ಟೀಮ್ ಇಂಡಿಯಾವನ್ನು ಎರಡು ತಂಡಗಳಾಗಿ ವಿಭಜಿಸಲಾಗಿದೆ. ಒಂದು ತಂಡ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿ ಆಡಲು ಸಜ್ಜಾಗುತ್ತಿದ್ದರೆ, ಮತ್ತೊಂದು ತಂಡ ಶ್ರೀಲಂಕಾ ವಿರುದ್ದ ಸೀಮಿತ ಓವರ್ಗಳ ಸರಣಿಗಾಗಿ ರೆಡಿಯಾಗುತ್ತಿದೆ. ಆದರೆ ಇತ್ತ ಭಾರತ ಬಿ ಟೀಮ್ ಎಂದು ಗುರುತಿಸಿಕೊಂಡಿರುವ ತಂಡವು ಶ್ರೀಲಂಕಾ ಸರಣಿಗಾಗಿ ಆಗಮಿಸಿರುವುದಕ್ಕೆ ಲಂಕಾ ಕ್ರಿಕೆಟ್ ಲೆಜೆಂಡ್ ಅರ್ಜುನ್ ರಣತುಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಾಜಿ ಶ್ರೀಲಂಕಾ ತಂಡದ ನಾಯಕ ರಣತುಂಗ, ಏಕದಿನ-ಟಿ20 ಸರಣಿಗಳಿಗಾಗಿ ಭಾರತ 'ಬಿ' ತಂಡ ಇಲ್ಲಿಗೆ ಬರುತ್ತಿರೋದು ಶ್ರೀಲಂಕಾ ಕ್ರಿಕೆಟ್ಗೆ ದೊಡ್ಡ ಅವಮಾನ ಎಂದು ಕಿಡಿಕಾರಿದ್ದಾರೆ. ಕೇವಲ ಟಿವಿ ಮಾರ್ಕೆಟಿಂಗ್ ಸಲುವಾಗಿ ಭಾರತದ ವಿರುದ್ದ ಆಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಒಪ್ಪಿಕೊಂಡಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಇಂತಹ ನಡೆಯನ್ನು ನಾನು ವಿರೋಧಿಸುತ್ತೇನೆ ಎಂದು ಅರ್ಜುನ ರಣತುಂಗ ತಿಳಿಸಿದ್ದಾರೆ.
"ಭಾರತ ತಮ್ಮ ಅತ್ಯುತ್ತಮ ತಂಡವನ್ನು ಇಂಗ್ಲೆಂಡ್ಗೆ ಕಳುಹಿಸಿತು. ಆದರೆ ನಮ್ಮ ವಿರುದ್ದ ಆಡಲು ದುರ್ಬಲ ತಂಡವನ್ನು ಕಳುಹಿಸಿದೆ. ಅದಕ್ಕಾಗಿ ನಮ್ಮ ಮಂಡಳಿಯನ್ನು ನಾನು ದೂಷಿಸುತ್ತೇನೆ. ಇದಕ್ಕೆಲ್ಲಾ ಲಂಕಾ ಕ್ರಿಕೆಟ್ ಆಡಳಿತ ಮಂಡಳಿಯೇ ಕಾರಣ ಎಂದು ರಣತುಂಗ ಆರೋಪಿಸಿದರು. ಅಷ್ಟೇ ಅಲ್ಲದೆ ಪ್ರಸ್ತುತ ಶ್ರೀಲಂಕಾ ತಂಡದ ಕಳಪೆ ಪ್ರದರ್ಶನ ಹಾಗೂ ಇಂಗ್ಲೆಂಡ್ನಲ್ಲಿ ಆಟಗಾರರು ಬಯೋ-ಬಬಲ್ ನಿಯಮ ಉಲ್ಲಂಘಿಸಿರುವ ಬಗ್ಗೆ ಮಾತನಾಡಿರುವ ಮಾಜಿ ನಾಯಕ, ಇದು ಆಟಗಾರರಲ್ಲಿನ ಶಿಸ್ತಿನ ಕೊರತೆಗೆ ಸಾಕ್ಷಿ. ಅಂದರೆ ಆಡಳಿತದ ದೋಷದಿಂದಾಗಿ ಇಂತಹ ಘಟನೆಗಳು ನಡೆದಿವೆ. ಈ ಹಿಂದೆ ನಾನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಚುಕ್ಕಾಣಿಯಲ್ಲಿದ್ದಾಗ ಯಾವುದೇ ದುಷ್ಕೃತ್ಯ ನಡೆದಿರಲಿಲ್ಲ ಎಂದು ರಣತುಂಗ ಹೇಳಿದರು.
ಅಂದಹಾಗೆ ಅರ್ಜುನ ರಣತುಂಗ ಶ್ರೀಲಂಕಾ ಕ್ರಿಕೆಟ್ಗೆ ಹೊಸ ಸ್ಪರ್ಶ ನೀಡಿದ ನಾಯಕರಾಗಿದ್ದರು. ಅದರಲ್ಲೂ 1996 ರಲ್ಲಿ ರಣತುಂಗ ನಾಯಕತ್ವದಲ್ಲಿ ಶ್ರೀಲಂಕಾ ತಂಡವು ಚೊಚ್ಚಲ ವಿಶ್ವಕಪ್ ಗೆದ್ದುಕೊಂಡಿತ್ತು. ಅಷ್ಟೇ ಅಲ್ಲದೆ ಅನೇಕ ಯುವ ಆಟಗಾರರನ್ನು ತಂಡಕ್ಕೆ ಪರಿಚಯಿಸಿ ಬಲಿಷ್ಠ ಶ್ರೀಲಂಕಾ ತಂಡವನ್ನು ರೂಪಿಸಿದ್ದರು. ಆದರೀಗ ಶ್ರೀಲಂಕಾ ಕ್ರಿಕೆಟ್ ಅಧಃಪತನದತ್ತ ಸಾಗುತ್ತಿದ್ದು, ಟಿ20 ವಿಶ್ವಕಪ್ನಲ್ಲಿ ಅವಕಾಶ ಪಡೆಯಲು ಅರ್ಹತಾ ಪಂದ್ಯವನ್ನಾಡಬೇಕಾದ ಸ್ಥಿತಿಗೆ ತಲುಪಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ