ ಜೊತೆಯಾದ ಅಸಿಫ್ ಅಲಿ ವಿರುದ್ಧ ಮೈದಾನದಲ್ಲೇ ಬಾಬರ್ ಹರಿಹಾಯ್ದರು.
IPL 2020: ಡೆಲ್ಲಿ ಪಾಲಾದ ಆರ್ ಅಶ್ವಿನ್; ಪಂಜಾಬ್ಗೆ ಕನ್ನಡಿಗ ಸಾರಥಿ?
ನಿಂತು ಆಡುವಂತೆ ಅಲಿಗೆ ಬಾಬರ್ ಸೂಚಿಸಿದ್ದರು. ಆದರೆ, ಬಿರುಸಿನ ಹೊಡೆತಕ್ಕೆ ಮಾರುಹೋದ ಅಲಿ ಕೇವಲ 4 ರನ್ಗಳಿಸಿ ಪ್ಯಾಟ್ ಕಮಿನ್ಸ್ಗೆ ಕ್ಯಾಚ್ ನೀಡಿ ಔಟ್ ಆದರು. ಈವೇಳೆ ತಾಳ್ಮೆ ಕಳೆದುಕೊಂಡ ಬಾಬರ್ ಮೈದಾನದಲ್ಲೇ ಅಲಿ ವಿರುದ್ಧ ರೊಚ್ಚಿಗೆದ್ದರು.
ಬಾಬರ್ 38 ಎಸೆತಗಳಲ್ಲಿ 50 ರನ್ ಗಳಿಸಿ ರನೌಟ್ಗೆ ಬಲಿಯಾದರು. ಅಂತಿಮ ಹಂತದಲ್ಲಿ ಇಫ್ತಿಕರ್ ಅಹ್ಮದ್ ಸ್ಫೋಟಕ ಬ್ಯಾಟಿಂಗ್ ನಡೆಸಿದ ಪರಿಣಾಮ ಪಾಕಿಸ್ತಾನ 20 ಓವರ್ಗೆ 6 ವಿಕೆಟ್ ಕಳೆದುಕೊಂಡು 150 ರನ್ ಬಾರಿಸಿತು. ಇಫ್ತಿಕರ್ 34 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 62 ರನ್ ಚಚ್ಚಿದರು. ಆಸೀಸ್ ಪರ ಅಸ್ಟನ್ ಅಗರ್ 2, ರಿಚರ್ಡಸನ್ ಹಾಗೂ ಕಮಿನ್ಸ್ ತಲಾ 1 ವಿಕೆಟ್ ಪಡೆದರು.
151 ರನ್ಗಳ ಗುರಿ ಬೆನ್ನಟ್ಟಿದ ಆಸೀಸ್ಗೆ ಇದು ಸವಾಲಾಗಿ ಪರಿಣಮಿಸಲೇ ಇಲ್ಲ. 18.3 ಓವರ್ನಲ್ಲೇ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 151 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಆರ್ಭಟಿಸಿದ ಸ್ಮಿತ್ ಕೇವಲ 51 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 80 ರನ್ ಬಾರಿಸಿದರು.
ಭಾರತ- ಬಾಂಗ್ಲಾ ಡೇ ನೈಟ್ ಟೆಸ್ಟ್ನಲ್ಲಿ ಇದೇ ಮೊದಲ ಬಾರಿಗೆ ಕಾಮೆಂಟೇಟರ್ ಆಗಿ ಎಂಎಸ್ ಧೋನಿ
7 ವಿಕೆಟ್ಗಳ ಭರ್ಜರಿ ಜಯದೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಟಿ-20 ಪಂದ್ಯ ಮಳೆಗೆ ಆಹುತಿಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ