ಮೆಲ್ಬೋರ್ನ್(ಡಿ. 26): ಮೊದಲ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ 36 ರನ್ನಿಗೆ ಆಲೌಟ್ ಆಗಿ ಹೀನಾಯ ಸೋಲುಂಡು ಗಾಯಗೊಂಡ ಹುಲಿಯಂತಾಗಿರುವ ಟೀಮ್ ಇಂಡಿಯಾ ಎರಡನೇ ಟೆಸ್ಟ್ನಲ್ಲಿ ತಿರುಗಿಬೀಳುವ ಹವಣಿಕೆಯಲ್ಲಿದೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಅಜಿಂಕ್ಯ ರಹಾನೆ ನಾಯಕತ್ವ ವಹಿಸಿದ್ದು ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಮತ್ತು ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಪದಾರ್ಪಣೆ ಮಾಡಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 40 ರನ್ಗಳ ಒಳಗೆಯೇ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ.
ಬಾಕ್ಸಿಂಗ್ ಡೇ ಟೆಸ್ಟ್, ಸೇಡಿನ ಟೆಸ್ಟ್ ಎಂಬುದರ ಜೊತೆಗೆ ಭಾರತಕ್ಕೆ ಈ ಪಂದ್ಯ ಐತಿಹಾಸಿಕ ಮೈಲಿಗಲ್ಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಆಡುತ್ತಿರುವ 100ನೇ ಟೆಸ್ಟ್ ಪಂದ್ಯ ಇದಾಗಿದೆ. ಅಜಿಂಕ್ಯ ರಹಾನೆ ಅವರ ನಾಯಕತ್ವದ ಅಗ್ನಿಪರೀಕ್ಷೆಯೂ ಆಗಲಿದೆ. ಹಾಗೆಯೇ, ಮಯಂಕ್ ಅಗರ್ವಾಲ್ ಅವರು ತಮ್ಮ ಛಾಪು ಮೂಡಿಸಲು ಮತ್ತೊಂದು ಅಮೂಲ್ಯ ಅವಕಾಶ ಪಡೆದಿದ್ದಾರೆ. ಗಗನ ಹನುಮ ವಿಹಾರಿ ಅವರಿಗೂ ನೆಲೆ ಕಂಡುಕೊಳ್ಳುವ ಅವಕಾಶ ಇದೆ. ಅಪಾರ ಅನುಭವ ಹೊಂದಿದ್ದು ಅನೇಕ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಆಗಿಯೂ ತಂಡದಲ್ಲಿ ಸ್ಥಿರವಾಗಿ ಸ್ಥಾನ ಪಡೆಯಲು ಸಾಧ್ಯವಾಗದ ಆರ್ ಅಶ್ವಿನ್ ಅವರಿಗೆ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಮಾಡುವ ಸವಾಲು ಎದುರಾಗಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಪತನಗೊಂಡ ಮೊದಲ ಮೂರು ವಿಕೆಟ್ಗಳ ಪೈಕಿ ಅಶ್ವಿನ್ ಎರಡು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾದ ಕಾರ್ಯತಂತ್ರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್..!
ಮೊದಲ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ಪ್ರಾರಂಭವಾಗುವವರೆಗೂ ಪಂದ್ಯದ ಮೇಲೆ ಹಿಡಿತ ಹೊಂದಿದ್ದ ಭಾರತ ತಂಡ 36 ರನ್ನಿಗೆ ದಿಢೀರ್ ಕುಸಿತ ಅನುಭವಿಸಿದ್ದು ಈಗಲೂ ಅನೇಕರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಸೋಲಿನ ಸುಳಿಯಿಂದ ಕಾಂಗರೂಗಳ ಪಡೆ ಫೀನಿಕ್ಸ್ನಂತೆ ಮೇಲೇರಿ ಭಾರತೀಯರನ್ನ ಹೆಡೆಮುರಿ ಕಟ್ಟಿತ್ತು. ಮೊದಲ ಟೆಸ್ಟ್ನ ಕಹಿ ಅನುಭವವನ್ನ ಬದಿಗಿರಿಸಿ ಭಾರತ ತಂಡದ ಆಟಗಾರರು ಹೊಸ ಆತ್ಮವಿಶ್ವಾಸದೊಂದಿಗೆ ಎರಡನೇ ಪಂದ್ಯಕ್ಕೆ ಅಡಿ ಇಟ್ಟಿರುವುದು ಹೌದು. ಈ ಐತಿಹಾಸಿಕ ಪಂದ್ಯದಲ್ಲಿ ಭಾರತ ಒಳ್ಳೆಯ ಫಲಿತಾಂಶ ಸಿಗುವ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ: Gautam Gambhir: ಸಾಹ ಅವರನ್ನು ತಂಡದಿಂದ ಕೈಬಿಟ್ಟಿದ್ದು ಸರಿಯಲ್ಲ..!
ತಂಡಗಳು:
ಆಸ್ಟ್ರೇಲಿಯಾ: ಟಿಮ್ ಪೈನೆ (ನಾಯಕ) ಜೋ ಬರ್ನ್ಸ್, ಮ್ಯಾಥ್ಯೂ ವೇಡ್, ಮಾರ್ನಸ್ ಲಬುಶಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಪ್ಯಾಟ್ ಕುಮಿನ್ಸ್, ಮಿಶೆಲ್ ಸ್ಟಾರ್ಕ್, ನೇತನ್ ಲಯೋನ್, ಜೋಶ್ ಹೇಜಲ್ವುಡ್.
ಭಾರತ: ಅಜಿಂಕ್ಯ ರಹಾನೆ (ನಾಯಕ), ಮಯಂಕ್ ಅಗರ್ವಾಲ್, ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ, ಗಗನ ಹನುಮ ವಿಹಾರಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ