Aamir vs Vishi- ನನ್ನ ಪಾತ್ರ ಆಮೀರ್ ಖಾನ್ ಮಾಡಿದರೆ ಚಂದ ಎಂದ ಚೆಸ್ ಚಾಂಪಿಯನ್; ಅವರ ಆಸೆಗೆ ಕಾರಣ ಇದು

Vishwanathan Anand’s biopic- ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಖಾಸಗಿ ಬದುಕು ಬಹುತೇಕ ಖಾಸಗಿಯಾಗೇ ಉಳಿದುಕೊಂಡಿದೆ. ಇದೀಗ ಅವರ ಜೀವನಾಧಾರಿತ ಕಥೆಯುಳ್ಳ ಸಿನಿಮಾ ತಯಾರಾಗಲಿರುವುದು ಸಾಕಷ್ಟು ಕುತೂಹಲ ಹುಟ್ಟಿಸಿದೆ.

ವಿಶ್ವನಾಥನ್ ಆನಂದ್

ವಿಶ್ವನಾಥನ್ ಆನಂದ್

  • Share this:
ಜನಪ್ರಿಯ ಆಟಗಾರರ ಜೀವನಾಧಾರಿತ ಸಿನಿಮಾ ಮಾಡುವುದು ಬಾಲಿವುಡ್‌ನಲ್ಲಿ ಒಂದು ಹೊಸ ಟ್ರೆಂಡ್ ಶುರುವಾಗಿದೆ ಎಂದು ಹೇಳಬಹುದು. ಕೆಲವು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ, ಫ್ಲೈಯಿಂಗ್ ಸಿಖ್ ಎಂತಲೇ ಹೆಸರನ್ನ ಪಡೆದಿದ್ದ ಭಾರತದ ಓಟಗಾರ ಮಿಲ್ಕಾ ಸಿಂಗ್, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಹೀಗೆ ಅನೇಕರ ಬಗ್ಗೆ ಸಿನೆಮಾಗಳನ್ನು ಮಾಡಲಾಗಿದೆ. ಇತ್ತೀಚೆಗೆ ಭಾರತದ ಕ್ರಿಕೆಟ್ ತಂಡದ ಇನ್ನೊಬ್ಬ ಮಾಜಿ ನಾಯಕ ಸೌರವ್ ಗಂಗೂಲಿ ಜೀವನಾಧಾರಿತ ಚಿತ್ರ ಮಾಡಲಾಗುತ್ತಿದೆ. ಈಗ ಭಾರತದ ಇನ್ನೊಬ್ಬ ಪ್ರಸಿದ್ಧ ಕ್ರೀಡಾ ವ್ಯಕ್ತಿಯ ಜೀವನಾಧಾರಿತ ಚಿತ್ರ ಮಾಡಲಾಗುತ್ತಿದೆ. ಅದು ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಚೆಸ್ ಆಟಗಾರರ ಸಾಲಿಗೆ ಬರುವ ವಿಶ್ವನಾಥನ್ ಆನಂದ್, ಅಕಾ ವಿಶಿ ಬಗೆಗಿನ ಸಿನಿಮಾ.

5 ಬಾರಿ ವಿಶ್ವ ಚೆಸ್ ಚಾಂಪಿಯನ್ ಆದ ವಿಶ್ವನಾಥನ್ ಆನಂದ್ ಸುಮಾರು 2 ವರ್ಷಗಳ ನಂತರ ಕೋಲ್ಕತ್ತಾಗೆ ಬಂದು ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಜೀವನಾಧಾರಿತ ಚಿತ್ರದ ಒಂದಷ್ಟು ಬೆಳಕು ಚೆಲ್ಲಿದ್ದಾರೆ. ವಿಶಿ ಯಾವತ್ತೂ ತಮ್ಮ ಖಾಸಗಿ ಬದುಕನ್ನು ಹೊರಗೆ ತೋರ್ಪಡಿಸಿಕೊಂಡಿದ್ದು ತೀರಾ ಕಡಿಮೆ. ಅವರ ಖಾಸಗಿ ಬದುಕು ಬಹುತೇಕ ಖಾಸಗಿಯಾಗಿಯೇ ಉಳಿದಿದೆ. ಇವರು ದಿಢೀರನೇ ಸಿನಿಮಾ ರೂಪದಲ್ಲಿ ತಮ್ಮ ಬದುಕನ್ನ ಹೊರಜಗತ್ತಿಗೆ ತೆರೆದಿಡುತ್ತಾರೆ ಅಂದರೆ? ಅವರ ವೈಯಕ್ತಿಕ ಬದುಕಿನ ರೋಚಕ ಘಟನೆಗಳು, ಅವಿಸ್ಮರಣೀಯ ಸಂಗತಿಗಳು, ಪ್ರೀತಿ ಪ್ರೇಮ ಪ್ರಣಯ (ಇದ್ದರೆ) ಇತ್ಯಾದಿ ವಿಚಾರಗಳು ತೆರೆಯ ಮೇಲೆ ಬರುತ್ತವೆಯೇ ಎಂಬ ಕುತೂಹಲಭರಿತ ಪ್ರಶ್ನೆಗಳು ಕಾಡುತ್ತವೆ.

"ನಾನು ಬಯೋಪಿಕ್​ಗೆ ಒಪ್ಪಿದ್ದೇನೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ನಿರ್ಮಾಪಕರೊಂದಿಗೆ ಚರ್ಚಿಸಲಾಗಿದೆ. ನನ್ನ ಜೀವನದ ಕಥೆಯನ್ನ ಹೇಳಿದ್ದೇನೆ. ಸ್ಕ್ರಿಪ್ಟ್ ಕೆಲಸ ಶೀಘ್ರದಲ್ಲೇ ಶುರುವಾಗುತ್ತದೆ” ಎಂದು ವಿಶ್ವನಾಥನ್ ಆನಂದ್ ಹೇಳಿದ್ಧಾರೆ.

ಕೊರೊನಾದಿಂದಾಗಿ ಎಲ್ಲಾ ಕೆಲಸ ಸ್ಥಗಿತಗೊಂಡಿತ್ತು. ಸದ್ಯದಲ್ಲೇ ಎಲ್ಲಾ ಕೆಲಸ ಮತ್ತೆ ಶುರುವಾಗಬಹುದು ಎಂದು ಆಶಿಸಿದ್ದೇನೆ. ಈ ಬಯೋಪಿಕ್ ಬಗ್ಗೆ ನಾನು ಈಗ ಹೆಚ್ಚು ಹೇಳಲಾರೆ. ಚಿತ್ರೀಕರಣ ಯಾವಾಗ, ಹೇಗೆ ಆರಂಭಗೊಳ್ಳುತ್ತದೆಯೋ ಗೊತ್ತಿಲ್ಲ. ಈ ಸಿನಿಮಾ ಬಗ್ಗೆ ಮಾಹಿತಿ ತಿಳಿಯಲು ಸ್ವಲ್ಪ ದಿನ ಕಾಯಬೇಕಾಗಬಹುದು ಎಂದು ವಿಶ್ವ ಮಾಜಿ ಚೆಸ್ ಚಾಂಪಿಯನ್ ಹೇಳಿದ್ದಾರೆ.

ನನ್ನ ಪಾತ್ರ ಆಮೀರ್ ಮಾಡಿದರೆ ಚಂದ:

ಬಯೋಪಿಕ್​ನಲ್ಲಿ ವಿಶ್ವನಾಥನ್ ಆನಂದ್ ಅವರ ಪಾತ್ರ ಯಾರಿಗೆ ಹೊಂದಿಕೆ ಆಗುತ್ತದೆ ಎಂದು ನೀವೆಲ್ಲಾ ಯೋಚಿಸುತ್ತಿರಬಹುದು. ಒಂದೆರಡು ಸ್ಟಾರ್​ಗಳು ಕಣ್ಮುಂದೆ ಬಂದು ಹೋಗಿರಬಹುದು. ಆದರೆ, ತಮ್ಮ ಪಾತ್ರ ಯಾರು ಮಾಡಿದರೆ ಚಂದ ಎಂದು ಖುದ್ದು ವಿಶ್ವನಾಥನ್ ಆನಂದ್ ಅವರನ್ನ ಕೇಳಿದರೆ ಸಿಗುವ ಉತ್ತರ ಆಮೀರ್ ಖಾನ್.

ಇದನ್ನೂ ಓದಿ: Akshay Kumar: ನಾಯಕಿಯೊಂದಿಗೆ ವಯಸ್ಸಿನ ವ್ಯತ್ಯಾಸ: ಟ್ರೋಲ್‌ ಆದ ಅಕ್ಷಯ್‌ ಕುಮಾರ್

"ಈ ಚಿತ್ರದಲ್ಲಿ ನನ್ನ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂದು ನಾನು ಹೇಳಲಾರೆ. ಆದರೆ ನಾನು ನನ್ನ ಆಯ್ಕೆಯನ್ನು ಮಾತ್ರ ಹೇಳಬಲ್ಲೆ. ತೆರೆಯ ಮೇಲೆ ವಿಶ್ವನಾಥನ್ ಆನಂದ್ ಪಾತ್ರವನ್ನು ಆಮೀರ್ ಖಾನ್ ಮಾಡಿದರೆ ಚಂದ ಇರತ್ತೆ ಅನಿಸುತ್ತೆ. ನನ್ನ ಮತ್ತು ಆಮೀರ್ ಖಾನ್ ನಡುವೆ ಸಾಕಷ್ಟು ಸಾಮ್ಯತೆ ಇದೆ" ಎಂದು ವಿಶಿ ಹೇಳಿದ್ದಾರೆ.

ನಿರ್ದೇಶಕರು ಯಾರು?

ನಿಮ್ಮ ಜೀವನಾಧಾರಿತ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಆನಂದ್, "ಈಗಾಗಲೇ ಸುದ್ದಿಯಲ್ಲಿರುವಂತೆ 'ತನು ವೆಡ್ಸ್ ಮನು' ಚಿತ್ರದ ನಿರ್ದೇಶಕ ಆನಂದ್ ಎಲ್ ರಾಯ್ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ” ಎಂದು ಆನಂದ್ ಈ ಸಂದರ್ಶನದಲ್ಲಿ ತಿಳಿಸಿದ್ಧಾರೆ.

ಇದನ್ನೂ ಓದಿ: Anushka Sharma: ಅನುಷ್ಕಾ ಶರ್ಮಾ ತೊಟ್ಟ ಸ್ವಿಮ್​ಸೂಟ್ ಬೆಲೆಗೆ ಬೆಂಗಳೂರಲ್ಲಿ ಆರಾಮಾಗಿ ಒಂದು ಮನೆ ಬಾಡಿಗೆಗೆ ಸಿಗುತ್ತದೆ, ಬೆಲೆ ಎಷ್ಟು ಹೇಳಿ...

51 ವರ್ಷದ ವಿಶ್ವನಾಥನ್ ಆನಂದ್ ಹೆಚ್ಚೂಕಡಿಮೆ ಮೂರ್ನಾಲ್ಕು ದಶಕಗಳ ಕಾಲ ಚೆಸ್ ಜಗತ್ತಿನಲ್ಲಿ ಭಾರತದ ಕೀರ್ತಿಪತಾಕೆ ಹಾರಿಸುತ್ತಾ ಬಂದಿದ್ದಾರೆ. 50 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ನಿವೃತ್ತಿಯ ಪ್ರಶ್ನೆ ಏಳುತ್ತದೆ. ಈ ಬಗ್ಗೆ ಖುದ್ದು ವಿಶ್ವನಾಥನ್ ಆನಂದ್ ಅವರನ್ನ ಕೇಳಿದರೆ ಸಿಗುವ ಉತ್ತರ ಇಲ್ಲ ಎಂದೇ.

ನಿವೃತ್ತಿ ಯಾವಾಗ?

"ಈಗ ನಿವೃತ್ತಿಯ ಪ್ರಶ್ನೆಯೇ ಇಲ್ಲ. ಚೆಸ್ ಆಡುವುದನ್ನು ನಾನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ, ನಾನು ಆನ್‌ಲೈನ್ ಮೂಲಕ ಅನೇಕ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದೇನೆ. ಮುಂಬರುವ ದಿನಗಳಲ್ಲಿ ಸಾಕಷ್ಟು ಪಂದ್ಯಗಳಿವೆ. ನವೆಂಬರ್ 24ರಿಂದ ಪ್ರಾರಂಭವಾಗುವ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ನಾನು ವೀಕ್ಷಕ ವಿವರಣೆಗಾರನಾಗಿದ್ದೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ಕ್ರಿಕೆಟಿಗರಿಂದ ಆದ ಮಾನಸಿಕ ಕಿರುಕುಳದ ಅನುಭವ ಬಿಚ್ಚಿಟ್ಟ ಅಜೀಮ್ ರಫೀಕ್

ವಿಶಿ ವೈಯಕ್ತಿಕ ಬದುಕಿನ ಬಗ್ಗೆ ಇಷ್ಟು ಮಾತ್ರ ಗೊತ್ತು?

1969, ಡಿ. 11ರಂದು ಆಗಿನ ಮದ್ರಾಸ್​ನಲ್ಲಿ ಅವರು ಹುಟ್ಟಿದ್ದು. 1996ರಲ್ಲಿ ಅರುಣಾ ಅವರನ್ನ ವಿವಾಹವಾದರು. 2011, ಏಪ್ರಿಲ್ 9ರಂದು ಮಗನ ಜನನ. ಆನಂದ್ ಅಖಿಲ್ ಎಂದು ಮಗನಿಗೆ ಹೆಸರಿಟ್ಟಿದ್ಧಾರೆ. 2010ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಔತನಕೂಟ ಏರ್ಪಡಿಸಿದ್ದರು. ಅದಕ್ಕೆ ಆಹ್ವಾನ ಪಡೆದ ಏಕೈಕ ಕ್ರೀಡಾಪಟು ವಿಶ್ವನಾಥನ್ ಆನಂದ್ ಅವರಾಗಿದ್ದರು.

ನಿನ್ನೆಯಿಂದ (ನ. 17) ಕೋಲ್ಕತ್ತಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿಗಳು ನಡೆಯುತ್ತಿವೆ. ಮುಂದಿನ ಭಾನುವಾರದವರೆಗು ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಆನಂದ್ ಅವರನ್ನು ಸ್ಪರ್ಧೆಯ ಮಾರ್ಗದರ್ಶಕರನ್ನಾಗಿ ನೇಮಿಸಲಾಗಿದೆ.
Published by:Vijayasarthy SN
First published: