Chris Gayle: ವಯಸ್ಸು ಜಸ್ಟ್ ನಂಬರ್: ಮೈದಾನದಲ್ಲಿ ಯುನಿರ್ವಸ್ ಬಾಸ್ ಸಖತ್ ಸೆಲೆಬ್ರೇಷನ್ ವಿಡಿಯೋ ವೈರಲ್
ಈ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ಒದಗಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ್ದ ಡಿಕಾಕ್ 2 ಸಿಕ್ಸರ್ ಹಾಗೂ 6 ಬೌಂಡರಿಗಳನ್ನು ಬಾರಿಸಿದರು.
ವೆಸ್ಟ್ ಇಂಡೀಸ್ನ ಗ್ರೆನೆಡಾದ ಸೇಂಟ್ ಜಾರ್ಜ್ಸ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ದ ನಾಲ್ಕನೇ ಟಿ20 ಪಂದ್ಯದಲ್ಲಿ ವಿಂಡೀಸ್ ತಂಡ 21 ರನ್ ಜಯ ಗಳಿಸಿದೆ. ಈ ಜಯದೊಂದಿಗೆ ವೆಸ್ಟ್ ಇಂಡೀಸ್ ಐದು ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ಬ್ಯಾಟಿಂಗ್ನಲ್ಲಿ ವಿಫಲರಾದರೂ, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಪಂದ್ಯದ ಎರಡನೇ ಓವರ್ ಎಸೆಯಲು ಬಂದ ಕ್ರಿಸ್ ಗೇಲ್ ಮೊದಲ ಬಾಲ್ನಲ್ಲೇ ವಿಕೆಟ್ ಪಡೆದು ಸಂಭ್ರಮಿಸಿದರು. ಅದು ಅಂತಿಂಥ ಸಂಭ್ರಮವಾಗಿರಲಿಲ್ಲ. ಬದಲಾಗಿ ಸಹ ಆಟಗಾರ ಕೆವಿನ್ ಸಿಂಕ್ಲೇರ್ ಅವನರನ್ನು ಅಣಕಿಸಿದ ಸೆಲೆಬ್ರೇಷನ್ ಆಗಿತ್ತು. ಗೆಲ್ ಅವರ ಮೊದಲ ಎಸೆತದಲ್ಲೇ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹೆಂಡ್ರಿಕ್ಸ್ ಕೀಪರ್ಗೆ ಕ್ಯಾಚ್ ನೀಡಿದರು. ಇತ್ತ ವಿಕೆಟ್ ಸಿಗುತ್ತಿದ್ದಂತೆ ಗೇಲ್ ಪಲ್ಟಿ ಹೊಡೆದು ಸಂಭ್ರಮಿಸಿದರು. ಆದರೆ ಗೇಲ್ ಅವರ ಈ ಸಂಭ್ರಮದ ಹಿಂದಿನ ಕಾರಣ ಕೆವಿನ್ ಸಿಂಕ್ಲೇರ್.
ವೆಸ್ಟ್ ಇಂಡೀಸ್ ಯುವ ಆಟಗಾರ ಕೆವಿನ್ ಸಿಂಕ್ಲೇರ್ ವಿಕೆಟ್ ಪಡೆದರೆ ಅದ್ಭುತವಾಗಿ ಪಲ್ಟಿ ಹೊಡೆದು ಸಂಭ್ರಮಿಸುತ್ತಾರೆ. ಅವರಂತೆ ಗೇಲ್ ವಿಶಿಷ್ಟವಾಗಿ ಸಂಭ್ರಮಿಸಲು ಮುಂದಾಗಿದ್ದಾರೆ. ಆದರೆ 41 ವರ್ಷದ ಗೇಲ್ ಸಂಭ್ರಮಕ್ಕೂ ಕೆವಿನ್ ಸೆಲೆಬ್ರೇಷನ್ಗೂ ಅಜಗಜಾಂತರ ವ್ಯತ್ಯಾಸಗಳಿದ್ದರೂ, ಮೈದಾನದಲ್ಲಿ ಪ್ರೇಕ್ಷಕರ ಮನರಂಜನೆ ಒದಗಿಸಲು ಯಾವುದಕ್ಕೂ ಸಿದ್ಧ ಎಂಬುದನ್ನು ಸಾರಿದ್ದಾರೆ ಯುನಿವರ್ಸ್ ಬಾಸ್. ಅಷ್ಟೇ ಯುವಕರಂತೆ ಸಂಭ್ರಮಿಸುವ ಮೂಲಕ ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದು ನಿರೂಪಿಸಿದ್ದಾರೆ.
"The guys recommend for me to follow Kevin Sinclair's celebration."
— Cricket on BT Sport (@btsportcricket) July 1, 2021
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿತು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ನಡೆಸಿದ್ದ ದಕ್ಷಿಣ ಆಫ್ರಿಕಾ ಬೌಲರುಗಳು ಮೊದಲ 10 ಓವರ್ಗಳಲ್ಲಿ ಕೇವಲ 67 ರನ್ ನೀಡಿ 3 ವಿಕೆಟ್ ಉರುಳಿಸಿದ್ದರು. ಆದರೆ ದ್ವಿತೀಯ ಹತ್ತು ಓವರ್ಗಳಲ್ಲಿ ಇಡೀ ಪಂದ್ಯದ ಗತಿ ಬದಲಾಯಿತು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಕೀರನ್ ಪೊಲಾರ್ಡ್ ಕೊನೆಯ ಓವರ್ಗಳಲ್ಲಿ ಆರ್ಭಟಿಸಿದರು. ಅದರಂತೆ 5 ಸಿಕ್ಸರ್, 2 ಬೌಂಡರಿಗಳೊಂದಿಗೆ ಕೇವಲ 25 ಎಸೆತಗಳಲ್ಲಿ 51 ರನ್ ಚಚ್ಚಿದರು. ಪರಿಣಾಮ ನಿಗದಿತ 20 ಓವರ್ ಮುಕ್ತಾಯದ ವೇಳೆಗೆ ವೆಸ್ಟ್ ಇಂಡೀಸ್ ತಂಡದ ಮೊತ್ತ 6 ವಿಕೆಟ್ ನಷ್ಟಕ್ಕೆ 167 ಕ್ಕೆ ಬಂದು ನಿಂತಿತು.
ಈ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ಒದಗಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ್ದ ಡಿಕಾಕ್ 2 ಸಿಕ್ಸರ್ ಹಾಗೂ 6 ಬೌಂಡರಿಗಳನ್ನು ಬಾರಿಸಿದರು. ಅಲ್ಲದೆ 43 ಎಸೆತಗಳಲ್ಲಿ 60 ರನ್ ಬಾರಿಸಿ ಅಂತಿಮವಾಗಿ ಬ್ರಾವೊಗೆ ವಿಕೆಟ್ ಒಪ್ಪಿಸಿದರು. ಆದರೆ ಉಳಿದ ಯಾವುದೇ ಬ್ಯಾಟ್ಸ್ಮನ್ಗಳು ವಿಂಡೀಸ್ ಬೌಲರುಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು.
ಇತ್ತ ಬೌಲಿಂಗ್ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಕೆರಿಬಿಯನ್ನರು ಅಂತಿಮವಾಗಿ ದಕ್ಷಿಣ ಆಫ್ರಿಕಾವನ್ನು 146 ರನ್ಗಳಿಗೆ ನಿಯಂತ್ರಿಸಿ 21 ರನ್ಗಳ ಜಯ ಸಾಧಿಸಿದರು. ವೆಸ್ಟ್ ಇಂಡೀಸ್ ಪರ ಡ್ವೇನ್ ಬ್ರಾವೊ 4 ಓವರ್ನಲ್ಲಿ ಕೇವಲ 19 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಆಂಡ್ರೆ ರಸೆಲ್ 2 ವಿಕೆಟ್ ಕಬಳಿಸಿ ಮಿಂಚಿದರು.
ಇದೀಗ ಈ ಸರಣಿಯ ಅಂತಿಮ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ. ಏಕೆಂದರೆ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ 8 ವಿಕೆಟ್ಗಳಿಂದ ಗೆದ್ದು ಬೀಗಿತ್ತು. ದ್ವಿತೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 16 ರನ್ಗಳಿಂದ ಜಯ ಸಾಧಿಸಿತ್ತು. ಹಾಗೆಯೇ ತೃತೀಯ ಪಂದ್ಯದಲ್ಲಿ ಕೇವಲ 1 ರನ್ಗಳ ರೋಚಕ ಜಯವನ್ನು ದಕ್ಷಿಣ ಆಫ್ರಿಕಾ ತನ್ನದಾಗಿಸಿಕೊಂಡಿತ್ತು. ಇದೀಗ 4ನೇ ಪಂದ್ಯವನ್ನು 21 ರನ್ಗಳಿಂದ ವೆಸ್ಟ್ ಇಂಡೀಸ್ ಗೆಲ್ಲುವ ಮೂಲಕ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ. ಹೀಗಾಗಿ ಶನಿವಾರ ನಡೆಯಲಿರುವ ಕೊನೆಯ ಟಿ20 ಪಂದ್ಯದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
Published by:zahir
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ