ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಬಗ್ಗು ಬಡಿದು ಟೀಮ್ ಇಂಡಿಯಾ ಭಾರತಕ್ಕೆ ಮರಳಿದೆ. ಈ ಸರಣಿಯಲ್ಲಿ 3 ಪಂದ್ಯಗಳಲ್ಲಿ ಕಣಕ್ಕಿಳಿದ ವೇಗಿ ಮೊಹಮ್ಮದ್ ಸಿರಾಜ್ 13 ವಿಕೆಟ್ ಉರುಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಇದೇ ಸರಣಿ ಮಧ್ಯೆ ಸಿರಾಜ್ ಅವರ ತಂದೆ ಇಹಲೋಕ ತ್ಯಜಿಸಿದ್ದರು. ಆದರೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಟೀಮ್ ಇಂಡಿಯಾ ವೇಗಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಗುರುವಾರ ಆಸ್ಟ್ರೇಲಿಯಾದಿಂದ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿರಾಜ್ ನೇರವಾಗಿ ಸ್ವಗ್ರಾಮದಲ್ಲಿರುವ ತಂದೆಯ ಸಮಾಧಿ ಸ್ಥಳದತ್ತ ತೆರಳಿ ನಮನ ಸಲ್ಲಿಸಿದರು.
ಈ ಹಿಂದೆ ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳಿದ್ದ ಸಿರಾಜ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರು. ಅಲ್ಲದೆ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಜೊತೆ ಆಸ್ಟ್ರೇಲಿಯಾ ಸರಣಿಗೆ ತೆರಳಿದ್ದರು. ಇದೇ ವೇಳೆ ಬಯೋ ಬಬಲ್ ನಿಯಮದೊಂದಿಗೆ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದರು. ಆದರೆ ಇತ್ತ ನವೆಂಬರ್ 20 ರಂದು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಮೊಹಮ್ಮದ್ ಸಿರಾಜ್ ಅವರ ತಂದೆ ನಿಧನರಾಗಿದ್ದರು. ಕೊರೋನಾ ನಿಯಮಗಳಿಂದಾಗಿ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇದಾಗ್ಯೂ ಆಸ್ಟ್ರೇಲಿಯಾ ಸರಣಿಗಾಗಿ ಉಳಿದುಕೊಂಡಿದ್ದ ಸಿರಾಜ್ ತಂದೆಯ ಕನಸನ್ನು ಈಡೇರಿಸುವ ಸಂಕಲ್ಪ ತೊಟ್ಟಿದ್ದರು.
ತಂದೆಯ ನಿಧನದಿಂದ ದುಃಖಿತರಾಗಿದ್ದ ಅವರನ್ನು ತಾಯಿ ಕರೆ ಮಾಡಿ ಸಂತೈಸಿದ್ದರು. ಅಮ್ಮನ ಮಾತುಗಳಿಂದಾಗಿ ನಾನು ಮಾನಸಿಕವಾಗಿ ಬಲಿಷ್ಠನಾದೆ. ಅದರಂತೆ ತಂದೆಯ ಕನಸನ್ನು ಈಡೇರಿಸಲು ನಿರ್ಧರಿಸಿದೆ. ಏಕೆಂದರೆ ನಾನು ಟೀಮ್ ಇಂಡಿಯಾ ಪರ ಟೆಸ್ಟ್ ಆಡುವುದು ನನ್ನ ತಂದೆಯ ಕನಸಾಗಿತ್ತು. ಅವರು ಇಂದು ಇದ್ದಿದ್ದರೆ ತುಂಬಾ ಖುಷಿಪಡುತ್ತಿದ್ದರು. ಆದರೂ ಅವರ ಆಶೀರ್ವಾದ ನನ್ನ ಜೊತೆಗಿದೆ. ಅವರ ಅಗಲಿಕೆಯು ನನನ್ನು ಕಠಿಣ ಪರಿಸ್ಥಿತಿಗೆ ದೂಡಿತ್ತು. ಆದರೆ ತಾಯಿಯ ಜೊತೆ ಮಾತನಾಡಿದಾಗ ಮೇಲೆ ಸ್ವಲ್ಪ ಆತ್ಮ ವಿಶ್ವಾಸವನ್ನು ಪಡೆದುಕೊಂಡೆ ಎಂದು ಸಿರಾಜ್ ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ