ಚೆನ್ನೈ: ಕೆರೆಯ ನೀರನ್ನು ಕೆರೆಗೆ ಚೆಲ್ಲಿ (giving back to society) ಎಂಬ ಜನಪ್ರಿಯ ನಾಣ್ನುಡಿ ಇದೆ. ಸಮಾಜ ಮತ್ತು ನಮ್ಮ ನಡುವೆ ಕೊಡು ಕೊಳ್ಳು ಪ್ರಕ್ರಿಯೆ ಇದ್ದರೆ ಅದು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ. ಸಮಾಜದಿಂದ ಎಲ್ಲವನ್ನ ಪಡೆದು ಸಮಾಜಕ್ಕೆ ಏನೂ ಕೊಡುಗೆ ನೀಡದೇ ಹೋದರೆ ಅದು ಬರೇ ಸ್ವಾರ್ಥ. ಇಂಥ ಸ್ವಾರ್ಥಿಗಳೇ ಹೆಚ್ಚು ಭಾಗ ತುಂಬಿರುವ ಜಗತ್ತಿನಲ್ಲಿ ಟಿ ನಟರಾಜನ್ ಅವರಂಥ ವ್ಯಕ್ತಿಗಳೂ ಅಲ್ಲಲ್ಲಿ ಕಾಣಸಿಗುತ್ತಾರೆ. ತಂಗರಸು ನಟರಾಜನ್ (Thangarasu Natarajan) ಟೀಮ್ ಇಂಡಿಯಾದ ಉಜ್ವಲ ಭವಿಷ್ಯ ಇರುವ ವೇಗದ ಬೌಲರ್. ಕಳೆದ ವರ್ಷವಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಗಾಯದ ಸಮಸ್ಯೆಯಿಂದ ಹೆಚ್ಚು ಪಂದ್ಯ ಆಡಲಿಲ್ಲ. ಆಡಿದ ಕೆಲ ಪಂದ್ಯಗಳಲ್ಲೇ ಗಮನ ಸೆಳೆಯುವಂಥ ಪ್ರದರ್ಶನ ನೀಡಿದ್ಧಾರೆ. ಆದರೆ, ಕ್ರಿಕೆಟ್ನಿಂದ ಇಷ್ಟು ಎತ್ತರಕ್ಕೆ ಬೆಳೆದಿರುವ ಇವರು ಯುವ ಪ್ರತಿಭೆಗಳನ್ನ ಬೆಳೆಸುವ ಕಾಯಕವನ್ನೂ ಮಾಡುತ್ತಿದ್ಧಾರೆ. ಇದೀಗ ಅವರ ಊರಿನಲ್ಲಿ ಕ್ರಿಕೆಟ್ ಗ್ರೌಂಡ್ (Cricket Ground) ನಿರ್ಮಾಣ ಮಾಡಲು ಹೊರಟಿದ್ದಾರೆ.
30 ವರ್ಷದ ಟಿ ನಟರಾಜನ್ ಅವರು ತಮಿಳುನಾಡಿನ ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ (Chinnappampatti Village in Salem) ಎಂಬ ಗ್ರಾಮದವರು. ತಮ್ಮ ಊರಿನಲ್ಲಿ ಕ್ರಿಕೆಟ್ ಮೈದಾನ ಸಿದ್ಧಪಡಿಸುತ್ತಿರುವುದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಈ ಮೈದಾನಕ್ಕೆ ಎನ್ಸಿಜಿ ಎಂದು ಹೆಸರಿಡಲು ಮೊದಲೇ ನಿರ್ಧರಿಸಿದ್ದಾರೆ.
“ನನ್ನ ಗ್ರಾಮದಲ್ಲಿ ಎಲ್ಲಾ ಸೌಲಭ್ಯಗಳಿರುವ ಹೊಸ ಕ್ರಿಕೆಟ್ ಮೈದಾನ ಸಿದ್ಧಪಡಿಸುತ್ತಿರುವ ವಿಚಾರವನ್ನು ತಿಳಿಸಲು ಖುಷಿಯಾಗುತ್ತಿದೆ. ಇದನ್ನ ನಟರಾಜನ್ ಕ್ರಿಕೆಟ್ ಗ್ರೌಂಡ್ (NCG) ಎಂದು ಹೆಸರಿಸಲಾಗುತ್ತದೆ. #DreamsDoComeTrue, ಕಳೆದ ಡಿಸೆಂಬರ್ನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದೆ. ಈ ವರ್ಷದ ಡಿಸೆಂಬರ್ನಲ್ಲಿ ಕ್ರಿಕೆಟ್ ಗ್ರೌಂಡ್ ಸೆಟಪ್ ಮಾಡುತ್ತಿದ್ದೇನೆ. #ThankGod,” ಎಂದು ಟಿ ನಟರಾಜನ್ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ.
Happy to Announce that am setting up a new cricket ground with all the facilities in my village, Will be named as *NATARAJAN CRICKET GROUND(NCG)❤️
* #DreamsDoComeTrue🎈Last year December I Made my debut for India, This year (December) am setting up a cricket ground💥❤️ #ThankGod pic.twitter.com/OdCO7AeEsZ
— Natarajan (@Natarajan_91) December 15, 2021
ತಂಗರಸು ನಟರಾಜನ್ ಅವರು ಬಡತನದ ಹಿನ್ನೆಲೆಯವರು. ಅವರ ತಂದೆ ಕೂಲಿ ಕಾರ್ಮಿಕರು. ಕೈಮಗ್ಗದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ಅವರ ತಾಯಿ ಬೀದಿಬದಿ ಹೋಟೆಲ್ ಇಟ್ಟಿದ್ದಾರೆ. ಕಷ್ಟಪಟ್ಟು ಬೆಳೆದು ಕ್ರಿಕೆಟ್ನಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಟಿ ನಟರಾಜನ್ ಅವರು ಕ್ರಿಕೆಟ್ನಿಂದ ತಾವು ಪಡೆದಿರುವುದಕ್ಕಿಂತ ಹೆಚ್ಚಿನದನ್ನು ಅ ಕ್ರೀಡೆಗೆ ಮರಳಿಸುತ್ತಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸುವುದಿಲ್ಲ.
ಇದನ್ನೂ ಓದಿ: ಕೊಹ್ಲಿ ವಿವಾದ ವಿಚಾರ: ಗವಾಸ್ಕರ್ ಸಲಹೆ; ಕೊನೆಗೂ ಮೌನಮುರಿದ ಸೌರವ್ ಗಂಗೂಲಿ
ಟೀಮ್ ಇಂಡಿಯಾಗೆ ಬರುವ ಮುನ್ನವೇ ಅಕಾಡೆಮಿ ಶುರು ಮಾಡಿದ್ದ ನಟರಾಜನ್:
ಟಿ ನಟರಾಜನ್ ಅವರು ತಮ್ಮ ಊರಿನಲ್ಲಿ ಈಗ ಕ್ರಿಕೆಟ್ ಗ್ರೌಂಡ್ ತಯಾರಿಸುತ್ತಿರುವುದು ಹೌದು. ಆದರೆ, ಅದಕ್ಕಿಂತ ಮುಂಚೆಯೇ ಅವರು ಕ್ರಿಕೆಟ್ ಅಕಾಡೆಮಿ ಸ್ಥಾಪಿಸಿ ಬಡವರಿಗೆ ಉಚಿತವಾಗಿ ಕ್ರಿಕೆಟ್ ಪಾಠ ಹೇಳಿಕೊಡುವ ಸೌಲಭ್ಯ ಒದಗಿಸಿದ್ದಾರೆ.
ತಮಿಳುನಾಡಿನಲ್ಲಿ ಲೀಗ್ ಕ್ರಿಕೆಟ್ ಆಡುತ್ತಿರುವಾಗಲೇ ನಟರಾಜನ್ ಅವರಿಗೆ ತಮ್ಮ ಊರಿನಲ್ಲಿ ಕ್ರಿಕೆಟ್ ಅಕಾಡೆಮಿ ಪ್ರಾರಂಭಿಸುವ ಯೋಚನೆ ಸುಳಿದಿತ್ತಂತೆ. 2017ರಲ್ಲಿ ಐಪಿಎಲ್ನಲ್ಲಿ ಅವರಿಗೆ 3 ಕೋಟಿ ರೂ ಮೊತ್ತದ ಕಾಂಟ್ರಾಕ್ಟ್ ಸಿಕ್ಕಿದಾಗ ತಮ್ಮ ಕನಸನ್ನ ನನಸಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: Nivethan: ನಿವೇದನ್ ರಾಧಾಕೃಷ್ಣನ್, ಆಸ್ಟ್ರೇಲಿಯಾದ ಹೊಸ ಬೌಲಿಂಗ್ ಸೆನ್ಸೇಷನ್; ಒಂದು ಕಿರುಪರಿಚಯ
ಅಕಾಡೆಮಿಯಲ್ಲಿ ಎಲ್ಲವೂ ಉಚಿತ:
ಅವರ ಅಕಾಡೆಮಿಗೆ ಬಹಳಷ್ಟು ಮಕ್ಕಳು ಬರುತ್ತಿದ್ಧಾರೆ. ಅವರಲ್ಲಿ ಬಹುತೇಕರು ಬಡಕುಟುಂಬದ ಮಕ್ಕಳೇ ಆಗಿದ್ದಾರೆ. ಇಲ್ಲಿ ಬ್ಯಾಟ್, ಬಾಲು, ಮ್ಯಾಟ್, ಪ್ಯಾಡು ಹೀಗೆ ಕ್ರಿಕೆಟ್ ಅಭ್ಯಾಸಕ್ಕೆ ಬೇಕಾದ ಎಲ್ಲಾ ಪರಿಕರಗಳು ಉಚಿತವಾಗಿ ಸಿಗುತ್ತವಂತೆ. ಟಿ ನಟರಾಜನ್ ಹೇಳಿಕೊಂಡಂತೆ ವಿಜಯ್ ಶಂಕರ್, ಬಾಬಾ ಅಪರಾಜಿತ್, ಬಾಬ ಇಂದ್ರಜಿತ್, ಕೌಷಿಕ್ ಗಾಂಧಿ, ಕೌಶಿಕ್ ಶ್ರೀನಿವಾಸ್, ಗಂಗಾ ಶ್ರೀಧರ್ ರಾಜು ಮೊದಲಾದ ಕ್ರಿಕೆಟಿಗರು ಈ ಅಕಾಡೆಮಿಗೆ ಸಹಾಯ ಮಾಡುತ್ತಾರಂತೆ.
ಗುರು-ಶಿಷ್ಯರು ಒಂದೇ ಟೀಮ್ನಲ್ಲಿ:
ಇದೇ ಅಕಾಡೆಮಿಯಲ್ಲಿ ಬೆಳೆದ ಜಿ ಪೆರಿಯಸಾಮಿ ಎಂಬ ಪ್ರತಿಭಾನ್ವಿತ ಕ್ರಿಕೆಟಿಗ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಮಿಂಚಿ, ರಾಜ್ಯ ತಂಡಕ್ಕೂ ಆಯ್ಕೆಯಾಗಿದ್ದಾರೆ. ಅಕಾಡೆಮಿ ಸ್ಥಾಪಿಸಿದ ಟಿ ನಟರಾಜನ್ ಮತ್ತು ಅಕಾಡೆಮಿಯಲ್ಲಿ ಕಲಿತ ಪೆರಿಯಸಾಮಿ ಇಬ್ಬರೂ ಒಂದೇ ತಂಡದಲ್ಲಿ ಒಟ್ಟಿಗೆ ಕ್ರಿಕೆಟ್ ಆಡಿದ್ದು ವಿಶೇಷ ಎನಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ