ನವದೆಹಲಿ, ಸೆ. 25: ಐಪಿಎಲ್ ಎರಡನೇ ಲೆಗ್ ಶುರುವಾಗುವ ಮುನ್ನ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಭಾರತ ಅಲ್ಲಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ತಂಡವನ್ನ ಇಳಿಸದೇ ಇದ್ದ ಹಿನ್ನೆಲೆಯಲ್ಲಿ ಪಂದ್ಯ ಸ್ಥಗಿತಗೊಂಡಿತ್ತು. ಭಾರತದ ಆಟಗಾರರ ಧೋರಣೆ ವಿರುದ್ಧ ಇಂಗ್ಲೆಂಡ್ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟವಾಯಿತೆಂಬ ಅನುಕಂಪ ಹುಟ್ಟಿಕೊಂಡಿತು. ಈ ಮಧ್ಯೆ ಕೊನೆಯ ಟೆಸ್ಟ್ಗೆ ಪರಿಹಾರವಾಗಿ ಬೇರೊಂದು ದಿನ ಪಂದ್ಯ ಆಡಿಸಲು ಭಾರತ ಮತ್ತು ಇಂಗ್ಲೆಂಡ್ನ ಕ್ರಿಕೆಟ್ ಮಂಡಳಿಗಳ ಮಧ್ಯೆ ಚರ್ಚೆಯೂ ಆಗಿತ್ತು. ಆದರೆ, ಬ್ಯುಸಿ ಸ್ಕೆಡ್ಯೂಲ್ನಲ್ಲಿ ಆ ಟೆಸ್ಟ್ ಪಂದ್ಯಕ್ಕೆ ದಿನ ಹೊಂದಿಸುವುದು ದೊಡ್ಡ ಸವಾಲಿನ ಕೆಲಸವೇ. ಇದೀಗ, ಮುಂದಿನ ವರ್ಷ, ಅಂದರೆ 2022ರಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಒಂದು ಟೆಸ್ಟ್ ಪಂದ್ಯವನ್ನು ಆಡಿಸುವ ನಿರ್ಧಾರಕ್ಕೆ ಬರಲಾಗಿದೆ. ಇಎಸ್ಪಿಎನ್ ಕ್ರಿಕ್ ಇನ್ಫೋ ವೆಬ್ಸೈಟ್ನಲ್ಲಿ ಈ ಬಗ್ಗೆ ವರದಿಯೊಂದು ಪ್ರಕಟವಾಗಿದೆ.
2022ರ ಜುಲೈ ತಿಂಗಳಲ್ಲಿ ಆರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡಲು ಭಾರತ ತಂಡ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಆ ಸಂದರ್ಭದಲ್ಲಿ ಒಂದು ಟೆಸ್ಟ್ ಪಂದ್ಯವನ್ನೂ ಸ್ಕೆಡ್ಲೂಲ್ನಲ್ಲಿ ಸೇರಿಸಲಾಗಿದೆ. ಒಂದು ಟೆಸ್ಟ್ ಪಂದ್ಯದ ಜೊತೆಗೆ ಎರಡು ಹೆಚ್ಚುವರಿ ಟಿ20 ಪಂದ್ಯಗಳನ್ನೂ ಒಳಗೊಳ್ಳುವಂತೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಬಿಸಿಸಿಐಗೆ ಒತ್ತಾಯ ಹಾಕಿರುವುದು ತಿಳಿದುಬಂದಿದೆ. ಇದೇ ವೇಳೆ, ಮುಂದಿನ ವರ್ಷದ ಜುಲೈನಲ್ಲಿ ಈಗ ಫಿಕ್ಸ್ ಆಗಿರುವ ಒಂದು ಟೆಸ್ಟ್ ಪಂದ್ಯವು ಮ್ಯಾಂಚೆಸ್ಟರ್ನಲ್ಲಿ ಸ್ಥಗಿತಗೊಂಡ ಟೆಸ್ಟ್ ಪಂದ್ಯವಾಗಿ ಪರಿಗಣಿಸಲಾಗುತ್ತದಾ ಎಂಬುದು ನಿಖರವಾಗಿ ಗೊತ್ತಿಲ್ಲ. ಅಂದರೆ ಮುಂದಿನ ವರ್ಷದ ಆ ಟೆಸ್ಟ್ ಪಂದ್ಯವು ಐದು ಪಂದ್ಯಗಳ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಭಾಗವಾಗಿರುತ್ತದಾ ಎಂಬ ಪ್ರಶ್ನೆಗೆ ಖಚಿತ ಉತ್ತರ ಸಿಗಬೇಕಷ್ಟೇ. ಹಾಗೆಯೇ, ಮ್ಯಾಂಚೆಸ್ಟರ್ ನಗರದಲ್ಲೇ ಆ ಪಂದ್ಯ ನಡೆಯುತ್ತಾ ಎಂಬುದೂ ದೃಢಪಟ್ಟಿಲ್ಲ.
ಮೂಲಗಳ ಪ್ರಕಾರ, ಆ ಪಂದ್ಯವು ಐದನೇ ಟೆಸ್ಟ್ ಪಂದ್ಯವಾಗಿ ಪರಿಗಣಿಸಲಾಗುತ್ತದೆಯಂತೆ. ಯಾಕೆಂದರೆ, ಕೊನೆಯ ಪಂದ್ಯ ಸ್ಥಗಿತಗೊಂಡ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಯಾರು ವಿಜೇತರೆಂದು ಇನ್ನೂ ಘೋಷಣೆ ಮಾಡಿಲ್ಲ. ಭಾರತ ಈ ಸರಣಿಯಲ್ಲಿ 2-1ರಿಂದ ಮುಂದಿದೆ. ಕೊನೆಯ ಪಂದ್ಯ ಅನಿಶ್ಚಿತವಾಗಿರುವುದರಿಂದ ಸರಣಿಯ ಫಲಿತಾಂಶ ಘೋಷಣೆ ಮಾಡಿಲ್ಲವೆನ್ನಲಾಗಿದೆ. ಹೀಗಾಗಿ, ಈ ವರ್ಷದ ಇಂಗ್ಲೆಂಡ್ ಮತ್ತು ಭಾರತದ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮುಂದಿನ ವರ್ಷ ಜುಲೈನಲ್ಲಿ ನಡೆಯುತ್ತದೆ ಎಂಬುದು ಸದ್ಯಕ್ಕೆ ಗೊತ್ತಾಗಿರುವ ಸಂಗತಿ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಕೋಚ್ ರವಿಶಾಸ್ತ್ರಿ ಅವರಿಗೆ ಕೋವಿಡ್ ಪಾಸಿಟಿವ್ ಬಂದಿತು. ಆದರೂ ಭಾರತ ಇಂಗ್ಲೆಂಡ್ ನಾಲ್ಕನೇ ಪಂದ್ಯ ಅಬಾಧಿತವಾಗಿ ನಡೆಯಿತು. ಆದರೆ, ಐದನೇ ಟೆಸ್ಟ್ ಪಂದ್ಯ ಆರಂಭಕ್ಕೆ ಹಿಂದಿನ ದಿನ ಫಿಸಿಯೋ ಯೋಗೇಶ್ ಪಾರ್ಮರ್ ಅವರಿಗೂ ಸೋಂಕು ದೃಢಪಟ್ಟಿತು. ಪಂದ್ಯ ಶುರುವಾಗುವ ಸ್ವಲ್ಪ ಹೊತ್ತಿನ ಮೊದಲು ಭಾರತದಿಂದ ತಂಡವನ್ನು ಕಣಕ್ಕಿಳಿಸಲು ಸಾಧ್ಯವಾಗಿಲ್ಲ ಎಂಬ ಸಂದೇಶ ಬಂದಿತು. ಬಿಸಿಸಿಐ ಮತ್ತು ಇಸಿಬಿ ಕ್ರಿಕೆಟ್ ಮಂಡಳಿಗಳು ಈ ಪಂದ್ಯ ಸ್ಥಗಿತಗೊಂಡಿದೆ ಎಂದು ಅಧಿಕೃತವಾಗಿ ಹೇಳಿಕೆ ನೀಡಿದರು.
ಇದನ್ನೂ ಓದಿ: Navnita Gautam- ಇಡೀ ಐಪಿಎಲ್ನ ಸಪೋರ್ಟ್ ಸ್ಟಾಫ್ನಲ್ಲಿ ಏಕೈಕ ಹುಡುಗಿ; ಈಕೆ ಆರ್ಸಿಬಿ ಮಸಾಜ್ ಥೆರಪಿಸ್ಟ್
ಕೋವಿಡ್ ಸೋಂಕು ಹರಡುತ್ತದೆಂಬ ಹೆದರಿಕೆಯಲ್ಲಿ ಭಾರತದ ಆಟಗಾರರು ಆಟ ಆಡಲು ಹಿಂದೇಟು ಹಾಕಿದರು. ಹೀಗಾಗಿ, ಪಂದ್ಯ ಸ್ಥಗಿತಗೊಳಿಸಬೇಕಾಯಿತು. ತನಗೆ ಆಟಗಾರರ ಹಿತಾಸಕ್ತಿ ಬಹಳ ಮುಖ್ಯ ಎಂಬುದು ಬಿಸಿಸಿಐನ ವಾದ. ರವಿಶಾಸ್ತ್ರಿ ಅವರು ತಂಡ ಉಳಿದುಕೊಂಡಿದ್ದ ಹೋಟೆಲ್ನಲ್ಲಿ ತಮ್ಮ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಿದ್ದರು. ಆ ಕಾರ್ಯಕ್ರಮದಲ್ಲಿ ಅವರಿಗೆ ಕೋವಿಡ್ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಇಂಗ್ಲೆಂಡ್ನಲ್ಲಿ ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹೊತ್ತಿನಲ್ಲೇ ಯಾವುದೇ ಮುಂಜಾಗ್ರತೆ ಇಲ್ಲದೇ ರವಿಶಾಸ್ತ್ರಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದು ಟೀಕೆಗೆ ಕಾರಣವಾಗಿದೆ.
ಹಾಗೆಯೇ, ಕೋವಿಡ್ ಹೆದರಿಕೆಯಲ್ಲಿ ಪಂದ್ಯ ಸ್ಥಗಿತಗೊಳಿಸಿದ್ದ ಟೀಮ್ ಇಂಡಿಯಾ ಆಟಗಾರರು ಅದೇ ದಿನ ಮ್ಯಾಂಚೆಸ್ಟರ್ನ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು ಎಂದು ಕೆಲ ಇಂಗ್ಲೆಂಡ್ ಆಟಗಾರರು ದೂಷಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಭಾರತ ಕೊನೆಯ ಪಂದ್ಯ ಆಡದೇ ಹೋಗಿರುವುದು ಇಸಿಬಿಗೆ ಭಾರೀ ನಷ್ಟವಾಗಿದೆ ಎಂಬ ಅಂದಾಜು ಇದೆ. ಈಗ ಮುಂದಿನ ವರ್ಷ ಒಂದು ಪರ್ಯಾಯ ಟೆಸ್ಟ್ ಆಯೋಜಿಸುವ ನಿರ್ಧಾರ ಮಾಡಿ ಬಿಸಿಸಿಐ ಕೈತೊಳೆದುಕೊಂಡಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ