Australia A vs India A Practice match: ಅಭ್ಯಾಸ ಪಂದ್ಯದಲ್ಲಿ ಕುಸಿದ ಭಾರತ: 150 ರನ್​ಗೂ ಮುನ್ನವೇ 6 ವಿಕೆಟ್ ಪತನ

ಈ ಸಂದರ್ಭ ತಂಡಕ್ಕೆ ಪೂಜಾರ ಹಾಗೂ ನಾಯಕ ಅಜಿಂಕ್ಯಾ ರಹಾನೆ ಆಸರೆಯಾಗಿ ನಿಂತರು. ಎಚ್ಚರಿಕೆಯಿಂದ ಆಸೀಸ್ ಬೌಲರ್​ಗಳನ್ನು ಎದುರಿಸಿದ ಈ ಜೋಡಿ 76 ರನ್​ಗಳ ಜೊತೆಯಾಟ ಆಡಿತು.

Australia A vs India A, 1st Practice

Australia A vs India A, 1st Practice

 • Share this:
  ಡಿಸೆಂಬರ್ 17 ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಭಾರತ ತಂಡ ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಸಿಡ್ನಿಯ ಡ್ರುಮ್ನೊಯ್​ನ್ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಭಾರತ ಎ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. 150 ರನ್​ಗೂ ಮುನ್ನವೇ 6 ವಿಕೆಟ್ ಕಳೆದುಕೊಂಡಿದೆ.

  ಓಪನರ್​ಗಳಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಶುಭ್ಮನ್ ಗಿಲ್ ಖಾತೆ ತೆರೆಯದೆ ಶೂನ್ಯಕ್ಕೆ ನಿರ್ಗಮಿಸಿದರು. ಹೀಗೆ ಆರಂಭದಲ್ಲೇ ಮೊದಲೆರಡು ವಿಕೆಟ್ ಕಳೆದುಕೊಂಡಿತು. ಬಳಿಕ ಚೇತೇಶ್ವರ್ ಪೂಜಾರ ಹಾಗೂ ಹನುಮಾ ವಿಹಾರಿ ಇನ್ನಿಂಗ್ಸ್ ಕಟ್ಟಲು ಹೊರಟರಾದರೂ ಯಶಸ್ವಿಯಾಗಲಿಲ್ಲ. ವಿಹಾರಿ 15 ರನ್​ಗೆ ನಿರ್ಗಮಿಸಿದರು.

  ಈ ಸಂದರ್ಭ ತಂಡಕ್ಕೆ ಪೂಜಾರ ಹಾಗೂ ನಾಯಕ ಅಜಿಂಕ್ಯಾ ರಹಾನೆ ಆಸರೆಯಾಗಿ ನಿಂತರು. ಎಚ್ಚರಿಕೆಯಿಂದ ಆಸೀಸ್ ಬೌಲರ್​ಗಳನ್ನು ಎದುರಿಸಿದ ಈ ಜೋಡಿ 76 ರನ್​ಗಳ ಜೊತೆಯಾಟ ಆಡಿತು. ಪೂಜಾರ 140 ಎಸೆತಗಳಲ್ಲಿ 54 ರನ್ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೇ ವೃದ್ದಿಮಾನ್ ಸಾಹ ಸೊನ್ನೆ ಸುತ್ತಿದರೆ, ಆರ್. ಅಶ್ವಿನ್ 5 ರನ್​ಗೆ ಸುಸ್ತಾದರು.

  ಸದ್ಯ ಅಜಿಂಕ್ಯಾ ರಹಾನೆ ಅರ್ಧಶತಕ ಸಿಡಿಸಿ ಟೊಂಕಕಟ್ಟಿ ನಿಂತಿದ್ದು ಇವರಿಗೆ ಕುಲ್ದೀಪ್ ಯಾದವ್ ಸಾತ್ ನೀಡುತ್ತಿದ್ದಾರೆ. ಆಸೀಸ್ ಎ ಪರ ಜೇಮ್ಸ್ ಪ್ಯಾಟಿನ್ಸನ್ 3 ವಿಕೆಟ್ ಕಿತ್ತಿದ್ದಾರೆ.

  ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಟ್ಟು 4 ಪಂದ್ಯಗಳ ಐದು ದಿನಗಳ ಟೆಸ್ಟ್​ ಸರಣಿ ಆಡಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ. ಈ ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.

  ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್​ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್​ ಬ್ರಿಸ್ಬೇನ್​ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ. ಎರಡು ಹಾಗೂ ಮೂರನೇ ಟೆಸ್ಟ್ ಮುಂಜಾನೆ 5 ಗಂಟೆಗೆ ಶುರುವಾದರೆ, ಅಂತಿಮ ಟೆಸ್ಟ್​ 5:30ಕ್ಕೆ ಆರಂಭವಾಗಲಿದೆ.

  ಇತ್ತ ಟೀಂ ಇಂಡಿಯಾ ಇಂದು ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ-20 ಪಂದ್ಯ ಆಡಲಿದೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.
  Published by:Vinay Bhat
  First published: