Australa vs India - ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 195ಕ್ಕೆ ಆಲೌಟ್; ಬುಮ್ರಾ ಮಾರಕ ದಾಳಿ

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಭಾರತ 2ನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರು ಮೊದಲ ದಿನದ ಗೌರವ ಸಂಪಾದನೆ ಮಾಡಿದರು. ಕಾಂಗರೂಗಳ ಪಡೆಯ ಮೊದಲ ಇನ್ನಿಂಗ್ಸ್ 195 ರನ್​ಗೆ ಅಂತ್ಯವಾಯಿತು.

ಚೇತೇಶ್ವರ್ ಪೂಜಾರ

ಚೇತೇಶ್ವರ್ ಪೂಜಾರ

  • News18
  • Last Updated :
  • Share this:
    ಮೆಲ್ಬೋರ್ನ್(ಡಿ. 26): ಆಸ್ಟ್ರೇಲಿಯಾ ವಿರುದ್ಧ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದ ಗೌರವ ಪಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕಾಂಗರೂಗಳ ಪಡೆಯ ಮೊದಲ ಇನ್ನಿಂಗ್ಸ್ 195 ರನ್​ಗೆ ಅಂತ್ಯಗೊಂಡಿತು. ಟ್ರಾವಿಸ್ ಹೆಡ್, ಮಾರ್ನಸ್ ಲಬುಶಾಗ್ನೆ ಮತ್ತು ಮ್ಯಾಥ್ಯೂ ಹೇಡ್ ಅವರನ್ನ ಹೊರತುಪಡಿಸಿ ಉಳಿದ ಆಸ್ಟ್ರೇಲಿಯನ್ ಬ್ಯಾಟುಗಾರರು ಹೆಚ್ಚು ರನ್ ಗಳಿಸಲು ವಿಫಲರಾದರು. ಭಾರತದ ಜಸ್​ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಮಾರಕ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯನ್ನರು ರನ್ ಗಳಿಸಲು ಪರದಾಡಿದರು. ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್ ಕೂಡ 2 ವಿಕೆಟ್ ಗಳಿಸಿ ಗಮನ ಸೆಳೆದರು. ನಂತರ ಬ್ಯಾಟಿಂಗ್ ಮಾಡಿದ ಭಾರತೀಯರು ಒಂದು ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದ್ದಾರೆ. ಮೊಹಮ್ಮದ್ ಸಿರಾಜ್ ಜೊತೆ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಶುಭ್ಮನ್ ಗಿಲ್ ಕೂಡ ಉತ್ತಮ ಬ್ಯಾಟಿಂಗ್ ಮಾಡಿ ಗಮನ ಸೆಳೆದರು.

    ಕಾಂಗರೂಗಳ ಪಡೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 38 ರನ್ನಾಗುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಜೋ ಬರ್ನ್ಸ್ ಮತ್ತು ಸ್ಟೀವನ್ ಸ್ಮಿತ್ ಇಬ್ಬರೂ ಶೂನ್ಯ ಸಂಪಾದನೆ ಮಾಡಿದರು. ನಾಲ್ಕನೇ ವಿಕೆಟ್​ಗೆ ಮಾರ್ನಸ್ ಲಾಬುಶಗ್ನೆ ಮತ್ತು ಟ್ರಾವಿಸ್ ಹೆಡ್ 86 ರನ್ ಜೊತೆಯಾಟ ನೀಡಿ ಇನ್ನಿಂಗ್ಸ್​ಗೆ ಚೇತರಿಕೆ ನೀಡಿದರು. ಈ ಜೊತೆಯಾಟವೊಂದು ಮಾತ್ರ ಆಸ್ಟ್ರೇಲಿಯನ್ನರ ಮಾನ ಉಳಿಸಿತು. ಟ್ರಾವಿಸ್ ಹೆಡ್ ನಿರ್ಗಮನದ ಬಳಿ ಆಸ್ಟ್ರೇಲಿಯಾ ಇನ್ನಿಂಗ್ಸ್​ನ ಪತನ ಮತ್ತೆ ಆರಂಭವಾಯಿತು. ಲಬುಶಗ್ನೆ 48 ರನ್ ಗಳಿಸಿ 2 ರನ್​ನಿಂದ ಶತಕವಂಚಿತರಾದರು. ಟ್ರಾವಿಸ್ ಹೆಡ್ 38 ಮತ್ತು ಮ್ಯಾಥ್ಯೂ ಹೇಡ್ 30 ರನ್ ಗಳಿಸಿದರು.

    ಆಸ್ಟ್ರೇಲಿಯಾ ಇನ್ನಿಂಗ್ಸನ್ನು ಬೇಗ ಅಂತ್ಯಗೊಳಿಸಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಪ್ರಾರಂಭಿಸಿದ ಭಾರತ ಆರಂಭದಲ್ಲೇ ಮಯಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ದೇಶೀಯ ಕ್ರಿಕೆಟ್ ಮತ್ತು ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಮಯಂಕ್ ಅಗರ್ವಾಲ್ ಪ್ರಸಕ್ತ ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ ಗಳಿಸಲು ಪರದಾಟ ಮುಂದುವರಿಸಿದ್ದಾರೆ. ಅಭ್ಯಾಸ ಪಂದ್ಯದಲ್ಲಿ 62 ರನ್ ಗಳಿಸಿದ್ದು ಬಿಟ್ಟರೆ ಅವರಿಂದ ಹೆಚ್ಚು ರನ್ ಹರಿದುಬಂದಿಲ್ಲ. ಮಯಂಕ್ ನಿರ್ಗಮನದ ನಂತರ ಶುಭ್ಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರ ಮತ್ಯಾವುದೇ ಅಪಾಯವಾಗದಂತೆ ದಿನಾಂತ್ಯಗೊಳಿಸಿದರು. ಗಿಲ್ 28 ರನ್ ಗಳಿಸಿ ಅಜೇಯರಾಗಿ ಉಳಿದು ತಮ್ಮ ಪದಾರ್ಪಣೆ ಪಂದ್ಯದಲ್ಲಿ ಉತ್ತಮ ಪ್ರದರ್ಶನದ ತೃಪ್ತಿ ಪಡೆದರು.

    ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್​ವರೆಗೂ ಹಿಡಿತ ಸಾಧಿಸಿದ್ದ ಭಾರತೀಯರು ತಮ್ಮ ಎರಡನೇ ಇನ್ನಿಂಗ್ಸಲ್ಲಿ 36 ರನ್​ಗೆ ಆಲೌಟ್ ಆಗಿ ಹೀನಾಯ ಸೋಲುಂಡಿದ್ದರು. ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತಕ್ಕೆ ಸಿಕ್ಕಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎನಿಸಿಕೊಂಡಿರುವ ಈ ಎರಡನೇ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 100ನೇ ಪಂದ್ಯವಾಗಿರುವುದು ವಿಶೇಷ. 4 ಪಂದ್ಯಗಳ ಕ್ರಿಕೆಟ್ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಭಾರತಕ್ಕೆ ಈ ಪಂದ್ಯ ಗೆಲ್ಲುವುದು ಮುಖ್ಯ.

    ಸ್ಕೋರು ವಿವರ (ಮೊದಲ ದಿನ):

    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 72.3 ಓವರ್ 195/10
    (ಮಾರ್ನಸ್ ಲಾಬುಶಗ್ನೆ 48, ಟ್ರಾವಿಸ್ ಹೆಡ್ 38, ಮ್ಯಾಥ್ಯೂ ಹೇಡ್ 30, ನೇತನ್ ಲಯೋನ್ 20 ರನ್ – ಜಸ್​ಪ್ರೀತ್ ಬುಮ್ರಾ 56/4, ರವಿಚಂದ್ರನ್ ಅಶ್ವಿನ್ 35/3, ಮೊಹಮ್ಮದ್ ಸಿರಾಜ್ 40/2)

    ಭಾರತ ಮೊದಲ ಇನ್ನಿಂಗ್ಸ್ 11 ಓವರ್ 36/1)
    (ಶುಭ್ಮನ್ ಗಿಲ್ ಅಜೇಯ 28 ರನ್)

    ತಂಡಗಳು:

    ಆಸ್ಟ್ರೇಲಿಯಾ: ಟಿಮ್ ಪೈನೆ (ನಾಯಕ) ಜೋ ಬರ್ನ್ಸ್, ಮ್ಯಾಥ್ಯೂ ವೇಡ್, ಮಾರ್ನಸ್ ಲಬುಶಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಪ್ಯಾಟ್ ಕುಮಿನ್ಸ್, ಮಿಶೆಲ್ ಸ್ಟಾರ್ಕ್, ನೇತನ್ ಲಯೋನ್, ಜೋಶ್ ಹೇಜಲ್​ವುಡ್.

    ಭಾರತ: ಅಜಿಂಕ್ಯ ರಹಾನೆ (ನಾಯಕ), ಮಯಂಕ್ ಅಗರ್ವಾಲ್, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ಗಗನ ಹನುಮ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಉಮೇಶ್ ಯಾದವ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
    Published by:Vijayasarthy SN
    First published: