ಡೋಪಿಂಗ್ ಪ್ರಕರಣದ ಸುಳಿಗೆ ಸಿಲುಕಿದ್ದ ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಅಂಶುಲಾ ರಾವ್ಗೆ 4 ವರ್ಷ ನಿಷೇಧ ಹೇರಲಾಗಿದೆ. ನಾಡಾ ನಡೆಸಿದ ವಿಚಾರಣೆ ವೇಳೆ ಅಂಶುಲಾ ತಪ್ಪಿತಸ್ಥರೆಂದು ಸಾಬೀತಾಗಿದೆ. ಹೀಗಾಗಿ ಅವರನ್ನು ಉದ್ದೀಪನ ಸೇವನೆ ಪ್ರಕರಣದಡಿ ಕ್ರಿಕೆಟ್ನಿಂದ ನಾಲ್ಕು ವರ್ಷಗಳವರೆಗೆ ನಿಷೇಧಿಸಲಾಗಿದೆ. ಈ ಮೂಲಕ ನಿಷೇಧಕ್ಕೆ ಒಳಗಾದ ಭಾರತದ ಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಅಪಖ್ಯಾತಿಗೊಳಗಾಗಿದ್ದಾರೆ.
ಮಧ್ಯಪ್ರದೇಶ ಮಹಿಳಾ ತಂಡದ ಅಲೌಂಡರ್ ಆಗಿ ಗುರುತಿಸಿಕೊಂಡಿದ್ದ ಅಂಶುಲಾ ರಾವ್ 2019-20ರಲ್ಲಿ ನಡೆದ ಅಂಡರ್-23 ಮಹಿಳಾ ಟಿ20 ಟೂರ್ನಿಯಲ್ಲಿ ಆಡಿದ್ದರು. ಕಳೆದ ವರ್ಷ ಮಾರ್ಚ್ 14ರಂದು ಬರೋಡಾದಲ್ಲಿ ನಡೆಸಲಾದ ಪರೀಕ್ಷೆಯ ವೇಳೆ ಅಂಶುಲಾ ಅವರು ನಿಷೇಧಿತ ಅನಾಬೊಲಿಕ್ ಸ್ಟಿರಾಯ್ಡ್ ಸೇವಿಸಿರುವುದು ಕಂಡು ಬಂದಿತ್ತು. ಆದರೆ ನಿಷೇಧಿತ ಉದ್ದೀಪನ ನನ್ನ ಅರಿವಿಗೆ ಬಾರದಂತೆ ದೇಹ ಸೇರಿದೆ ಎಂದು ಅಂಶುಲಾ ತಿಳಿಸಿದ್ದರು.
ಆ ಬಳಿಕ ವೈದ್ಯಕೀಯ ಪರೀಕ್ಷೆಯ ಜೊತೆ ವಿಚಾರಣೆ ಮುಂದುವರೆಸಲಾಗಿತ್ತು. ನಾಡಾ ಸಮಿತಿಯವರ ವಿಚಾರಣೆಯಿಂದ ಇದೀಗ ಅಂಶುಲಾ ಉದ್ದೇಶಪೂರ್ವವಾಗಿಯೇ ಡ್ರಗ್ಸ್ ತೆಗೆದುಕೊಂಡಿದ್ದರು ಎಂಬುದು ತಿಳಿದು ಬಂದಿದೆ. ಹೀಗಾಗಿ ಅವರನ್ನು ಕ್ರಿಕೆಟ್ನಿಂದ ನಾಲ್ಕು ವರ್ಷಗಳವರೆಗೆ ನಿಷೇಧಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ