Ashes 2019: ನೂತನ ದಾಖಲೆಯೊಂದಿಗೆ ಆಸೀಸ್​ಗೆ ಮತ್ತೆ ಆಸರೆಯಾದ ಸ್ಮಿತ್!

145 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಸ್ಮಿತ್ ಆಟ 80 ರನ್​ಗೆ ಅಂತ್ಯವಾಯಿತು. ಈ ಮೂಲಕ 68.5 ಓವರ್​ನಲ್ಲಿ ಆಸ್ಟ್ರೇಲಿಯಾ 225 ರನ್​ಗೆ ಆಲೌಟ್ ಆಯಿತು.

Vinay Bhat | news18-kannada
Updated:September 14, 2019, 8:01 AM IST
Ashes 2019: ನೂತನ ದಾಖಲೆಯೊಂದಿಗೆ ಆಸೀಸ್​ಗೆ ಮತ್ತೆ ಆಸರೆಯಾದ ಸ್ಮಿತ್!
ಸ್ಟೀವ್ ಸ್ಮಿತ್
  • Share this:
ಬೆಂಗಳೂರು (ಸೆ. 14): ಲಂಡನ್​ನ ಓವಲ್ ಮೈದಾನದಲ್ಲಿ ಸಾಗುತ್ತಿರುವ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಅಂತಿಮ 5ನೇ ಟೆಸ್ಟ್​​ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಮತ್ತೆ ಸ್ಟೀವ್ ಸ್ಮಿತ್ ಆಸರೆಯಾದರು. 225 ರನ್ ಗಳಿಸಲು ಸಹಕಾರ ನೀಡಿದ ಸ್ಮಿತ್ ಅರ್ಧಶತಕ ಪೂರೈಸಿ ಹೊಸ ದಾಖಲೆ ಬರೆದರು. ಎರಡನೇ ದಿನದಾಟಕ್ಕೆ ಇಂಗ್ಲೆಂಡ್ ವಿಕೆಟ್ ಕಳೆದುಕೊಳ್ಳದೆ 9 ರನ್ ಕಲೆಹಾಕಿದೆ. ಜೊತೆಗೆ 78 ರನ್​ಗಳ ಮುನ್ನಡೆಯಲ್ಲಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಆಂಗ್ಲರು ಜಾಸ್ ಬಟ್ಲರ್​​ರ 70 ಹಾಗೂ ನಾಯಕ ಜೋ ರೂಟ್​ರ 57 ರನ್​ಗಳ ನೆರವಿನಿಂದ 294 ರನ್​ಗೆ ಆಲೌಟ್ ಆಗಿತ್ತು. ಆಸೀಸ್ ಪರ ಮಿಚೆಲ್ ಮಾರ್ಶ್​​ 5 ವಿಕೆಟ್ ಕಿತ್ತು ಮಿಂಚಿದ್ದರು.

ಬಳಿಕ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಮತ್ತದೆ ಕಳಪೆ ಆರಂಭ ಪಡೆದುಕೊಂಡಿತು. ಡೇವಿಡ್ ವಾರ್ನರ್​ ವೈಫಲ್ಯ ಅನುಭವಿಸಿ ಕೇವಲ 5 ರನ್​ಗೆ ಔಟ್ ಆದರೆ, ಮರ್ಕಸ್ ಹ್ಯಾರಿಸ್ 3 ರನ್​ಗೆ ನಿರ್ಗಮಿಸಿದರು. ಈ ಸಂದರ್ಭ ಒಂದಾದ ಲಬುಸ್ಚಗ್ನೆ ಹಾಗೂ ಸ್ಟೀವ್ ಸ್ಮಿತ್ ತಂಡಕ್ಕೆ ಆಸರೆಯಾದರು.

ಬೆಂಗಳೂರಿನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಟಿ-20 ಪಂದ್ಯ; ಟಿಕೆಟ್ ಬೇಕಾದಲ್ಲಿ ಹೀಗೆ ಮಾಡಿ

ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ 69 ರನ್​ಗಳ ಕಾಣಿಕೆ ನೀಡಿತು. ಲಬುಸ್ಚಗ್ನೆ 48 ರನ್ ಗಳಿಸಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಯಾರು ಕ್ರೀಸ್ ಕಚ್ಚಿ ಆಡಲಿಲ್ಲ. ಸ್ಟೀವ್ ಸ್ಮಿತ್ ಮತ್ತೆ ಏಕಾಂಗಿ ಹೋರಾಟ ನಡೆಸಿದರು. ರನ್ ಗತಿಯನ್ನು ಏರಿಸಿದ ಸ್ಮಿತ್ ಮತ್ತೊಂದು ಅರ್ಧಶತಕ ಸಿಡಿಸಿದರು.

ಈ ಮೂಲಕ ಸ್ಮಿತ್ ಮತ್ತೊಂದು ದಾಖಲೆ ಬರೆದರು. ಒಂದು ತಂಡದ ಎದುರು ಸತತವಾಗಿ ಅತಿ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಪೂರೈಸಿದ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಈ ಮೊದಲು ಇಂಗ್ಲೆಂಡ್ ವಿರುದ್ಧವೇ ಪಾಕಿಸ್ತಾನ ತಂಡದ ಮಾಜಿ ಆಟಗಾರ ಇಂಜಮಾಮ್ ಉಲ್ ಹಖ್ ಸತತ 9 ಬಾರಿ 50+ ರನ್ ಗಳಿಸಿದ್ದರು. ಸದ್ಯ ಸ್ಮಿತ್ ಈ ದಾಖಲೆಯನ್ನು ಪುಡಿ ಮಾಡಿದ್ದು ಇಂಗ್ಲೆಂಡ್ ವಿರುದ್ಧ ಸತತ 10ನೇ ಬಾರಿ 50+ ರನ್ ಬಾರಿಸಿ ನೂತನ ದಾಖಲೆ ಬರೆದಿದ್ದಾರೆ.

 


145 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಸ್ಮಿತ್ ಆಟ 80 ರನ್​ಗೆ ಅಂತ್ಯವಾಯಿತು. ಈ ಮೂಲಕ 68.5 ಓವರ್​ನಲ್ಲಿ ಆಸ್ಟ್ರೇಲಿಯಾ 225 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೋಫ್ರಾ ಆರ್ಚೆರ್ 6 ವಿಕೆಟ್ ಕಿತ್ತು ಮಿಂಚಿದರೆ, ಸ್ಯಾಮ್ ಕುರ್ರನ್ 3 ವಿಕೆಟ್ ಪಡೆದರು.

69 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ಕೈಚೆಲ್ಲದೆ 9 ರನ್ ಗಳಿಸಿದೆ. ರಾರಿ ಬರ್ನ್ಸ್​​ 4 ಹಾಗೂ ಜೋ ಡೆನ್ಲಿ 1 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಇಂಗ್ಲೆಂಡ್ 78 ರನ್​ಗಳ ಮುನ್ನಡೆಯಲ್ಲಿದೆ.

First published: September 14, 2019, 8:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading