Pink Ball Test- ಪಂದ್ಯ ಡ್ರಾ ಆದರೂ ಕಾಂಗರೂಗಳ ಪಡೆ ಕಟ್ಟಿಹಾಕಿದ ಭಾರತದ ಮಹಿಳೆಯರು

Aus vs India- ನಾಲ್ಕು ದಿನಗಳ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಆತಿಥೇಯ ಆಸ್ಟ್ರೇಲಿಯಾ ಎದುರು ಸಂಪೂರ್ಣ ಪ್ರಾಬಲ್ಯ ತೋರಿದರು. ಪಂದ್ಯ ಡ್ರಾನಲ್ಲಿ ಅಂತ್ಯವಾದರೂ ಭಾರತೀಯ ಆಟ ಅವಿಸ್ಮರಣೀಯ ಎನಿಸಿದೆ.

ಭಾರತ ಮಹಿಳಾ ತಂಡ

ಭಾರತ ಮಹಿಳಾ ತಂಡ

 • Share this:
  ಕರಾರ, ಅ. 03: ವಿಶ್ವದ ಅತ್ಯಂತ ಪ್ರಬಲ ಮಹಿಳಾ ಕ್ರಿಕೆಟ್ ತಂಡ ಎನಿಸಿರುವ ಆಸ್ಟ್ರೇಲಿಯಾ ವಿರುದ್ಧ ಭಾರತದ ಮಹಿಳೆಯರು ಪ್ರಾಬಲ್ಯ ಮೆರೆಯುತ್ತಿದ್ದಾರೆ. ಕ್ವೀನ್ಸ್​ಲ್ಯಾಂಡ್​ನ ಕರಾರ ಓವಲ್ ಗ್ರೌಂಡ್​ನಲ್ಲಿ ಇಂದು ಮುಕ್ತಾಯಗೊಂಡ ಆತಿಥೇಯ ಆಸ್ಟ್ರೇಲಿಯಾ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತೀಯರು ಅದ್ಭುತ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ. ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೂ ಭಾರತದ ವನಿತೆಯರ ಆಟ ಈ ಪಂದ್ಯದ ಹೈಲೈಟ್ಸ್ ಎನಿಸಿದೆ. ಮೊದಲೆರಡು ದಿನ ಮಳೆಯಿಂದ ಪಂದ್ಯದ ಆಟಕ್ಕೆ ಅಡಚಣೆ ಆಗದೇ ಇದ್ದಿದ್ದರೆ ಭಾರತದ ಮಹಿಳಾ ತಂಡಕ್ಕೆ ಗೆಲುವು ನಿಶ್ಚಿತವಾಗಿರುತ್ತಿತ್ತು. ಇಂದು ಉಳಿದಿರುವ ಅಲ್ಪ ಅವಧಿಯಲ್ಲೂ ಭಾರತದ ಮಹಿಳೆಯರು ಗೆಲುವಿಗಾಗಿ ಕೊನೆಯವರೆಗೂ ಪ್ರಯತ್ನಿಸಿದ್ದು ವಿಶೇಷ. ಆದರೆ, ಅಂತಿಮವಾಗಿ ಭಾರತೀಯರಿಗೆ ಓವರ್​ಗಳು ಸಾಕಾಗಲಿಲ್ಲ. ಇನ್ನೂ 30 ಓವರ್​ಗಳಷ್ಟು ಅವಕಾಶ ಸಿಕ್ಕಿದ್ದರೆ ಗೆಲುವು ಸಿಕ್ಕುವ ಸಾಧ್ಯತೆ ಇತ್ತು.

  ಭಾರತದ ಮಹಿಳೆಯರು ಮೂರನೇ ದಿನದಾಟದ ವೇಳೆ ಸ್ಕೋರು 8 ವಿಕೆಟ್ ನಷ್ಟಕ್ಕೆ 377 ರನ್ ಇದ್ದಾಗ ಡಿಕ್ಲೇರ್ ಮಾಡಿಕೊಂಡರು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ಸ್ವಲ್ಪದರಲ್ಲಿ ಫಾಲೋ ಆನ್​ನಿಂದ ಬಚಾವಾಗಿ ಕೊನೆಯ ದಿನದಂದು 241 ರನ್​ಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಭಾರತ ತಂಡದ ಬ್ಯಾಟರ್ಸ್ ವೇಗವಾಗಿ ರನ್ ಗಳಿಸಿ 37 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 135 ರನ್ ಇದ್ದಾಗ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಆಸ್ಟ್ರೇಲಿಯನ್ನರಿಗೆ ಗೆಲ್ಲಲು 272 ರನ್ ಟಾರ್ಗೆಟ್ ಕೊಟ್ಟಿತು. ಆದರೆ, ಕಡಿಮೆ ಓವರ್​ಗಳು ಬಾಕಿ ಇದ್ದರಿಂದ ಆಸ್ಟ್ರೇಲಿಯಾ ಗುರಿ ಮುಟ್ಟುವುದು ಅಸಂಭವ ಇತ್ತು. ಆಸ್ಟ್ರೇಲಿಯನ್ನರನ್ನ ಆಲೌಟ್ ಮಾಡಲು ಭಾರತಕ್ಕೆ ಸಾಕಷ್ಟು ಓವರ್​ಗಳೂ ಇರಲಿಲ್ಲ. 15 ಓವರ್​ನಲ್ಲಿ ಆಸ್ಟ್ರೇಲಿಯಾ ಮಹಿಳೆಯರು 36 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡರು. ಝೂಲನ್ ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್ ತಲಾ ಒಂದೊಂದು ವಿಕೆಟ್ ಪಡೆದರು. ಪೂಜಾ ವಸ್ತ್ರಾಕರ್ ಈ ಪಂದ್ಯದಲ್ಲಿ 4 ವಿಕೆಟ್ ಪಡೆದರೆ, ಝೂಲನ್ ಗೋಸ್ವಾಮಿ 3 ವಿಕೆಟ್ ಸಂಪಾದಿಸಿದರು.

  ಭಾರತದ ಮಹಿಳೆಯರಿಗೆ ಇದು ಎರಡನೇ ಡೇ ನೈಟ್ ಟೆಸ್ಟ್ ಪಂದ್ಯವಾಗಿತ್ತು. ಸ್ಮೃತಿ ಮಂಧನಾ ಅವರ ಆಕರ್ಷಕ ಶತಕ ಈ ಪಂದ್ಯದ ಮುಖ್ಯಾಂಶವಾಗಿದೆ. ಭಾರತದ ಮಹಿಳೆಯರು ಎಲ್ಲಾ ವಿಭಾಗದಲ್ಲೂ ಪ್ರಬಲ ಆತಿಥೇಯರ ಮೇಲೆ ಪ್ರಾಬಲ್ಯ ಸಾಧಿಸಿದ್ದು ವಿಶೇಷ. ಅದರ ಬೌಲಿಂಗ್ ದಾಳಿ ಅದ್ಭುತವಾಗಿತ್ತು. ಇನ್ನು, ವಿಶ್ವದ ಅತ್ಯಂತ ವೇಗದ ಮಹಿಳಾ ಬೌಲರ್ ಎನಿಸಿರುವ ಝೂಲನ್ ಗೋಸ್ವಾಮಿ ಅವರಿಗೆ ಇದು ಕೊನೆಯ ಟೆಸ್ಟ್ ಪಂದ್ಯವೂ ಆಗಿದೆ. ಈಗ ಅವರು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

  ಈ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಮುನ್ನ ಎರಡೂ ತಂಡಗಳ ಮಧ್ಯೆ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಡೆದಿತ್ತು. ಅದರಲ್ಲಿ ಆಸ್ಟ್ರೇಲಿಯಾ 2-1 ರಿಂದ ಗೆದ್ದರೂ ಭಾರತದ ಮಹಿಳೆಯರು ಪ್ರಬಲ ಹೋರಾಟ ತೋರಿ ತಮ್ಮ ಛಾಪು ಮೂಡಿಸಿದ್ದರು. ಈಗ ಹಗಲು ರಾತ್ರಿಯ ಟೆಸ್ಟ್ ಪಂದ್ಯದಲ್ಲಿ ಭಾರತೀಯರು ನಿಚ್ಚಳವಾಗಿ ಪ್ರಾಬಲ್ಯ ತೋರಿದ್ಧಾರೆ. ಅಕ್ಟೋಬರ್ 7, 9 ಮತ್ತು 11 ರಂದು ಮೂರು ಟಿ20 ಪಂದ್ಯಗಳು ನಡೆಯಲಿವೆ.

  ಇದನ್ನೂ ಓದಿ: RCB vs PBKS- ಪ್ಲೇ ಆಫ್​ಗೆ ಆರ್​ಸಿಬಿ; ಚೇಸಿಂಗ್​ನಲ್ಲಿ ಹಳಿತಪ್ಪಿದ ಪಂಜಾಬ್

  ಸ್ಕೋರು ವಿವರ:

  ಭಾರತ ಮಹಿಳಾ ತಂಡ ಮೊದಲ ಇನ್ನಿಂಗ್ಸ್ 145 ಓವರ್ 377/8 (ಡಿಕ್ಲೇರ್)

  ಆಸ್ಟ್ರೇಲಿಯಾ ಮಹಿಳಾ ತಂಡ ಮೊದಲ ಇನ್ನಿಂಗ್ಸ್ 96.4 ಓವರ್ 241/9 (ಡಿಕ್ಲೇರ್)
  (ಎಲಿಸ್ ಪೆರಿ ಅಜೇಯ 68, ಆಶ್ಲೀಗ್ ಗಾರ್ಡ್ನರ್ 51, ಮೆಗ್ ಲ್ಯಾನಿಂಗ್ 38, ಟಾಹ್ಲಿಯಾ ಮೆಕ್​ಗ್ರಾತ್ 28 ರನ್ – ಪೂಜಾ ವಸ್ತ್ರಾಕರ್ 49/3, ಝೂಲನ್ ಗೋಸ್ವಾಮಿ 33/2, ದೀಪ್ತಿ ಶರ್ಮಾ 36/2, ಮೇಘನಾ ಸಿಂಗ್ 54/2)

  ಭಾರತ ಮಹಿಳಾ ತಂಡ ಎರಡನೇ ಇನ್ನಿಂಗ್ಸ್ 37 ಓವರ್ 135/3 (ಡಿಕ್ಲೇರ್)
  (ಶಫಾಲಿ ವರ್ಮಾ 52, ಪೂನಮ್ ರಾವತ್ ಅಜೇಯ 41, ಸ್ಮೃತಿ ಮಂಧನಾ 31 ರನ್)

  ಆಸ್ಟ್ರೇಲಿಯಾ ಮಹಿಳಾ ತಂಡ ಎರಡನೇ ಇನ್ನಿಂಗ್ಸ್ 15 ಓವರ್ 36/2
  (ಮೆಗ್ ಲ್ಯಾನಿಂಗ್ ಅಜೇಯ 17 ರನ್)
  Published by:Vijayasarthy SN
  First published: