ಅದು 2003ರ ವಿಶ್ವಕಪ್. ಫೆಬ್ರವರಿ 26 ರಂದು ದಕ್ಷಿಣ ಆಫ್ರಿಕಾದ ಕಿಂಗ್ಸ್ಮೇಡ್ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲೇ ಆತ್ಮವಿಶ್ವಾಸದಿಂದ ಪುಟಿದೇಳುತ್ತಿದ್ದ ಟೀಮ್ ಇಂಡಿಯಾಗೆ ಇಂಗ್ಲೆಂಡ್ ಕಠಿಣ ಸವಾಲು ಎಂಬುದರ ಸಂಪೂರ್ಣ ಅರಿವಿತ್ತು. ಹೀಗಾಗಿಯೇ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ದಾದಾ ಅವರ ಲೆಕ್ಕಚಾರವನ್ನು ತಲೆಕೆಳಗಾಗಿಸುವಂತೆ ಇಂಗ್ಲೆಂಡ್ ಬೌಲರುಗಳು ಪ್ರದರ್ಶನ ನೀಡಿದ್ದರು. ಪರಿಣಾಮ ಭಾರತ 50 ಓವರ್ಗಳಲ್ಲಿ ಗಳಿಸಿದ್ದು ಬರೀ 250 ರನ್ ಮಾತ್ರ.
ಮತ್ತೊಂದೆಡೆ ಟ್ರೆಸ್ಕೊಥಿಕ್, ಮೈಕೆಲ್ ವಾನ್, ನಾಸೀರ್ ಹುಸೇನ್, ಕಾಲಿಂಗ್ವುಡ್ ರಂತಹ ಬ್ಯಾಟ್ಸ್ಮನ್ಗಳನ್ನು ಹೊಂದಿದ್ದ ಇಂಗ್ಲೆಂಡ್ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ 251 ರನ್ ಗುರಿ ಪಡೆದ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಿಗೆ ಶಾಕ್ ನೀಡಿ ಟೀಮ್ ಇಂಡಿಯಾ ಎಡಗೈ ವೇಗಿ ಆಶಿಶ್ ನೆಹ್ರಾ ಹೊಸ ಇತಿಹಾಸ ಬರೆದಿದ್ದರು.
ಹೌದು, 10 ಓವರ್ಗಳಲ್ಲಿ ಕೇವಲ 23 ರನ್ ನೀಡಿ ನೆಹ್ರಾ 6 ವಿಕೆಟ್ ಉರುಳಿಸಿದ್ದರು. ಈ ಅದ್ಭುತ ಬೌಲಿಂಗ್ ಪರಿಣಾಮ ಇಂಗ್ಲೆಂಡ್ ಕೇವಲ 168 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿತು. ಮರುದಿನ ಎಲ್ಲಾ ಮಾಧ್ಯಮಗಳಲ್ಲೂ ನೆಹ್ರಾ ಮಿಂಚಿದ್ದರು. ಆದರೆ ಈ ಸಾಧನೆಯ ಹಿಂದೆ ಒಂದು ನೋವಿನ ಕಥೆಯಿತ್ತು ಎಂಬುದು ಅನೇಕರಿಗೆ ಗೊತ್ತಿರಲಿಲ್ಲ. ಈ ವಿಷಯವನ್ನು ಇದೀಗ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಬಹಿರಂಗಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಆಶಿಶ್ ನೆಹ್ರಾ ಅವರ ಕಾಲು ಊದಿಕೊಂಡಿತ್ತು. ಅಭ್ಯಾಸದ ವೇಳೆ ತಮ್ಮ ಕಾಲನ್ನು ಐಸ್ ಬಕೆಟ್ನಲ್ಲಿಟ್ಟು ಪರಿಹಾರ ಕಂಡುಕೊಳ್ಳಲು ಯತ್ನಿಸಿದ್ದರು. ಏಕೆಂದರೆ ಕಾಲು ಊದಿಕೊಂಡಿದ್ದಾಗ ಅವರಿಗೆ ಶೂ ಹಾಕಲು ಕಷ್ಟವಾಗುತ್ತಿತ್ತು. ಆದರೆ ಮುಂದಿನ ದಿನ ಇಂಗ್ಲೆಂಡ್ ವಿರುದ್ಧ ಮಹತ್ವದ ಪಂದ್ಯ. ನೋವಿನಿಂದ ಬಳಲುತ್ತಿದ್ದ ನೆಹ್ರಾ ಊದಿಕೊಂಡ ಕಾಲಿನೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದರು.
ನಾಯಕ ಸೌರವ್ ಗಂಗೂಲಿ ಕೂಡ ನೆಹ್ರಾ ಪರ ಅಪಾರ ವಿಶ್ವಾಸವಿರಿಸಿಕೊಂಡಿದ್ದರು. ಹೀಗಾಗಿ ನೋವಿನ ನಡುವೆ ನೆಹ್ರಾ ಕಣಕ್ಕಿಳಿಯುವುದು ಅನಿವಾರ್ಯವಾಗಿತ್ತು. ಸವಾಲನ್ನು ಸ್ವೀಕರಿಸಿ ಮೈದಾನಕ್ಕಿಳಿದ ನೆಹ್ರಾ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳ ವಿಕೆಟ್ ಉರುಳಿಸಿದರು. ತಮ್ಮ ಮೇಲೆ ನಾಯಕ ಇರಿಸಿದ್ದ ನಂಬಿಕೆಯನ್ನು ಹುಸಿಗೊಳಿಸದೇ ಭಾರತಕ್ಕೆ ಜಯ ತಂದುಕೊಟ್ಟರು. ಹೀಗೆ ಗಾಯದ ನಡುವೆ ಆಡಿ ಟೀಮ್ ಇಂಡಿಯಾ ಗೆಲುವಿಗೆ ಕಾರಣರಾದ ನೆಹ್ರಾಗಿಂತ ಶ್ರೇಷ್ಠ ವ್ಯಕ್ತಿ ಮತ್ತೊಬ್ಬರಿಲ್ಲ. ಈ ಮೂಲಕ ಆಶಿಶ್ ನೆಹ್ರಾ ಗಾಯ ಎಂಬುದಕ್ಕೆ ದೇಹಕ್ಕೆ ಮಾತ್ರ, ದೃಢ ಸಂಕಲ್ಪಕ್ಕಲ್ಲ ಎಂಬುದನ್ನು ಇಡೀ ವಿಶ್ವಕ್ಕೆ ಸಾರಿದ್ದರು ಆಕಾಶ್ ಚೋಪ್ರಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ