ಬ್ರಿಸ್ಬೇನ್ ಟೆಸ್ಟ್: ಭಾರತಕ್ಕೆ 33 ರನ್ ಮೊದಲ ಇನ್ನಿಂಗ್ಸ್ ಹಿನ್ನಡೆ; ಕುತೂಹಲ ಘಟ್ಟದಲ್ಲಿ ಕೊನೆಯ ಪಂದ್ಯ

ಆಸ್ಟ್ರೇಲಿಯಾದ 369 ರನ್​ಗಳ ಮೊದಲ ಇನ್ನಿಂಗ್ಸ್​ಗೆ ಪ್ರತಿಯಾಗಿ ಭಾರತದ ಮೊದಲ ಇನ್ನಿಂಗ್ಸ್ 336 ರನ್​ಗೆ ಅಂತ್ಯಗೊಂಡಿತು. ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಉತ್ತಮ ಜೊತೆಯಾಟ ನೀಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್

ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್

 • Share this:
  ಬ್ರಿಸ್ಬೇನ್(ಜ. 17): ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಅವರ ಅರ್ಧಶತಕಗಳ ಸಹಾಯದಿಂದ ಭಾರತ ಕ್ರಿಕೆಟ್ ತಂಡ ಬ್ರಿಸ್ಬೇನ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸಲ್ಲಿ 336 ರನ್ ಗಳಿಸಲು ಶಕ್ಯವಾಯಿತು. ಆಸ್ಟ್ರೇಲಿಯಾದ 369 ರನ್​ಗಳ ಮೊದಲ ಇನ್ನಿಂಗ್ಸ್​ಗೆ ಪ್ರತಿಯಾಗಿ ಭಾರತ 33 ರನ್​ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ ಆಸ್ಟ್ರೇಲಿಯಾ 3ನೇ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿ ಮುನ್ನಡೆಯನ್ನು 54 ರನ್​ಗೆ ಹೆಚ್ಚಿಸಿಕೊಂಡು ತುಸು ಮೇಲುಗೈ ಸ್ಥಿತಿಯಲ್ಲಿದೆ.

  ನಿನ್ನೆ ದಿನಾಂತ್ಯದಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದ ಟೀಮ್ ಇಂಡಿಯಾ ಇಂದಿನ ದಿನದಾಟದಲ್ಲಿ ಎಚ್ಚರಿಕೆಯ ಆಟವಾಡಿತು. ಆದರೆ, ಆರನೇ ವಿಕೆಟ್​ವರೆಗೂ ದೊಡ್ಡ ಜೊತೆಯಾಟ ಮೂಡಿಬರದೇ ಇದ್ದದ್ದು ಆತಂಕ ಮೂಡಿಸಿತು. ಚೇತೇಶ್ವರ್ ಪೂಜಾರ, ಮಯಂಕ್ ಅಗರವಾಲ್, ರಿಷಬ್ ಪಂತ್ ಮತ್ತು ಅಜಿಂಕ್ಯ ರಹಾನೆ ತಕ್ಕಮಟ್ಟಿಗೆ ರನ್ ಪೇರಿಸಿದರು. ಆದರೆ, 7ನೇ ವಿಕೆಟ್​ಗೆ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಅವರು 123 ರನ್ ಜೊತೆಯಾಟದಲ್ಲಿ ಭಾಗಿಯಾಗಿದ್ದು ಭಾರತವನ್ನು ಅಪಾಯದಿಂದ ಪಾರು ಮಾಡಿತು. ಇಬ್ಬರೂ ಕೂಡ ಅರ್ಧಶತಕ ಗಳಿಸಿ ತಂಡದ ಮೊತ್ತವನ್ನು 300 ಗಡಿ ದಾಟುವಂತೆ ನೋಡಿಕೊಂಡರು.

  ಇದನ್ನೂ ಓದಿ: Syed Mushtaq Ali Trophy 2020; ಆಪತ್ಬಾಂಧವನ ಆಟ ಪ್ರದರ್ಶಿಸಿದ ಅನಿರುದ್ಧ್​ ಜೋಶಿ, ಮೂರನೇ ಗೆಲುವು ದಾಖಲಿಸಿದ ಕರ್ನಾಟಕ

  ಆಸ್ಟ್ರೇಲಿಯಾದ ಜೋಷ್ ಹೇಜರ್​ವುಡ್ 5 ವಿಕೆಟ್ ಗಳಿಸಿ ಭಾರತದ ಪಾಲಿಗೆ ಮಾರಕವೆನಿಸಿದರು. ಮಿಶೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕುಮಿನ್ಸ್ ಅವರು ತಲಾ 2 ವಿಕೆಟ್ ಪಡೆದರು. ಇನ್ನು, ಭಾರತ 336 ರನ್​ಗೆ ಆಲೌಟ್ ಆದ ಬಳಿಕ 33 ರನ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ. ಡೇವಿಡ್ ವಾರ್ನರ್ ಅವರೊಬ್ಬರೇ ಸಿಡಿಲಬ್ಬರ ಬ್ಯಾಟಿಂಗ್ ಸಿಡಿಸಿ 22 ಬಾಲ್​ನಲ್ಲಿ 20 ರನ್ ಗಳಿಸಿದರು. ನಾಳೆ ಪಂದ್ಯಕ್ಕೆ ಪ್ರಮುಖ ದಿನವಾಗಿದ್ದು, ಆಸ್ಟ್ರೇಲಿಯಾವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕದಿದ್ದರೆ ಭಾರತಕ್ಕೆ ಅಪಾಯದ ಸ್ಥಿತಿ ಎದುರಾಗುವ ಸಾಧ್ಯತೆ ಇದೆ.

  ಭಾರತ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಸದ್ಯ 1-1ರಿಂದ ಸಮವಾಗಿದ್ದು, ಕಳೆದ ಟೆಸ್ಟ್​ನಲ್ಲಿ ಭಾರತ ಸೋಲಿನ ದವಡೆಯಿಂದ ಪಾರಾಗಿ ರೋಚಕ ರೀತಿಯಲ್ಲಿ ಡ್ರಾ ಸಾಧಿಸಿತ್ತು. ಈ ನಾಲ್ಕನೇ ಪಂದ್ಯದ ಸದ್ಯದ ಗತಿ ಗಮನಿಸಿದರೆ ಡ್ರಾ ಆಗುವ ಸಾಧ್ಯತೆ ತುಸು ಹೆಚ್ಚಿದ್ದಂತಿದೆ.

  ಇದನ್ನೂ ಓದಿ: ಭಾರತೀಯ ಕ್ರಿಕೆಟ್​ನ ಆಲ್​ರೌಂಡರ್​ಗಳಾದ ಹಾರ್ದಿಕ್-ಕ್ರುನಾಲ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯ ನಿಧನ!

  ಸ್ಕೋರು ವಿವರ (4ನೇ ದಿನದಾಟ):

  ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 115.2 ಓವರ್ 369/10

  ಭಾರತ ಮೊದಲ ಇನ್ನಿಂಗ್ಸ್ 111.4 ಓವರ್ 336/10
  (ಶಾರ್ದೂಲ್ ಠಾಕೂರ್ 67, ವಾಷಿಂಗ್ಟನ್ ಸುಂದರ್ 62, ರೋಹಿತ್ ಶರ್ಮಾ 44, ಮಯಂಕ್ ಅಗರ್ವಾಲ್ 38, ಅಜಿಂಕ್ಯ ರಹಾನೆ 37, ಚೇತೇಶ್ವರ್ ಪೂಜಾರ 25, ರಿಷಬ್ ಪಂತ್ 23 ರನ್ – ಹೇಜಲ್​ವುಡ್ 57/5, ಮಿಶೆಲ್ ಸ್ಟಾರ್ಕ್ 88/2, ಪ್ಯಾಟ್ ಕಮಿನ್ಸ್ 94/2)

  ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 6 ಓವರ್ 21/0
  (ಡೇವಿಡ್ ವಾರ್ನರ್ ಅಜೇಯ 20 ರನ್)
  Published by:Vijayasarthy SN
  First published: