ಬಾಕ್ಸಿಂಗ್, ಬ್ರಿಡ್ಜ್​ನಲ್ಲೂ ಸ್ವರ್ಣಬೇಟೆ; ಭಾರತಕ್ಕೆ 15 ಚಿನ್ನಗಳ ಗರಿ


Updated:September 1, 2018, 1:55 PM IST
ಬಾಕ್ಸಿಂಗ್, ಬ್ರಿಡ್ಜ್​ನಲ್ಲೂ ಸ್ವರ್ಣಬೇಟೆ; ಭಾರತಕ್ಕೆ 15 ಚಿನ್ನಗಳ ಗರಿ
ಅಮಿತ್ ಪಂಘಲ್

Updated: September 1, 2018, 1:55 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಸೆ. 01): ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಉತ್ತುಂಗಕ್ಕೇರಿದೆ. ಇಂದು ಶನಿವಾರ ಭಾರತಕ್ಕೆ 2 ಚಿನ್ನ ಸಿಕ್ಕಿವೆ. ಇದರೊಂದಿಗೆ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟು 15 ಸ್ವರ್ಣ ಪದಕಗಳು ದೊರೆತಂತಾಗಿವೆ. ಪುರುಷರ 49 ಕಿಲೋ ಬಾಕ್ಸಿಂಗ್ ಸ್ಪರ್ಧೆಯ ಫೈನಲ್​ನಲ್ಲಿ ಭಾರತದ ಅಮಿತ್ ಪಂಘಲ್ ಅವರು ಭರ್ಜರಿ ಗೆಲುವು ಸಾಧಿಸಿದರು. ಉಜ್ಬೆಕಿಸ್ತಾನದ ಒಲಿಂಪಿಕ್ ಚಾಂಪಿಯನ್ ಹಸನ್​ಬೋಯ್ ಡುಸ್ಮಟೋವ್ ವಿರುದ್ಧ ಅಮಿತ್ ಪಂಘಲ್ ರೋಚಕ ಗೆಲುವು ಸಾಧಿಸಿ ಏಷ್ಯನ್ ಗೇಮ್ಸ್ ಚಾಂಪಿಯನ್ ಎನಿಸಿದರು. ನಿನ್ನೆ ಚಿನ್ನದ ನಿರೀಕ್ಷೆ ಮೂಡಿಸಿದ್ದ ಭಾರತದ ಮತ್ತೊಬ್ಬ ಬಾಕ್ಸರ್ ವಿಕಾಸ್ ಕೃಷ್ಣನ್ ಅವರು ಗಾಯದ ಕಾರಣದಿಂದ ಸೆಮಿಫೈನಲ್​ನಲ್ಲಿ ಅಖಾಡಕ್ಕಿಳಿಯದೆ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಹಿನ್ನೆಲೆಯಲ್ಲಿ ಅಮಿತ್ ಪಂಘಲ್ ಅವರ ಮೇಲೆ ಭಾರತೀಯ ಬಾಕ್ಸಿಂಗ್ ಪ್ರೇಮಿಗಳ ನಿರೀಕ್ಷೆ ಬಹಳಷ್ಟಿತ್ತು. ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಚಿನ್ನ ಮತ್ತು ಕಂಚು ಎರಡೇ ಪದಕ ಪ್ರಾಪ್ತವಾದಂತಾಗಿದೆ. ಒಟ್ಟಾರೆಯಾಗಿ ಭಾರತಕ್ಕೆ ಬಾಕ್ಸಿಂಗ್​ನಲ್ಲಿ ನಿರೀಕ್ಷೆಗಿಂತ ಕಡಿಮೆ ಪದಕಗಳು ಸಿಕ್ಕಿವೆ.

ಈ ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ ಸಿಕ್ಕ ಅನಿರೀಕ್ಷಿತ ಪದಕಗಳಲ್ಲಿ ಇವತ್ತಿನದೊಂದು ಸೇರ್ಪಡೆಯಾಗಿದೆ. ಬ್ರಿಡ್ಜ್ ಸ್ಪರ್ಧೆಯಲ್ಲಿ ಭಾರತದ ಪ್ರಣಬ್ ಬರ್ಧನ್ ಮತ್ತು ಶಿಬನಾಥ್ ಸರ್ಕಾರ್ ಜೋಡಿಯು ಚಿನ್ನದ ಪದಕ ಜಯಿಸಿದೆ.

ಇದರೊಂದಿಗೆ ಭಾರತಕ್ಕೆ 15ನೇ ಚಿನ್ನದ ಪದಕ ಸಿಕ್ಕಂತಾಗಿದೆ. ಈ ಏಷ್ಯಾಡ್​ನಲ್ಲಿ ಇದೂವರೆಗೂ ಭಾರತೀಯರು 15 ಚಿನ್ನ, 23 ಬೆಳ್ಳಿ ಮತ್ತು 29 ಕಂಚು ಸೇರಿ ಒಟ್ಟು 67 ಪದಕಗಳನ್ನ ಜಯಿಸಿದ್ದಾರೆ. ಚಿನ್ನದ ಪದಕಗಳ ವಿಚಾರದಲ್ಲಿ ಭಾರತವು 67 ವರ್ಷಗಳ ಹಿಂದಿನ ದಾಖಲೆಯನ್ನು ಸರಿಗಟ್ಟಿದೆ. 1951ರ ಏಷ್ಯನ್ ಗೇಮ್ಸ್​ನಲ್ಲಿ ಭಾರತ 15 ಚಿನ್ನದ ಪದಕ ಗೆದ್ದಿತ್ತು. ಹಾಗೆಯೇ, ಬೆಳ್ಳಿ ಪದಕಗಳ ವಿಚಾರದಲ್ಲಿ ಈ ಬಾರಿ ಭಾರತ ಅತೀ ಹೆಚ್ಚು ಸಿಲ್ವರ್ ಮೆಡಲ್ ಗೆದ್ದಿದೆ. ಒಟ್ಟಾರೆ ಪದಕಗಳ ವಿಚಾರದಲ್ಲಿ ಈ ಬಾರಿಯ ಸಾಧನೆಯೇ ಭಾರತದ ಬೆಸ್ಟ್ ಆಗಿದೆ. 2010ರ ಏಷ್ಯನ್ ಗೇಮ್ಸ್​ನಲ್ಲಿ ಗೆದ್ದಿದ್ದ 65 ಪದಕಗಳ ದಾಖಲೆಯನ್ನು ಭಾರತ ಈಗ ಅಳಿಸಿಹಾಕಿದೆ.

ಭಾರತಕ್ಕೆ ಇನ್ನಷ್ಟು ಚಿನ್ನದ ಪದಕ ಗೆಲ್ಲುವ ಅವಕಾಶ ಇನ್ನೂ ಇದೆ. ಭಾರತದ ಮಹಿಳಾ ಸ್ಕ್ವಾಷ್ ತಂಡವು ಚಿನ್ನದ ಪದಕಕ್ಕಾಗಿ ಫೈನಲ್​ನಲ್ಲಿ ಸಿಂಗಾಪುರವನ್ನು ಎದುರಿಸಲಿದೆ.

ಏಷ್ಯನ್ ಗೇಮ್ಸ್ ಪದಕ ಪಟ್ಟಿ
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ