ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದೆ. ಈಗಾಗಲೇ ಆರೋನ್ ಫಿಂಚ್ ಪಡೆ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಇತ್ತ ಮಾಡು ಇಲ್ಲವೇ ಮಡಿ ಎಂಬಂತಿದ್ದ ಎರಡನೇ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ತೆಗೆದುಕೊಂಡ ನಿರ್ಧಾರಗಳ ಭಾರೀ ಟೀಕೆಗಳು ಕೇಳಿ ಬರುತ್ತಿವೆ. ಅದರಲ್ಲೂ ಟೀಮ್ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ಅವರು ಕೊಹ್ಲಿ ಅವರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ದದ 2ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪದೇ ಪದೇ ಬೌಲಿಂಗ್ ಬದಲಿಸಿರುವುದೇ ತಂಡಕ್ಕೆ ಮುಳುವಾಯಿತು ಎಂದು ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಿದ್ದರು. 4 ಓವರ್ ಬೌಲಿಂಗ್ ಮಾಡಿದ ಅವರು ಸ್ಟೀವ್ ಸ್ಮಿತ್ ಅವರ ವಿಕೆಟ್ ಸಹ ಪಡೆದಿದ್ದರು. ಅತ್ತ ಮಯಾಂಕ್ ಅಗರ್ವಾಲ್ಗೆ ಬೌಲಿಂಗ್ ನೀಡಿ ಪ್ರಯೋಗ ನಡೆಸಿದರು. ಆದರೆ ಆರಂಭದಲ್ಲೇ ತಂಡ ಬೌಲರುಗಳನ್ನು ಬದಲಿಸಿ ತಪ್ಪು ಮಾಡಿದ್ದರು.
ಆರಂಭದಲ್ಲಿ ಮೊಹಮ್ಮದ್ ಶಮಿ ಅವರಿಗೆ 2 ನೀಡಿ ಬಳಿಕ ನವದೀಪ್ ಸೈನಿಯನ್ನು ದಾಳಿಗಿಳಿಸಿದರು. ಆದರೆ ಹೊಸ ಚೆಂಡಿನಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗೆ ಕೇವಲ 2 ಓವರ್ ಮಾಡಲು ಅವಕಾಶ ನೀಡಿದ್ದರು. ಇದು ಯಾವ ಕಾರಣಕ್ಕೆ ಎಂಬುದು ಅರ್ಥವಾಗಿಲ್ಲ. ಕೊಹ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮೊದಲ ಪಂದ್ಯದಲ್ಲೂ ಇದೇ ತಪ್ಪುಗಳನ್ನು ಮಾಡಿದ್ದರು ಎಂದು ನೆಹ್ರಾ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ