IPL 2019 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಅಬ್ಬರಿಸಿ ಬೊಬ್ಬರಿದ ಆ್ಯಂಡ್ರೆ ರಸೆಲ್ ಕಲೆಹಾಕಿದ್ದು ಬರೋಬ್ಬರಿ 510 ರನ್ಗಳು. ಅದರಲ್ಲೂ 204. 81 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದರು ಎಂಬುದು ವಿಶೇಷ. ಆದರೆ ಐಪಿಎಲ್ 2020 ಯಲ್ಲಿ ರಸೆಲ್ ಲೆಕ್ಕಚಾರಗಳು ಉಲ್ಟಾ ಪಲ್ಟಾ ಆಗಿದ್ದವು. ಇದಕ್ಕೆ ಸಾಕ್ಷಿಯೇ 13ನೇ ಸೀಸನ್ ಐಪಿಎಲ್ನ ಅವರ ಸಾಧನೆ. ಹೌದು, ಯುಎಇನಲ್ಲಿ ನಡೆದ ಟೂರ್ನಿಯಲ್ಲಿ 10 ಪಂದ್ಯಗಳಿಂದ ರಸೆಲ್ ಕಲೆಹಾಕಿದ್ದು ಕೇವಲ 117 ರನ್ ಮಾತ್ರ. ವಿಂಡೀಸ್ ದಾಂಡಿಗ ಕಳಪೆ ಪ್ರದರ್ಶನ ಕೆಕೆಆರ್ ಫಲಿತಾಂಶದ ಮೇಲೆ ಪರಿಣಾಮ ಬೀರಿತ್ತು ಎಂದರೆ ತಪ್ಪಾಗಲಾರದು.
ಇದೀಗ ತಮ್ಮ ಕಳಪೆ ಫಾರ್ಮ್ ಬಗ್ಗೆ ಖುದ್ದು ರಸೆಲ್ ಅವರೇ ಮಾತನಾಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ವೈಫಲ್ಯಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಯುಎಇನಲ್ಲಿ ನಡೆದ ಐಪಿಎಲ್ ನನ್ನ ಪಾಲಿಗೆ ಕಠಿಣವಾಗಿತ್ತು ಎಂದಿರುವ ರಸೆಲ್, ಹಲವು ಬಾರಿ ಬ್ಯಾಟಿಂಗ್ ಶೈಲಿಯನ್ನು ಬದಲಿಸಲು ಪ್ರಯತ್ನ ನಡೆಸಿದರೂ ಅದು ಫಲ ನೀಡಿರಲಿಲ್ಲ ಎಂದಿದ್ದಾರೆ.
ಬ್ಯಾಟಿಂಗ್ ತಂತ್ರಗಾರಿಕೆ, ಫುಟ್ವರ್ಕ್ನಲ್ಲಿ ಬದಲಾವಣೆ ಮಾಡಿಕೊಂಡರೂ ಯಾವುದೂ ಫಲ ನೀಡುತ್ತಿರಲಿಲ್ಲ. ಏನಾಯಿತು ಎಂಬುದೇ ನನಗೆ ತಿಳಿಯುತ್ತಿಲ್ಲ. ಇಂತಹ ವೈಫಲ್ಯವು ಬೇಗನೆ ಮುಗಿಯಲಿ ಎಂದು ನಾನು ಬಯಸುವೆ ಎಂದು ಆ್ಯಂಡ್ರೆ ರಸೆಲ್ ತಿಳಿಸಿದರು.
ಇನ್ನು ಐಪಿಎಲ್ ಬಯೋ ಬಬಲ್ನ ಬಗ್ಗೆ ಅನುಭವ ಹಂಚಿಕೊಂಡ ರಸೆಲ್, ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿಯುತ್ತಿದ್ದಂತೆ ನಾನು ದುಬೈನಲ್ಲಿ ಕೆಲ ಸಮಯ ಕಳೆಯಲುಉ ನಿರ್ಧರಿಸಿದ್ದೆ. ಏಕೆಂದರೆ ಕೆರಿಬಿಯನ್ ಪ್ರೀಮಿಯರ್ ಲೀಗ್ನ ಬಯೋ ಬಬಲ್ನಿಂದ ನೇರವಾಗಿ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದೆ. ಹೀಗಾಗಿ ನನಗೆ ವಿರಾಮ ಅಗತ್ಯವಾಗಿತ್ತು. ಹೀಗಾಗಿ ಐಪಿಎಲ್ ಮುಕ್ತಾಯವಾಗುತ್ತಿದ್ದಂತೆ ದುಬೈಗೆ ತೆರಳಿ ಸಮಯವನ್ನು ಕಳೆದೆ. ಡ್ರಿಂಕ್ಸ್, ಪಾರ್ಟಿ ಮೂಲಕ ಮನಸ್ಸನ್ನು ಸಡಿಲಗೊಳಿಸಿದೆ ಎಂದು ರಸೆಲ್ ತಿಳಿಸಿದರು.
ಬಯೋ ಬಬಲ್ನಿಂದ ಹೊರಬಂದಾಗ ನನಗೆ ಜೈಲ್ನಿಂದ ಹೊರಬಂದ ಅನುಭವವಾಗಿತ್ತು. ಇದರಿಂದ ಹೊರಬಂದ ಬಳಿಕ ಬದುಕುತ್ತಿದ್ದೀನಿ ಎನ್ನುವ ಅನುಭವವನ್ನು ಪಡೆದೆ. ನಾನು ಜೈಲಿಗಂತು ಹೋಗಿಲ್ಲ. ಆದರೆ ಲಾಕ್ಡೌನ್ ಬಂಧನ ಹೇಗಿರುತ್ತೆ ಎಂಬುದನ್ನು ಚೆನ್ನಾಗಿ ಕಲಿಸಿತು ಎಂದು ಆ್ಯಂಡ್ರೆ ರಸೆಲ್ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ