news18-kannada Updated:January 2, 2021, 9:18 AM IST
ರಜಿನಿಕಾಂತ್ ಅವತಾರ ತಾಳಿದ ವಾರ್ನರ್
ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರಿಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿ ಒಂದಿಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರೆ, ಭಾರತೀಯ ಹಾಡುಗಳಿಗೆ ಇವರು ಮಾಡುವ ಡ್ಯಾನ್ಸ್ ಕಂಡು ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ವಾರ್ನರ್ ಭಾರತೀಯ ಸಿನಿಮಾದ ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದು, ಇನ್ಸ್ಟಾಗ್ರಾಂನಲ್ಲಿ 5 ಮಿಲಿಯನ್ ಹಿಂಬಾಲಕರನ್ನು ಪಡೆದಿದ್ದಾರೆ.
ಸದಾ ಒಂದಲ್ಲ ಒಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸುವ ವಾರ್ನರ್ ಇತ್ತೀಚೆಗಷ್ಟೆ
ಶಾರುಖ್ ಖಾನ್ ಆಗಿ ಬದಲಾಗಿದ್ದರು. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶಾರೂಖ್ ಖಾನ್ ಅವರ ‘ಡಾನ್ 2’ಚಿತ್ರದ ಸಾಹಸ ದೃಶ್ಯವನ್ನುವಾರ್ನರ್ ಪೋಸ್ಟ್ ಮಾಡಿದ್ದಾರೆ. ಆದರೆ, ಅದರಲ್ಲಿ ಶಾರೂಖ್ ಮುಖದ ಬದಲಿಗೆ ತಮ್ಮ ಮುಖವನ್ನು ರೀಫೇಸ್ ಮಾಡಿದ್ದಾರೆ.
Happy New year: ಈ ವರ್ಷ ಬಿಡುಗಡೆಯಾಗಲಿರುವ ಕನ್ನಡ ಸಿನಿಮಾಗಳಿವು
ಸದ್ಯ ವಾರ್ನರ್ ಅವರ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಈ ಬಾರಿ ವಾರ್ನರ್ ಸೂಪರ್ ಸ್ಟಾರ್ ರಜನಿಕಾಂತ್ ಆಗಿ ಬದಲಾಗಿದ್ದಾರೆ. ಹೌದು, ರಿಫೇಸ್ ಆ್ಯಪ್ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಅವತಾರ ತಾಳಿರುವ ವಾರ್ನರ್, ಇನ್ಸ್ಟಾಗ್ರಾಮ್ಲ್ಲಿ ತಮಾಷೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಜೊತೆಗೆ "ಬಹು ಜನರ ಒತ್ತಾಯದ ಮೇರೆಗೆ ವಿಡಿಯೋ ಹಂಚಿಕೊಂಡಿದ್ದೇನೆ. ಹ್ಯಾಪಿ ನ್ಯೂ ಇಯರ್" ಎಂದು ಬರೆದುಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ವಾರ್ನರ್, ಭಾರತದಲ್ಲಿ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಈ ಹಿಂದೆ ಟಿಕ್ಟಾಕ್ನಲ್ಲಿ ಸಕ್ರಿಯರಾಗಿದ್ದ ವಾರ್ನರ್, ಭಾರತದಲ್ಲಿ ಟಿಕ್ಟಾಕ್ ಬ್ಯಾನ್ ಆದ ನಂತರ ಇದೀಗ ಹೊಸ ಆ್ಯಪ್ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇನ್ನೂ ವಾರ್ನರ್ ಅವರು ತಮ್ಮ ಮುಖವನ್ನು ರೀಫೇಸ್ ಮಾಡಿ ಹೃತಿಕ್ ರೋಷನ್ ವಿಡಿಯೋ ಕೂಡ ಮಾಡಿದ್ದರು. ಇನ್ಸ್ಟಾದಲ್ಲಿ ಈ ವಿಡಿಯೋ 2.3 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದಿತ್ತು. ಸದ್ಯ ತಲೈವಾ ರಜನಿ ವಿಡಿಯೋ ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗುತ್ತಿದೆ.
India vs Australia: ಭಾರತ - ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ..!
ಸದ್ಯ ವಾರ್ನರ್ ಅವರು ಇಂಜುರಿಗೆ ತುತ್ತಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಮೂರನೇ ಟೆಸ್ಟ್ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಭಾರತ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ವಾರ್ನರ್ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಎಡಗೈ ಬ್ಯಾಟ್ಸ್ಮನ್ ಇನ್ನುಳಿದ ಎರಡು ಏಕದಿನ ಪಂದ್ಯಗಳು, ಟಿ-20 ಸರಣಿ ಹಾಗೂ ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು. ಎರಡನೇ ಪಂದ್ಯಕ್ಕೆ ಅವರು ತಂಡಕ್ಕೆ ಮರಳಲಿದ್ದಾರೆಂದು ಭಾವಿಸಲಾಗಿತ್ತು. ಆದರೆ, ಅವರು ಇನ್ನೂ ಸಂಪೂರ್ಣ ಫಿಟ್ ಆಗದ ಕಾರಣ ಮತ್ತೆ ವಿಶ್ರಾಂತಿಗೆ ತೆರಳಿದರು.
Published by:
Vinay Bhat
First published:
January 2, 2021, 9:18 AM IST