ಮುಂಬೈ, ಡಿ. 4: ನ್ಯೂಜಿಲೆಂಡ್ ತಂಡದಲ್ಲಿರುವ ಭಾರತ ಮೂಲದ ಸ್ಪಿನ್ ಬೌಲರ್ ಎಜಾಜ್ ಪಟೇಲ್ ಒಂದೇ ಇನ್ನಿಂಗ್ಸಲ್ಲಿ 10 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಭಾರತ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಈ ದಾಖಲೆ ಬರೆದಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿದ್ದಾರೆ. ಭಾರತದ ಮೊದಲ ಇನ್ನಿಂಗ್ಸ್ ಇಂದು 325 ರನ್ಗೆ ಅಂತ್ಯಗೊಂಡಿತು. ಎಜಾಜ್ ಪಟೇಲ್ ಭಾರತದ ಎಲ್ಲಾ 10 ವಿಕೆಟ್ಗಳನ್ನ ಪಡೆದು ಸೈ ಎನಿಸಿದ್ದಾರೆ. 47.5 ಓವರ್ ಬೌಲ್ ಮಾಡಿದ ಅವರು 119 ರನ್ನಿತ್ತು 10 ವಿಕೆಟ್ ಪಡೆದರು. ಈ ಹಿಂದೆ 1956ರಲ್ಲಿ ಇಂಗ್ಲೆಂಡ್ ತಂಡದ ಜಿಮ್ ಲೇಕರ್ ಹಾಗೂ 1999ರಲ್ಲಿ ಅನಿಲ್ ಕುಂಬ್ಳೆ ಅವರು ಒಂದೇ ಇನ್ನಿಂಗ್ಸಲ್ಲಿ 10 ವಿಕೆಟ್ ಪಡೆದ ದಾಖಲೆ ಸ್ಥಾಪಿಸಿದ್ದರು.
ಜಿಮ್ ಲೇಕರ್ ಸಾಧನೆ: ಇಂಟರೆಸ್ಟಿಂಗ್ ಸಂಗತಿ ಎಂದರೆ 10 ವಿಕೆಟ್ ಸಾಧನೆ ಮಾಡಿದ ಎಲ್ಲಾ ಮೂವರೂ ಕೂಡ ಸ್ಪಿನ್ ಬೌಲರ್ಗಳೇ ಅಗಿದ್ದಾರೆ. ಮೊತ್ತಮೊದಲ ಬಾರಿಗೆ ಒಂದೇ ಇನ್ನಿಂಗ್ಸಲ್ಲಿ 10 ವಿಕೆಟ್ ಪಡೆದಿದ್ದ ಜಿಮ್ ಲೇಕರ್ ಅವರು ಅದೇ ಪಂದ್ಯದಲ್ಲಿ ಮೊದಲ ಇನ್ನಿಂಗ್ಸಲ್ಲಿ 9 ವಿಕೆಟ್ ಪಡೆದಿದ್ದರು. ಒಂದು ಟೆಸ್ಟ್ ಪಂದ್ಯದಲ್ಲಿ 19 ವಿಕೆಟ್ ಪಡೆದ ವಿಶ್ವದ ಏಕೈಕ ಬೌಲರ್ ಎಂಬ ದಾಖಲೆ ಈಗಲೂ ಜಿಮ್ ಲೇಕರ್ ಹೆಸರಲ್ಲೇ ಇದೆ.
ಮುಂಬೈ ಸಂಜಾತರು ಎಜಾಜ್ ಪಟೇಲ್:
ಎಜಾಜ್ ಪಟೇಲ್ ವಿಚಾರದಲ್ಲಿ ಕುತೂಹಲದ ಸಂಗತಿ ಎಂದರೆ ಅವರು ಮುಂಬೈನಲ್ಲೇ ಹುಟ್ಟಿದವರು. ನ್ಯೂಜಿಲೆಂಡ್ಗೆ ವಲಸೆ ಹೋದ ಬಳಿಕ ಅಲ್ಲಿ ಕ್ರಿಕೆಟಿಗರಾಗಿ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಈಗ ತಮ್ಮ ತವರು ನೆಲದಲ್ಲೇ ಅವರು ಐತಿಹಾಸಿಕ ಸಾಧನೆ ಮಾಡಿರುವುದು ಗಮನಾರ್ಹ.
ನಿನ್ನೆ ಮೊದಲ ದಿನಾಂತ್ಯದಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು. ಮಯಂಕ್ ಅಗರ್ವಾಲ್ ಮತ್ತು ವೃದ್ಧಿಮಾನ್ ಸಾಹ ಕೆಚ್ಚೆದೆಯಿಂದ ಬ್ಯಾಟಿಂಗ್ ನಡೆಸಿದ್ದರು. ನಿನ್ನೆ ಮೊದಲ ದಿನ ಎಜಾಜ್ ಪಟೇಲ್ ವರ್ಸಸ್ ಟೀಮ್ ಇಂಡಿಯಾ ಫೈಟ್ ಎಂಬಂತಿತ್ತು. ಮಯಂಕ್ ಅಗರ್ವಾಲ್ ಪ್ರಾಬಲ್ಯ ಮೆರೆದಿದ್ದರು. ಇಂದು ಎರಡನೇ ದಿನವೂ ಅದೇ ಫೈಟ್ ಮುಂದುವರಿಯಿತು. ಆದರೆ, ಅಂತಿಮವಾಗಿ ಎಜಾಜ್ ಪಟೇಲ್ ವಿನ್ನರ್ ಆಗಿ ಹೊರಹೊಮ್ಮಿದರು. ಎರಡನೇ ದ್ವಿಶತಕದ ಮೇಲೆ ಕಣ್ಣಿಟ್ಟಿದ್ದ ಮಯಂಕ್ ಅಗರ್ವಾಲ್ 150 ರನ್ಗೆ ಔಟ್ ಆದರು. ಅಕ್ಷರ್ ಪಟೇಲ್ ಅರ್ಧಶತಕ ಗಳಿಸಿದರು. ಅದು ಬಿಟ್ಟರೆ ಎರಡನೇ ದಿನದಾಟದಲ್ಲಿ ಪೂರಾ ಮಿಂಚಿದ್ದು ಎಜಾಜ್ ಪಟೇಲ್.
ಇದನ್ನೂ ಓದಿ: ‘ಗೆಲುವು ಸಿಗದಿದ್ದರೂ ಪ್ರೀತಿ, ಸ್ನೇಹ ಸಿಕ್ಕಿತು’- ಭಾರತದ ಬಗ್ಗೆ ಪಾಕ್ ಕಿರಿಯರು ಆಡಿದ ಮಾತಿದು
ಭಾರತ ಮೊದಲ ಇನ್ನಿಂಗ್ಸಲ್ಲಿ ಅಡಿದ 109 ಓವರ್ಗಳಲ್ಲಿ ಎಜಾಜ್ ಪಟೇಲ್ ಒಬ್ಬರೇ 48 ಓವರ್ಗಳಷ್ಟು ಬೌಲಿಂಗ್ ಮಾಡಿದರು. ಏಕಾಂಗಿಯಾಗಿಯೇ ಅವರು ಭಾರತೀಯ ಬ್ಯಾಟುಗಾರರನ್ನ ಕಟ್ಟಿ ಹಾಕಿ ಎಲ್ಲಾ ವಿಕೆಟ್ ಸಂಪಾದಿಸಿದರು.
ರಿಚರ್ಡ್ ಹ್ಯಾಡ್ಲಿ ದಾಖಲೆ ಮುರಿದ ಪಟೇಲ್:
ಟೆಸ್ಟ್ ಕ್ರಿಕೆಟ್ನಲ್ಲಿ ಒಂದೇ ಇನ್ನಿಂಗ್ಸಲ್ಲಿ 10 ವಿಕೆಟ್ ಪಡೆದ ಮೊದಲ ನ್ಯೂಜಿಲೆಂಡ್ ಬೌಲರ್ ಎಂಬ ದಾಖಲೆಯನ್ನ ಎಜಾಜ್ ಪಟೇಲ್ ಬರೆದಿದ್ದಾರೆ. ಈ ಹಿಂದೆ ವೇಗದ ಬೌಲರ್ ರಿಚರ್ಡ್ ಹ್ಯಾಡ್ಲೀ 1985ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 52 ರನ್ಗೆ 9 ವಿಕೆಟ್ ಪಡೆದದ್ದು ದಾಖಲೆಯಾಗಿತ್ತು.
ಒಂದೇ ಇನ್ನಿಂಗ್ಸಲ್ಲಿ 10 ವಿಕೆಟ್ ಪಡೆದ ದಾಖಲೆವೀರರು ಇವರು:
1) ಜಿಮ್ ಲೇಕರ್ (ಇಂಗ್ಲೆಂಡ್): 53/10, ವರ್ಷ 1956
2) ಅನಿಲ್ ಕುಂಬ್ಳೆ (ಭಾರತ): 74/10, ವರ್ಷ 1999
3) ಎಜಾಜ್ ಪಟೇಲ್ (ನ್ಯೂಜಿಲೆಂಡ್: 119/10, ವರ್ಷ 2021
ಎಜಾಜ್ ಪಟೇಲ್ ಸಾಧನೆಯನ್ನ ಅನಿಲ್ ಕುಂಬ್ಳೆ ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ.
ಒಂದೇ ಇನ್ನಿಂಗ್ಸಲ್ಲಿ 9 ವಿಕೆಟ್ ಪಡೆದವರು:
ವಿಶ್ವದಲ್ಲಿ ಇದೂವರೆಗೂ 17 ಬಾರಿ ಒಬ್ಬ ಆಟಗಾರ ಒಂದೇ ಇನ್ನಿಂಗ್ಸಲ್ಲಿ 9 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. 16 ಮಂದಿ ಹೆಸರಲ್ಲಿ ಈ ದಾಖಲೆ ಇದೆ. ಮುತ್ತಯ್ಯ ಮುರಳೀಧರನ್ ಎರಡು ಬಾರಿ 9 ವಿಕೆಟ್ ಪಡೆದಿದ್ದಾರೆ. ಭಾರತದ ಜಶುಭಾಯ್ ಪಟೇಲ್, ಕಪಿಲ್ ದೇವ್ ಮತ್ತು ಸುಬಾಷ್ ಗುಪ್ತೆ ಅವರೂ 9 ವಿಕೆಟ್ ಪಡೆದವರ ದಾಖಲೆ ‘ಪುಟದಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ