ಕೋಟಿಫ್ ಕಪ್ ಅಂಡರ್-20 ಫುಟ್ಬಾಲ್: ವೆನಿಜುವೆಲಾ ಎದುರು ಡ್ರಾ ಸಾಧಿಸಿದ ಭಾರತ


Updated:August 4, 2018, 5:37 PM IST
ಕೋಟಿಫ್ ಕಪ್ ಅಂಡರ್-20 ಫುಟ್ಬಾಲ್: ವೆನಿಜುವೆಲಾ ಎದುರು ಡ್ರಾ ಸಾಧಿಸಿದ ಭಾರತ

Updated: August 4, 2018, 5:37 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 04): ಸ್ಪೇನ್​ನ ವೇಲೆನ್ಷಿಯಾದಲ್ಲಿ ನಡೆಯುತ್ತಿರುವ ಕೋಟಿಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸತತ ಎರಡು ಸೋಲನುಭವಿಸಿದ ಬಳಿಕ ಭಾರತ ಅಂಡರ್-20 ಫುಟ್ಬಾಲ್ ತಂಡ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ನಿನ್ನೆ ರಾತ್ರಿ ವೆನೆಜುವೆಲಾ ಮತ್ತು ಭಾರತ ನಡುವಿನ ಪಂದ್ಯ 0-0 ಡ್ರಾ ಆಯಿತು. ತನ್ನ ಹಿಂದಿನ ಎರಡು ಪಂದ್ಯಗಳಿಗೆ ಹೋಲಿಸಿದರೆ ಈ ಪಂದ್ಯದಲ್ಲಿ ಭಾರತೀಯರು ಸುಧಾರಿತ ಪ್ರದರ್ಶನ ನೀಡಿದರು. ಭಾರತೀಯ ಹುಡುಗರಿಗೆ ಗೋಲು ಗಳಿಸಲು 3-4 ಅವಕಾಶಗಳು ಪ್ರಾಪ್ತವಾಗಿದ್ದವು. ಭಾರತೀಯ ತಂಡದ ರಕ್ಷಣಾ ವ್ಯೂಹ ಕೂಡ ಪ್ರಬಲವಾಗಿತ್ತು. ಎದುರಾಳಿಗಳ ದಾಳಿಗಳನ್ನು ಭಾರತೀಯ ಡಿಫೆಂಡರ್ಸ್ ಮತ್ತು ಮಿಡ್​ಫೀಲ್ಡರ್ಸ್ ಸಮರ್ಥವಾಗಿ ನಿಭಾಯಿಸಿದರು.

ಕೋಟಿಫ್ ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಬಿ ಡಿವಿಷನ್ ತಂಡವಾದ ರಿಯಲ್ ಮುರ್ಷಿಯಾ ಹಾಗೂ ಆಫ್ರಿಕಾದ ಮಾರಿಟುವಾನಾ ರಾಷ್ಟ್ರೀಯ ಅಂಡರ್-20 ತಂಡಗಳ ಎದುರು ಭಾರತೀಯರು ಸೋಲಪ್ಪಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆಯ ಪಂದ್ಯದ ಫಲಿತಾಂಶವು ಭಾರತಕ್ಕೆ ತುಸು ಸಮಾಧಾನಕರವಾಗಿದೆ. ನಾಳೆ ರಾತ್ರಿ ನಡೆಯಲಿರುವ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಅರ್ಜೆಂಟೀನಾ ಅಂಡರ್-20 ತಂಡವನ್ನು ಭಾರತೀಯರು ಎದುರಿಸಲಿದ್ದಾರೆ. ಟೂರ್ನಿಯಲ್ಲಿ ಅತ್ಯಂತ ಬಲಿಷ್ಠವೆನಿಸಿರುವ ಈ ತಂಡದ ವಿರುದ್ಧ ಭಾರತ ಗೆಲ್ಲುವ ನಿರೀಕ್ಷೆ ಇಲ್ಲವಾದರೂ ಸಮಬಲ ಸಾಧಿಸಲಾದರೂ ಯತ್ನಿಸಬಹುದು.

ಅಂಡರ್-20 ವಿಶ್ವಕಪ್ ಕ್ವಾಲಿಫೈಯರ್​ಗೆ ಮುನ್ನ ಭಾರತೀಯ ಹುಡುಗರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಅದರ ಭಾಗವಾಗಿ ಸ್ಪೇನ್ ಪ್ರವಾಸ ನಡೆಸಿದ್ದಾರೆ. ವಿಶ್ವದ ಅನೇಕ ಜೂನಿಯರ್ ತಂಡಗಳ ಎದುರು ಸೆಣಸಾಡುತ್ತಿರುವ ಭಾರತೀಯ ಕಿರಿಯರು ಈಗ ಹೊಸ ಆತ್ಮವಿಶ್ವಾಸದಲ್ಲಿದ್ದಾರೆ.

ಮಹಿಳಾ ತಂಡಕ್ಕೆ ಸೋಲು: 
ಇದೇ ವೇಳೆ, ಕೋಟಿಫ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತ ಮಹಿಳಾ ರಾಷ್ಟ್ರೀಯ ತಂಡ ಹೀನಾಯ ಸೋಲನುಭವಿಸಿದೆ. ಸ್ಪೇನ್​ನ ಸ್ಥಳೀಯ ಕ್ಲಬ್ ಲೆವಂಟೆ ಯು.ಡಿ. ವಿರುದ್ಧ ಭಾರತ ಮಹಿಳಾ ತಂಡ 0-5 ಗೋಲುಗಳಿಂದ ಪರಾಭವಗೊಂಡಿತು. ಭಾರತೀಯ ಮಹಿಳೆಯರು ನಾಳೆ ಮೊರಾಕ್ಕೋ ರಾಷ್ಟ್ರೀಯ ತಂಡದ ಪೈಪೋಟಿ ಎದುರಿಸಲಿದೆ.
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...