ಹೈಜಂಪ್​ನಲ್ಲಿ ಭಾರತದ ಏಕೈಕ ಸ್ಪರ್ಧಿ ಕರ್ನಾಟಕದ ಬಿ. ಚೇತನ್; ಇವರಿಗೆ ಗೆಲುವಿನ ಚಾನ್ಸ್ ಎಷ್ಟು?


Updated:August 18, 2018, 6:57 PM IST
ಹೈಜಂಪ್​ನಲ್ಲಿ ಭಾರತದ ಏಕೈಕ ಸ್ಪರ್ಧಿ ಕರ್ನಾಟಕದ ಬಿ. ಚೇತನ್; ಇವರಿಗೆ ಗೆಲುವಿನ ಚಾನ್ಸ್ ಎಷ್ಟು?
ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಕೂಟದಲ್ಲಿ ಕರ್ನಾಟಕದ ಬಿ. ಚೇತನ್

Updated: August 18, 2018, 6:57 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 18): ಬೆಂಗಳೂರಿನ ಹುಡುಗ ಚೇತನ್ ಬಾಲಸುಬ್ರಮಣ್ಯ ಏಷ್ಯಾ ಮಟ್ಟದಲ್ಲಿ ಮಿಂಚಲು ಅಣಿಯಾಗಿದ್ಧಾರೆ. ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನ ಹೈಜಂಪ್ ಸ್ಪರ್ಧೆಯಲ್ಲಿ ಚೇತನ್ ಬಿ. ಭಾರತವನ್ನು ಪ್ರತಿನಿಧಿಸಲಿದ್ದಾರೆ. ಭಾರತೀಯ ವಾಯುಪಡೆಯ ಉದ್ಯೋಗಿಯಾಗಿರುವ ಚೇತನ್ ಅವರು ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್ ಟ್ರಯಲ್ಸ್​ ಮೂಲಕ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ನಡೆದ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಕೂಟದಲ್ಲಿ ದಾಖಲೆವೀರ ತೇಜಸ್ವಿನ್ ಶಂಕರ್ ಅವರನ್ನ ಹಿಂದಿಕ್ಕಿ ಚಿನ್ನದ ಪದಕ ಗೆದ್ದಿದ್ದರು. ಕೆ.ಆರ್.ಪುರಂನ ಸರಕಾರಿ ಕಾಲೇಜಿನ ಮಾಜಿ ವಿದ್ಯಾರ್ಥಿ ಚೇತನ್ ಬಾಲಸುಬ್ರಮಣ್ಯ ಅವರು 2.18 ಮೀಟರ್ ಎತ್ತರಕ್ಕೆ ಜಿಗಿದಿದ್ದರು. ಅದು ಅವರ ಈವರೆಗಿನ ಬೆಸ್ಟ್ ಪರ್ಫಾರ್ಮೆನ್ಸ್ ಎನಿಸಿದೆ.

ಆದರೆ, ಸದ್ಯಕ್ಕೆ ಹೈಜಂಪ್​ನಲ್ಲಿ ಭಾರತದ ಬೆಸ್ಟ್ ಅಥ್ಲೀಟ್ ಎಂದರೆ ತೇಜಸ್ವಿನ್ ಶಂಕರ್ ಅವರಾಗಿದ್ಧಾರೆ. ದಿಲ್ಲಿಯ ತೇಜಸ್ವಿನ್ ಶಂಕರ್ ಅವರು ಕೊಯಂಬತ್ತೂರಿನಲ್ಲಿ ನಡೆದ ಅಥ್ಲೆಟಿಕ್ಸ್ ಕೂಟದಲ್ಲಿ 2.26 ಮೀಟರ್ ಎತ್ತರಕ್ಕೆ ಜಿಗಿದು ರಾಷ್ಟ್ರೀಯ ದಾಖಲೆ ಮುರಿದಿದ್ದರು. ಆದರೆ, ಗಾಯದ ಕಾರಣದಿಂದ ಏಷ್ಯನ್ ಗೇಮ್ಸ್​ನಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ. ಫೆಡರೇಶನ್ ಕಪ್ ಕೂಟದಲ್ಲಿ ಇದೇ ಇಂಜುರಿ ಕಾರಣದಿಂದ ಅವರು ಐದನೇ ಸ್ಥಾನ ಪಡೆದಿದ್ದರು.

ಏಷ್ಯನ್ ಗೇಮ್ಸ್​ನಲ್ಲಿ ಚೇತನ್ ಚಿನ್ನ ಗೆಲ್ಲಬಲ್ಲರೇ?

ಚೇತನ್ ಬಾಲಸುಬ್ರಮಣ್ಯ ಅವರ ಅತ್ಯುತ್ತಮ ಸಾಧನೆ ಎಂದರೆ 2.18 ಮೀಟರ್ ಎತ್ತರದ ಜಿಗಿತವೇ ಆಗಿದೆ. ಕತಾರ್​ನ ಮುತಾಜ್ ಎಸ್ಸಾ ಬರ್ಷಿಮ್ ಅವರು 2.35 ಮೀಟರ್ ಎತ್ತರ ಜಿಗಿದದ್ದು ಏಷ್ಯನ್ ಗೇಮ್ಸ್ ದಾಖಲೆಯಾಗಿದೆ. ಕಳೆದ ಬಾರಿಯ ಇಂಚೋನ್ ಏಷ್ಯಾಡ್​ನಲ್ಲಿ ಕಂಚಿನ ಪದಕ ಗೆದ್ದಿದ್ದ ಸ್ಪರ್ಧಿ ಜಿಗಿದ ಎತ್ತರ 2.25 ಮೀಟರ್ ಆಗಿತ್ತು. ಈ ಹಿನ್ನೆಲೆಯಲ್ಲಿ ಚೇತನ್ ಅವರಿಗೆ ಪದಕ ಗೆಲ್ಲುವ ಸಾಧ್ಯತೆ ತುಸು ಕಡಿಮೆಯೇ ಇದೆ. ಅವರು ತಮ್ಮ ವೈಯಕ್ತಿಕ ಗರಿಷ್ಠ ಸಾಧನೆಯನ್ನು ಉತ್ತಮಗೊಳಿಸಿದರೆ ಕಂಚಿನ ಪದಕಕ್ಕೆ ಪ್ರಯತ್ನಿಸಬಹುದಿತ್ತು. ಚೇತನ್ ಬದಲು ದಿಲ್ಲಿಯ ತೇಜಸ್ವಿನ್ ಶಂಕರ್ ಅವರು ಫಿಟ್ ಆಗಿ ಕಣಕ್ಕಿಳಿದಿದ್ದರೆ ಪದಕದ ಸಾಧ್ಯತೆ ಹೆಚ್ಚಿರುತ್ತಿತ್ತೆನ್ನಲಾಗಿದೆ.

ಇದೇ ಆಗಸ್ಟ್ 28ರಂದು ಹೈಜಂಪ್​ನ ಅರ್ಹತಾ ಟ್ರಯಲ್ ನಡೆಯಲಿದೆ. ಅಲ್ಲಿ ಚೇತನ್ ಬಾಲಸುಬ್ರಮಣ್ಯ ಅವರ ಸಾಮರ್ಥ್ಯದ ಪರೀಕ್ಷೆಯಾಗಲಿದೆ. ಇನ್ನು, ಮಹಿಳೆಯರ ವಿಭಾಗದ  ಹೈಜಂಪ್​ನಲ್ಲಿ ಭಾರತದ ಸ್ಪರ್ಧೆ ಇಲ್ಲದಿರುವುದರಿಂದ ಚೇತನ್ ಮೇಲೆಯೇ ಸಾಕಷ್ಟು ಗಮನ ನೆಟ್ಟಿದೆ. ಆದರೆ ಬೆಂಗಳೂರಿನ ಹುಡುಗ ಆತ್ಮವಿಶ್ವಾಸದಿಂದ ಕಣಕ್ಕಿಳಿದು ನಾಡಿಗೆ ಕೀರ್ತಿ ತರಲೆಂದು ಆಶಿಸಬಹುದು.
First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ