AUS v IND: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್​ಗಳು ಇವರೇ..!

ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ನಾಲ್ಕನೇ ಟೆಸ್ಟ್ ಪಂದ್ಯ ಗೆಲ್ಲಲು ಸಚಿನ್ ಕಾರಣರಾಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 241 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.

Team India

Team India

 • Share this:
  ಆಸ್ಟ್ರೇಲಿಯಾ-ಭಾರತ ನಡುವಣ ಪ್ರತಿಷ್ಠಿತ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ಇದೇ ಡಿಸೆಂಬರ್ 17 ರಿಂದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಚಾಲನೆ ದೊರೆಯಲಿದೆ. ಒಟ್ಟು ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಮಾತ್ರ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದ ಮೂರು ಟೆಸ್ಟ್ ಪಂದ್ಯಕ್ಕೂ ಮುನ್ನ ಕೊಹ್ಲಿ ಪಿತೃತ್ವ ರಜೆಯಲ್ಲಿ ಭಾರತಕ್ಕೆ ಮರಳಲಿದ್ದಾರೆ. ಇನ್ನು 2ನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ.

  ಇತ್ತ ಉಭಯ ತಂಡಗಳಲ್ಲೂ ಬಲಿಷ್ಠ ಬ್ಯಾಟ್ಸ್​ಮನ್​ಗಳಿದ್ದು, ಹೀಗಾಗಿ ಯಾರು ಈ ಬಾರಿಯ ರನ್​ ಸರದಾರರಾಗಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಅದರಲ್ಲೂ ಒಂದು ಟೆಸ್ಟ್ ಪಂದ್ಯವಾಡಲಿರುವ ಕೊಹ್ಲಿ ಎಷ್ಟು ರನ್ ಕಲೆಹಾಕಲಿದ್ದಾರೆ ಎಂಬ ಕುತೂಹಲ ಎಲ್ಲರಲಿದೆ. ಏಕೆಂದರೆ ಈ ಹಿಂದೆ ಒಂದು ಟೆಸ್ಟ್​​ನಲ್ಲಿ ಟೀಮ್ ಇಂಡಿಯಾದ ಇಬ್ಬರು ಬ್ಯಾಟ್ಸ್​ಮನ್​ಗಳು ಆಸ್ಟ್ರೇಲಿಯಾ ವಿರುದ್ದ 300ಕ್ಕೂ ಹೆಚ್ಚು ರನ್ ಬಾರಿಸಿದ್ದರು. ಅವರ ಪರಿಚಯ ಇಲ್ಲಿದೆ.

  # 2 ಸಚಿನ್ ತೆಂಡೂಲ್ಕರ್: 2003-04ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡುವೆ ನಡೆದ ಟೆಸ್ಟ್ ಸರಣಿಯು ಸಾಕಷ್ಟು ರೋಚಕವಾಗಿತ್ತು. ನಾಲ್ಕನೇ ಟೆಸ್ಟ್ ಪಂದ್ಯದ ಮೊದಲು ಉಭಯ ತಂಡಗಳು 1–1ರಲ್ಲಿ ಸಮಬಲ ಸಾಧಿಸಿದ್ದವು. ಈ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ನಾಲ್ಕನೇ ಟೆಸ್ಟ್ ಪಂದ್ಯ ಗೆಲ್ಲಲು ಸಚಿನ್ ಕಾರಣರಾಗಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 241 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಹಾಗೆಯೇ ಎರಡನೇ ಇನ್ನಿಂಗ್ಸ್‌ನಲ್ಲೂ ಅಜೇಯ 60 ರನ್‌ಗಳನ್ನು ಬಾರಿಸಿದರು. ಈ ಎರಡು ಇನಿಂಗ್ಸ್​ ಮೂಲಕ ಸಚಿನ್ ಒಟ್ಟು 301 ರನ್ ಗಳಿಸಿದ್ದರು. ಅಲ್ಲದೆ ನಾಲ್ಕನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡುವ ಮೂಲಕ ಸರಣಿಯನ್ನು 1-1 ಸಮಬಲಕ್ಕೆ ಕಾರಣರಾಗಿದ್ದರು.

  # 1 ರಾಹುಲ್ ದ್ರಾವಿಡ್: 2003 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 556 ರನ್ ಗಳಿಸಿತು. ಆಸ್ಟ್ರೇಲಿಯಾ ಪರ ಕ್ಯಾಪ್ಟನ್ ರಿಕಿ ಪಾಂಟಿಂಗ್ 242 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ನಂತರ, ರಾಹುಲ್ ದ್ರಾವಿಡ್ ಭಾರತ ತಂಡಕ್ಕೆ ಸ್ಮರಣೀಯ ಇನ್ನಿಂಗ್ಸ್ ಕಟ್ಟಿದರು. ಅದ್ಭುತ ಡಬಲ್ ಸೆಂಚುರಿ ಬಾರಿಸಿದ ದ್ರಾವಿಡ್ 233 ರನ್ ಗಳಿಸಿದರು. ಲಕ್ಷ್ಮಣ್ (148) ದ್ರಾವಿಡ್ ಅವರ ಜೊತೆಯಾಟವು ಭಾರತದ ಮೊದಲ ಇನ್ನಿಂಗ್ಸ್‌ನ್ನು 523 ರನ್​ಗಳಿಗೆ ತಂದು ನಿಲ್ಲಿಸಿತು.

  ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 33 ರನ್‌ಗಳ ಮುನ್ನಡೆ ಸಾಧಿಸಿತು. ಇದರ ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ ಅಜಿತ್ ಅಗರ್ಕರ್ ಅವರ ಭರ್ಜರಿ ಬೌಲಿಂಗ್ ನೆರವಿನಿಂದ ಭಾರತವು ಆಸ್ಟ್ರೇಲಿಯಾ ತಂಡವನ್ನು 196 ಕ್ಕೆ ಆಲೌಟ್ ಮಾಡಿತು. ಈ ಪಂದ್ಯವನ್ನು ಗೆಲ್ಲಲು ಭಾರತಕ್ಕೆ 230 ರನ್ ಬೇಕಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತವು ಎರಡನೇ ಇನ್ನಿಂಗ್ಸ್​ನಲ್ಲಿ ದ್ರಾವಿಡ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಜೇಯ 70 ರನ್ ಗಳಿಸಿದ ದ್ರಾವಿಡ್ ಭಾರತಕ್ಕೆ ಜಯ ತಂದುಕೊಟ್ಟರು. ಈ ಎರಡು ಇನ್ನಿಂಗ್ಸ್‌ಗಳ ಮೂಲಕ ರಾಹುಲ್ ದ್ರಾವಿಡ್ ಒಟ್ಟು 303 ರನ್ ಕಲೆಹಾಕಿದ್ದರು.

  ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಕಿಂಗ್ ಪ್ರಕಟ: ಟಾಪ್ 10 ಪಟ್ಟಿಯಲ್ಲಿ ಇಬ್ಬರು ಭಾರತೀಯರು
  Published by:zahir
  First published: