ವಿಶ್ವಕಪ್ ಮಧ್ಯದಲ್ಲೇ ಕ್ರಿಕೆಟ್​ಗೆ ಅಫ್ಘಾನ್ ವಿದಾಯ; ನಮೀಬಿಯಾ ಆಟಗಾರರಿಂದ ಗಾರ್ಡ್ ಆಫ್ ಆನರ್

Asghar Afghan retirement- 2009ರಿಂದ 12 ವರ್ಷ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಫ್ಘಾನಿಸ್ತಾನದ ಖಾಯಂ ಸದಸ್ಯರಾಗಿದ್ದ ಮೊಹಮ್ಮದ್ ಅಸ್ಗರ್ ಸ್ಟಾನಿಕ್​ಜಾಯ್ ಇಂದು ನಿವೃತ್ತರಾಗಿದ್ದಾರೆ. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಅವರು ಭಾವುಕಗೊಂಡು ಕಣ್ಣೀರಿಟ್ಟರು.

ಅಸ್ಗರ್ ಅಫ್ಘಾನ್

ಅಸ್ಗರ್ ಅಫ್ಘಾನ್

 • Share this:
  ಅಬುಧಾಬಿ, ಅ. 31: ಅಫ್ಘಾನಿಸ್ತಾನ್ ತಂಡದ ಮಾಜಿ ನಾಯಕ ಅಸ್ಗರ್ ಅಫ್ಘಾನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಟಿ20 ವಿಶ್ವಕಪ್​ನ ಎರಡನೇ ಗುಂಪಿನಲ್ಲಿ ನಮೀಬಿಯಾ ವಿರುದ್ಧದ ಇಂದಿನ ಪಂದ್ಯವೇ ಅವರಿಗೆ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದೆ. ಇಂದು ಅಸ್ಗರ್ ಅಫ್ಘಾನ್ ಬ್ಯಾಟ್ ಮಾಡಲು ಮೈದಾನದೊಳಗೆ ಕಾಲಿಡುತ್ತಿರುವಂತೆಯೇ ಅಫ್ಘಾನ್ ಆಟಗಾರರೆಲ್ಲರೂ ಬ್ಯಾಟ್ ಮೇಲಿಡಿದು ಗೌರವಾರ್ಪಣೆ ಸಲ್ಲಿಸಿದರು. ನಮೀಬಿಯಾ ಆಟಗಾರರೂ ಗಾರ್ಡ್ ಆಫ್ ಆನರ್ ನೀಡಿದರು.

  ಅಸ್ಘರ್ ಅಫ್ಘಾನ್ ತಮ್ಮ ಕೊನೆಯ ಪಂದ್ಯದಲ್ಲಿ 23 ಎಸೆತಗಳಿಂದ 31 ರನ್ ಗಳಿಸಿ ನಮೀಬಿಯಾದ ಬೌಲರ್ ಟ್ರಂಪಲ್​ಮಾನ್ ಅವರಿಗೆ ಔಟಾಗಿ ಹೋದರು. ಅಷ್ಟರಲ್ಲಿ ಅವರು ತಮ್ಮ ನಾಯಕ ಮೊಹಮ್ಮದ್ ನಬಿ ಜೊತೆ ಸೇರಿ ತಂಡದ ಸ್ಕೋರನ್ನು 150ರ ಗಡಿ ಸಮೀಪ ಕೊಂಡೊಯ್ತಿದ್ದರು. ಅಫ್ಘಾನಿಸ್ತಾನ್ ಅಂತಿಮವಾಗಿ 20 ಓವರ್​ನಲ್ಲಿ 160 ರನ್ ಗಳಿಸಿತು.

  ಮೊದಲೇ ಘೋಷಣೆ ಆಗಿತ್ತು ನಿವೃತ್ತಿ ನಿರ್ಧಾರ:

  33 ವರ್ಷದ ಅಸ್ಘರ್ ಅಫ್ಘಾನ್ ಇಂದು ನಿವೃತ್ತರಾಗುತ್ತಿರುವ ವಿಚಾರ ಮೊದಲೇ ತಿಳಿಸಲಾಗಿತ್ತು. ಹೀಗಾಗಿ, ಅವರಿಗೆ ಮೈದಾನದಲ್ಲೇ ಒಳ್ಳೆಯ ಬೀಳ್ಕೊಡುಗೆ ಮತ್ತು ಗೌರವ ಸಿಕ್ಕಿತು.

  “ಅಫ್ಘಾನಿಸ್ತಾನ್​ನ ಮಾಜಿ ನಾಯಕ ಅಸ್ಗರ್ ಅಫ್ಘಾನ್ ಟಿ20 ವಿಶ್ವಕಪನ್​ನಲ್ಲಿ ನಮೀಬಿಯಾ ವಿರುದ್ಧದ ಪಂದ್ಯದ ಬಳಿಕ ಎಲ್ಲಾ ಮಾದರಿ ಕ್ರಿಕೆಟ್​ನಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ” ಎಂದು ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ ಎಸಿಬಿ ಮುಂಚೆಯೇ ತಿಳಿಸಿತ್ತು.

  “ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿಯು ಅಸ್ಗರ್ ಅವರ ನಿರ್ಧಾರವನ್ನು ಗೌರವಿಸುತ್ತದೆ. ದೇಶಕ್ಕಾಗಿ ಅವರು ಸಲ್ಲಿಸಿರುವ ಸೇವೆಗಾಗಿ ಕೃತಜ್ಞತೆ ವ್ಯಕ್ತಪಡಿಸುತ್ತದೆ. ಅವರ ಸ್ಥಾನ ತುಂಬಲು ಅಫ್ಘಾನ್ ಕ್ರಿಕೆಟಿಗರು ಬಹಳ ಶ್ರಮ ಹಾಕಬೇಕಾಗುತ್ತದೆ” ಎಂದು ಎಸಿಬಿ ಹೇಳಿದೆ.

  ಇದನ್ನೂ ಓದಿ: Babar Azam- ಅಲ್ಲಿ ವೆಂಟಿಲೇಟರ್​ನಲ್ಲಿ ಅಮ್ಮ; ಇಲ್ಲಿ ವಿಶ್ವಕಪ್; ಸಂಕಷ್ಟದಲ್ಲೂ ದೃತಿಗೆಡದ ಬಾಬರ್

  ಧೋನಿ ದಾಖಲೆ ಮುರಿದ ಅಸ್ಘರ್:

  ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನ ಸತತವಾಗಿ ಗೆದ್ದ ದಾಖಲೆ ಅಸ್ಘರ್ ಅಫ್ಘಾನ್ ಅವರದ್ದಾಗಿದೆ. ಈ ವಿಚಾರದಲ್ಲಿ ಅವರು ಎಂಎಸ್ ಧೋನಿ ಅವರಿಗಿಂತ ಒಂದು ಹೆಚ್ಚು ಪಂದ್ಯ ಗೆದ್ದಿದ್ದಾರೆ.

  ಅಸ್ಘರ್ ಅಫ್ಘಾನ್ ಅವರು 2009ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಆಗಿನಿಂದ ಅವರು ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 6 ಟೆಸ್ಟ್, 114 ಏಕದಿನ ಮತ್ತು 74 ಟಿ20 ಪಂದ್ಯಗಳನ್ನ ಆಡಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 44 ಸರಾಸರಿಯಂತೆ 440 ರನ್ ಗಳಿಸಿದ್ದಾರೆ. ಓಡಿಐ ಕ್ರಿಕೆಟ್​ನಲ್ಲಿ 24.73 ಸರಾಸರಿಯಲ್ಲಿ 2,424 ರನ್ ಗಳಿಸಿದ್ಧಾರೆ. ಟಿ20 ಕ್ರಿಕೆಟ್​ನಲ್ಲಿ 21.94 ಸರಾಸರಿಯಲ್ಲಿ 1,382 ರನ್ ಕಲೆಹಾಕಿದ್ದಾರೆ.

  ಸ್ಟಾನಿಕ್​ಝೈ ಬದಲು ಅಫ್ಘಾನ್ ಹೆಸರು:

  ಅಫ್ಘಾನಿಸ್ತಾನ್ ರಾಜಧಾನಿ ಕಾಬೂಲ್​ನವರಾದ ಮೊಹಮ್ಮದ್ ಅಸ್ಘರ್ ಅಫ್ಘಾನ್ ಅವರ ಮೂಲ ಹೆಸರು ಮೊಹಮ್ಮದ್ ಅಸ್ಘರ್ ಸ್ಟಾನಿಕ್​ಜೈ ಎಂದಿತ್ತು. 2018ರಲ್ಲಿ ಭಾರತ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದ ಬಳಿಕ ಇವರ ಹೆಸರಿನಲ್ಲಿದ್ದ ಸ್ಟಾನಿಕ್​ಝೈ ಬದಲು ಅಫ್ಘಾನ್ ಎಂದಿಟ್ಟುಕೊಂಡರು.

  ಜೂನಿಯರ್ ಕ್ರಿಕೆಟ್​ನಿಂದ ಬೆಳೆದು ಬಂದವರು:

  17 ವರ್ಷ ವಯೋಮಾನದವರ ಕ್ರಿಕೆಟ್​ನಿಂದಲೂ ಅಫ್ಘಾನಿಸ್ತಾನ್ ತಂಡದಲ್ಲಿ ಆಡುತ್ತಿರುವ ಅಸ್ಘರ್ ಅಫ್ಘಾನ್ 2009ರಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯ ಆಡಿದರು. 2018 ಜೂನ್ 14ರಂದು ಬೆಂಗಳೂರಿನಲ್ಲಿ ಭಾರತದ ವಿರುದ್ಧ ಅಫ್ಘಾನಿಸ್ತಾನ ಚೊಚ್ಚಲ ಟೆಸ್ಟ್ ಪಂದ್ಯ ಆಡಿತು. ಆ ಪಂದ್ಯದಲ್ಲಿ ಅಸ್ಘರ್ ಅಫ್ಘಾನ್ ನಾಯಕರಾಗಿದ್ದರು. ಆ ಸಂದರ್ಭದಲ್ಲಿ ಅಸ್ಗರ್ ಅವರು ಎಲ್ಲಾ ಮೂರು ಮಾದರಿ ಕ್ರಿಕೆಟ್ ತಂಡಗಳಿಗೂ ನಾಯಕರಾಗಿದ್ದರು.

  ಇದನ್ನೂ ಓದಿ: Harbhajan Singh- ಹರ್ಭಜನ್ ಛೇಡಿಸಿದ ಈ ಪಾಕಿಸ್ತಾನೀ ಪತ್ರಕರ್ತೆಗೆ ಸಿಕ್ತು ಸರಿಯಾದ ಉತ್ತರ

  2019ರ ವಿಶ್ವಕಪ್​ಗೆ ಮೊದಲು ಅಫ್ಘಾನಿಸ್ತಾನದಲ್ಲಿ ಸ್ಪ್ಲಿಟ್ ಕ್ಯಾಪ್ಟನ್ಸಿ ಪ್ರಯೋಗ ನಡೆಯಿತು. ಟೆಸ್ಟ್ ತಂಡಕ್ಕೆ ಬೇರೆ ನಾಯಕ, ಓಡಿಐಗೆ ಬೇರೆ ಮತ್ತು ಟಿ20 ತಂಡಕ್ಕೆ ಬೇರೆ ನಾಯಕರನ್ನ ಆಯ್ಕೆ ಮಾಡಲಾಯಿತು. ಟೆಸ್ಟ್ ಕ್ರಿಕೆಟ್​ಗೆ ರೆಹಮತ್ ಶಾ, ಏಕದಿನ ಕ್ರಿಕೆಟ್ ತಂಡಕ್ಕೆ ಗುಲ್ಬದಿನ್ ನಯಿಬ್ ಮತ್ತು ಟಿ20 ತಂಡಕ್ಕೆ ರಷೀದ್ ಖಾನ್ ಅವರಿಗೆ ನಾಯಕತ್ವ ಕೊಡಲಾಯಿತು. ಇದೀಗ ಮೊಹಮ್ಮದ್ ನಬಿ ಅವರು ಟಿ20 ವಿಶ್ವಕಪ್​ನಲ್ಲಿ ಅಫ್ಘಾನ್ ತಂಡದ ನಾಯಕರಾಗಿದ್ದಾರೆ.

  ಮೊಹಮ್ಮದ್ ಅಸ್ಗರ್ ಅಫ್ಘಾನ್ ಅವರ ಸಹೋದರ ಕರೀಮ್ ಜನತ್ ಅವರೂ ಟಿ20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ತಂಡದಲ್ಲಿ ಆಡುತ್ತಿದ್ದಾರೆ.
  Published by:Vijayasarthy SN
  First published: