ಕೆಲವರು ಹಾಗೆ...ಅವರು ಎಂಟ್ರಿ ಕೊಡುವ ತನಕ ಇಂತವರೊಬ್ಬರು ಇದ್ದಾರೆ ಎಂಬುದೇ ತಿಳಿದಿರುವುದಿಲ್ಲ. ಅಂತಹ ಸಾಲಿಗೆ ಹೊಸ ಸೇರ್ಪಡೆ ಅರ್ಜಾನ್ ನಾಗ್ವಾಸ್ವಲ್ಲಾ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗಾಗಿ ಆಯ್ಕೆ ಮಾಡಲಾದ ಸ್ಟ್ಯಾಂಡ್ ಬೈ ಆಟಗಾರರಲ್ಲಿ ಅರ್ಜಾನ್ ಕೂಡ ಒಬ್ಬರು. ಇನ್ನುಳಿದವರು ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್. ಈ ಮೂವರು ಈಗಾಗಲೇ ಐಪಿಎಲ್ ಹಾಗೂ ಇನ್ನಿತರ ಟೂರ್ನಿಗಳ ಮೂಲಕ ಎಲ್ಲರಿಗೂ ಗೊತ್ತಿರುವವರೇ. ಆದರೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳದೇ ಇದೀಗ ದಿಢೀರಣೆ ಟೀಮ್ ಇಂಡಿಯಾ ಬಳಗಕ್ಕೆ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ ಅರ್ಜಾನ್.
23 ವರ್ಷದ ಅರ್ಜಾನ್ ಗುಜರಾತ್ ಮೂಲದವರು. ಎಡಗೈ ವೇಗದ ಬೌಲಿಂಗ್ ಮೂಲಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಭರ್ಜರಿ ಪ್ರದರ್ಶನ ನೀಡಿದ್ದರು. ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕೇವಲ 19 ರನ್ಗಳಿಗೆ 6 ವಿಕೆಟ್ ಉರುಳಿಸಿದ್ದರು. ಈ ಮಾರಕ ದಾಳಿಯಿಂದ ಆ ಪಂದ್ಯವನ್ನು ಗುಜರಾತ್ 29 ರನ್ಗಳಿಂದ ಗೆದ್ದುಕೊಂಡಿತ್ತು. ಅಂದೇ ಬಿಸಿಸಿಐ ಆಯ್ಕೆಗಾರರು ಈ ಯುವ ವೇಗಿಯ ಮೇಲೆ ಕಣ್ಣಿಟ್ಟಿದ್ದರು.
ಏಕೆಂದರೆ ಈತ ಇದುವರೆಗೆ ಕೇವಲ 16 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರೂ ಉರುಳಿಸಿದ್ದು ಬರೋಬ್ಬರಿ 62 ವಿಕೆಟ್ಗಳು. ಜೊತೆಗೆ 15 ಟಿ20 ಪಂದ್ಯಗಳಿಂದ 21 ವಿಕೆಟ್ ಪಡೆದಿದ್ದಾರೆ. ಇನ್ನು ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಗುಜರಾತ್ನ ಗೆಲುವಿನಲ್ಲಿ ಅರ್ಜಾನ್ ಪ್ರಮುಖ ಪಾತ್ರ ವಹಿಸಿದ್ದರು. ಆಂಧ್ರ ವಿರುದ್ಧದ ಆ ಪಂದ್ಯದಲ್ಲಿ 28 ರನ್ಗಳಿಗೆ 4 ವಿಕೆಟ್ ಪಡೆದು ಮಿಂಚಿದ್ದರು.
ಇನ್ಸ್ವಿಂಗ್ ಮತ್ತು ಔಟ್ ಸ್ವಿಂಗ್ ಮೂಲಕ ಬ್ಯಾಟ್ಸ್ಮನ್ಗಳನ್ನು ಕಾಡುವ ಈ ಯುವ ಎಡಗೈ ವೇಗಿಯ ಹೆಸರು ಈ ಬಾರಿ ಐಪಿಎಲ್ ನೋಂದಣಿ ಪಟ್ಟಿಯಲ್ಲಿ ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿತ್ತು. ಇದಾಗ್ಯೂ ಈತನ ಮೇಲೆ ಆಯ್ಕೆಗಾರರು ಒಲವು ಹೊಂದಿದ್ದರು. ಇತ್ತ ಎಡಗೈ ವೇಗಿ ನಟರಾಜನ್ ಕೂಡ ಗಾಯಗೊಂಡಿದ್ದಾರೆ. ಅವರ ಸ್ಥಾನದಲ್ಲಿ ಮತ್ತೋರ್ವ ಎಡಗೈ ವೇಗಿಯ ಹುಡುಕಾಟದಲ್ಲಿದ್ದಾಗ ಕಂಡಿದ್ದೇ ಅರ್ಜಾನ್ ಎಂಬ ಸ್ವಿಂಗ್ ಮಾಂತ್ರಿಕ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ