Aus Vs Ind - ಮೆಲ್ಬೋರ್ನ್ನಲ್ಲಿ ರಹಾನೆ ಭರ್ಜರಿ ಶತಕ; 2ನೇ ದಿನವೂ ಆಸ್ಟ್ರೇಲಿಯಾ ವಿರುದ್ಧ ಭಾರತ ಮೇಲುಗೈ
ಆಸ್ಟ್ರೇಲಿಯಾದ 195 ರನ್ಗಳ ಮೊದಲ ಇನ್ನಿಂಗ್ಸ್ ಮೊತ್ತವನ್ನು ಭಾರತ ಸುಲಭವಾಗಿ ದಾಟಿ ಉತ್ತಮ ಮುನ್ನಡೆ ಪಡೆದುಕೊಂಡಿದೆ. ನಾಯಕ ಅಜಿಂಕ್ಯ ರಹಾನೆ 12ನೇ ಶತಕ ದಾಖಲಿಸಿ ತಂಡವನ್ನ ಸುಭದ್ರ ಸ್ಥಿತಿಗೆ ಕೊಂಡೊಯ್ದಿದ್ದಾರೆ.
ಮೆಲ್ಬೋರ್ನ್(ಡಿ. 27): ಅಡಿಲೇಡ್ನಲ್ಲಿ ಹೋದ ಮಾನವನ್ನು ಭಾರತ ಮೆಲ್ಬೋರ್ನ್ನಲ್ಲಿ ಪಡೆದುಕೊಳ್ಳುವಂತೆ ತೋರುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ 2ನೇ ದಿನವೂ ಭಾರತ ಮೇಲುಗೈ ಸಾಧಿಸಿದೆ. ಅಜಿಂಕ್ಯ ರಹಾನೆ ಅವರ ಅಮೋಘ ಶತಕದಿಂದ ಭಾರತ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿ ಮುನ್ನುಗ್ಗುತ್ತಿದೆ. ಆಸ್ಟ್ರೇಲಿಯಾದ 195 ರನ್ಗಳ ಮೊದಲ ಇನ್ನಿಂಗ್ಸ್ಗೆ ಪ್ರತಿಯಾಗಿ ಭಾರತ ತಂಡ 5 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ 82 ರನ್ಗಳ ಮುನ್ನಡೆ ಹೊಂದಿದೆ.
ನಿನ್ನೆ ಮೊದಲ ದಿನಾಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದ್ದ ಭಾರತ ತಂಡ ಇಂದು ಎರಡನೇ ದಿನದಾಟದ ಆರಂಭದಲ್ಲಿ ಬೇಗನೇ 2 ವಿಕೆಟ್ ಕಳೆದುಕೊಂಡಿತು. ಒಳ್ಳೆಯ ಫಾರ್ಮ್ನಲ್ಲಿದ್ದ ಶುಭ್ಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರ ಇಬ್ಬರೂ ತಂಡದ ಮೊತ್ತ 64 ರನ್ ಇದ್ದಾಗ ನಿರ್ಗಮಿಸಿದರು. ಆದರೆ, ಅದಾದ ಬಳಿಕ ನಾಯಕ ಅಜಿಂಕ್ಯ ರಹಾನೆ ಬಂಡೆಯಂತೆ ನಿಂತು ತಂಡಕ್ಕೆ ಚೇತರಿಕೆ ನೀಡಿದರು. ರಹಾನೆಗೆ ಗಗನ ಹನುಮ ವಿಹಾರಿ, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಉತ್ತಮ ರೀತಿಯಲ್ಲಿ ಜೊತೆಯಾದರು. ರಹಾನೆ-ವಿಹಾರಿ ಮಧ್ಯೆ 4ನೇ ವಿಕೆಟ್ಗೆ 52 ರನ್ ಜೊತೆಯಾಟ ಬಂದಿತ. ರಹಾನೆ ಮತ್ತು ಪಂತ್ ಇಬ್ಬರೂ 5ನೇ ವಿಕೆಟ್ಗೆ 57 ರನ್ ಸೇರಿಸಿದರು. ನಂತರ ರಹಾನೆಗೆ ಜೊತೆಯಾದ ರವೀಂದ್ರ ಜಡೇಜಾ 6 ನೇ ವಿಕೆಟ್ಗೆ 100ಕ್ಕೂ ಹೆಚ್ಚು ರನ್ಗಳ ಜೊತೆಯಾಟದಲ್ಲಿ ಭಾಗಿಯಾದರು.
ಈ ವೇಳೆ ಅಜಿಂಕ್ಯ ರಹಾನೆ 12ನೇ ಟೆಸ್ಟ್ ಶತಕ ದಾಖಲಿಸಿದರು. ತಂಡಕ್ಕೆ ಅಮೂಲ್ಯ ಮೊದಲ ಇನ್ನಿಂಗ್ಸ್ ಮುನ್ನಡೆ ದೊರಕಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದರು. ನಾಯಕನ ಆಟದ ಪ್ರದರ್ಶನ ನೀಡಿದರು. ಮೊದಲ ದಿನದಾಟದಲ್ಲಿ ಭಾರತದ ಬ್ಯಾಟ್ಸ್ಮನ್ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಮಿಶೆಲ್ ಸ್ಟಾರ್ಕ್ ಎರಡನೇ ದಿನ ಅಷ್ಟೇನೂ ಪರಿಣಾಮಕಾರಿ ಎನಿಸಲಿಲ್ಲ.
ಸ್ಕೋರು ವಿವರ (2ನೇ ದಿನದಾಟ):
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 72.3 ಓವರ್ 195/10
ಭಾರತ ಮೊದಲ ಇನ್ನಿಂಗ್ಸ್ 277/5
(ಶುಭ್ಮನ್ ಗಿಲ್ 45, ರಿಷಭ್ ಪಂತ್ 29, ಅಜಿಂಕ್ಯ ರಹಾನೆ ಅಜೇಯ 104, ರವೀಂದ್ರ ಜಡೇಜಾ ಅಜೇಯ 40 ರನ್ – ಮಿಶೆಲ್ ಸ್ಟಾರ್ಕ್ 61/2, ಪ್ಯಾಟ್ ಕುಮಿನ್ಸ್ 71/2)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ