ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ, ಹಾಲಿ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಅವರು 21 ನೇ ಶತಮಾನದ ಟೆಸ್ಟ್ ಕ್ರಿಕೆಟ್ನ 6 ಅತ್ಯುತ್ತಮ ಬ್ಯಾಟ್ಸ್ಮನ್ಗಳ ಪಟ್ಟಿಯನ್ನು ಹೆಸರಿಸಿದ್ದಾರೆ. ಈ ಪಟ್ಟಿಯಲ್ಲಿ ಪ್ರಸ್ತುತ ಟಾಪ್ ಟೆಸ್ಟ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಜೋ ರೂಟ್ ಮತ್ತು ಸ್ಟೀವ್ ಸ್ಮಿತ್ ಅವರಂತಹ ಖ್ಯಾತ ಆಟಗಾರರು ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ದಿ ವಾಲ್ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಜಾಕ್ಸ್ ಕಾಲಿಸ್, ಅಲೆಸ್ಟರ್ ಕುಕ್ ಮತ್ತು ಕುಮಾರ್ ಸಂಗಕ್ಕಾರ ಅವರು ಈ ಶತಮಾನದ ಅತ್ಯುತ್ತಮ ಬ್ಯಾಟ್ಸ್ಮನ್ಗಳು ಎಂದಿದ್ದಾರೆ ಆಕಾಶ್ ಚೋಪ್ರಾ. ಅವರಲ್ಲಿ ಈ ಶತಮಾನದ ಶ್ರೇಷ್ಠ ಬ್ಯಾಟ್ಸ್ಮನ್ವೊಬ್ಬರನ್ನು ಕೂಡ ಆಕಾಶ್ ಚೋಪ್ರಾ ಆರಿಸಿರುವುದು ವಿಶೇಷ.
ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಭಾರತೀಯ ಟೆಸ್ಟ್ ತಂಡದ ಎರಡು ಆಧಾರಸ್ತಂಭಗಳಾಗಿದ್ದರು. ಹಾಗೆಯೇ ರಿಕಿ ಪಾಂಟಿಂಗ್ ಅವರು ಆಸ್ಟ್ರೇಲಿಯಾ ಮತ್ತು ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಆಕಾಶ್ ಚೋಪ್ರಾ ಬಣ್ಣಿಸಿದ್ದಾರೆ. ಇನ್ನು ಕುಮಾರ್ ಸಂಗಕ್ಕಾರ ಮತ್ತು ಇಂಗ್ಲೆಂಡ್ನ ಅಲೆಸ್ಟರ್ ಕುಕ್ ಕೂಡ ಈ ಪಟ್ಟಿಗೆ ಸೇರ್ಪಡೆಯಾಗುತ್ತಾರೆ. ಅದರೊಂದಿಗೆ ನೀವು ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಜಾಕ್ಸ್ ಕಾಲಿಸ್ ಅವರ ಟೆಸ್ಟ್ ಅಂಕಿಅಂಶಗಳನ್ನು ಪರಿಗಣಿಸಿದರೆ ಅವರು ಕೂಡ 21 ನೇ ಶತಮಾನದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ಮನ್ ಎಂದೇ ಹೇಳಬೇಕಾಗುತ್ತದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಈ ಶತಮಾನದಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳಲ್ಲಿ ಕಾಲಿಸ್ ಕೂಡ ಒಬ್ಬರು. ಅವರು ಏಷ್ಯಾ, ಆಸ್ಟ್ರೇಲಿಯಾ ಮತ್ತು ತವರಿನಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಅವರು ಟೆಸ್ಟ್ನಲ್ಲಿ 20 ಶತಕಗಳನ್ನು ಬಾರಿಸಿದ್ದಾರೆ. ಏಷ್ಯಾದಲ್ಲಿ ಅವರು 60ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದು, ಅಲ್ಲದೆ 8 ಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಒಂದು ವರ್ಷದಲ್ಲಿ 1000 ಕ್ಕೂ ಹೆಚ್ಚು ಟೆಸ್ಟ್ ರನ್ ಅನ್ನು 5 ಬಾರಿ ಗಳಿಸಿದ ಆಟಗಾರ ಕಾಲಿಸ್. ಟೆಸ್ಟ್ ಕ್ರಿಕೆಟ್ನಲ್ಲಿ 45 ಶತಕ ಹಾಗೂ 13289 ರನ್ ಬಾರಿಸಿರುವ ಜಾಕ್ಸ್ ಕಾಲಿಸ್ ನನ್ನ ಪ್ರಕಾರ 21ನೇ ಶತಮಾನದ ಶತಮಾನದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್. ಈ ಪಟ್ಟಿಯಲ್ಲಿ ಸಚಿನ್, ರಾಹುಲ್ ಅವರಂತಹ ದೊಡ್ಡ ಆಟಗಾರ ಹೆಸರುಗಳಿರುವುದರಿಂದ 21ನೇ ಶತಮಾನದ ಶ್ರೇಷ್ಠ ಬ್ಯಾಟ್ಸ್ಮನ್ ಆಯ್ಕೆ ಕಠಿಣ ಎನ್ನಬಹುದು. ಇದಾಗ್ಯೂ ನನ್ನ ಆಯ್ಕೆ ಜಾಕ್ಸ್ ಕಾಲಿಸ್ ಎಂದಿದ್ದಾರೆ ಆಕಾಶ್ ಚೋಪ್ರಾ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ