ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡವನ್ನು ಸೋಲಿಸಿ ನ್ಯೂಜಿಲೆಂಡ್ ಚೊಚ್ಚಲ ಟೆಸ್ಟ್ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪಾಯಿಂಟ್ ಟೇಬಲ್ನಲ್ಲಿ ಎರಡನೇ ಸ್ಥಾನವನ್ನು ಗಳಿಸಿದ್ದ ನ್ಯೂಜಿಲೆಂಡ್ ಅಂತಿಮವಾಗಿ ಚಾಂಪಿಯನ್ ಪಟ್ಟಕ್ಕೇರಿತು. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆಡಿದ ತಂಡಗಳ ಪ್ರಮುಖ ಆಟಗಾರರನ್ನು ಒಳಗೊಂಡಿರುವ ಪ್ಲೇಯಿಂಗ್ ಅನ್ನು ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಪ್ರಕಟಿಸಿದ್ದಾರೆ. ಆದರೆ ಈ ತಂಡದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಸ್ಥಾನ ನೀಡಿಲ್ಲ ಎಂಬುದು ವಿಶೇಷ.
ಆಕಾಶ್ ಚೋಪ್ರಾ ತಮ್ಮ ವಿಶ್ವ ಟೆಸ್ಟ್ ಇಲೆವೆನ್ ತಂಡದಲ್ಲಿ ಟೀಮ್ ಇಂಡಿಯಾದಿಂದ 3 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಹಾಗೆಯೇ, ಆಸ್ಟ್ರೇಲಿಯಾದ ನಾಲ್ಕು ಆಟಗಾರರು ಈ ತಂಡದಲ್ಲಿದ್ದಾರೆ. ಇದಲ್ಲದೆ ಇಂಗ್ಲೆಂಡ್ನ 3 ಆಟಗಾರರು ಹಾಗೂ ಶ್ರೀಲಂಕಾದ ಒಬ್ಬ ಆಟಗಾರನಿಗೆ ಆಕಾಶ್ ಚೋಪ್ರಾ ಅವಕಾಶ ಸ್ಥಾನ ನೀಡಿದ್ದಾರೆ.
ಅಷ್ಟೇ ಅಲ್ಲದೆ ವಿಶ್ವ ಟೆಸ್ಟ್ ಇಲೆವೆನ್ ಆರಂಭಿಕ ಜೋಡಿಯಾಗಿ ರೋಹಿತ್ ಶರ್ಮಾ ಮತ್ತು ಶ್ರೀಲಂಕಾದ ದಿಮುತ್ ಕರುಣರತ್ನೆ ಅವರನ್ನು ಆರಿಸಲಾಗಿದೆ. ಮೂರನೇ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಇದ್ದಾರೆ. ಹಾಗೆಯೇ ಆಲ್ರೌಂಡರ್ ಆಗಿ ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಅವರಿಗೂ ಸ್ಥಾನ ನೀಡಿದ್ದಾರೆ.
ಇನ್ನು ನಾಯಕತ್ವವನ್ನು ಇಂಗ್ಲೆಂಡ್ ತಂಡದ ಟೆಸ್ಟ್ ಕ್ಯಾಪ್ಟನ್ ಜೋ ರೂಟ್ ಅವರಿಗೆ ನೀಡಿದ್ದಾರೆ. ಇದರ ಜೊತೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಈ ತಂಡದಲ್ಲಿ ಸ್ಥಾನ ಪಡೆದ ಏಕೈಕ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್.
ಆಕಾಶ್ ಚೋಪ್ರಾ ಅವರ ವಿಶ್ವ ಟೆಸ್ಟ್ ಪ್ಲೇಯಿಂಗ್ ಇಲೆವೆನ್ ಹೀಗಿದೆ: ರೋಹಿತ್ ಶರ್ಮಾ, ದಿಮುತ್ ಕರುಣರತ್ನೆ, ಮಾರ್ನಸ್ ಲಾಬುಶೇನ್, ಜೋ ರೂಟ್ (ನಾಯಕ), ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಪ್ಯಾಟ್ ಕಮ್ಮಿನ್ಸ್, ಸ್ಟುವರ್ಟ್ ಬ್ರಾಡ್ ಮತ್ತು ಜೋಶ್ ಹ್ಯಾಝಲ್ವುಡ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ