ಪ್ರಬಲ ಶಬಾಬ್ ಅಲ್ ಅಹ್ಲಿ ಎದುರು ಬೆಂಗಳೂರು ಎಫ್​ಸಿಗೆ ಸೋಲು


Updated:August 7, 2018, 4:04 PM IST
ಪ್ರಬಲ ಶಬಾಬ್ ಅಲ್ ಅಹ್ಲಿ ಎದುರು ಬೆಂಗಳೂರು ಎಫ್​ಸಿಗೆ ಸೋಲು
ಬಳಿ, ನೀಲಿ ಉಡುಗೆ ತೊಟ್ಟಿರುವವರು ಬೆಂಗಳೂರು ಎಫ್​ಸಿ ಆಟಗಾರರು

Updated: August 7, 2018, 4:04 PM IST
- ನ್ಯೂಸ್18 ಕನ್ನಡ

ಸ್ಪೇನ್(ಆ. 07): ಸ್ಪೇನ್ ಪ್ರವಾಸದಲ್ಲಿರುವ ಇಂಡಿಯನ್ ಸೂಪರ್ ಲೀಗ್ ರನ್ನರ್ ಅಪ್ ಬೆಂಗಳೂರು ಎಫ್​ಸಿ ಸತತ ಎರಡನೇ ಸೋಲನುಭವಿಸಿತು. ಏಲಿಕಾಂಟೆಯ ಬೆನಿಡಾರ್ಮ್ ನಗರದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಯುಎಇ ದೇಶದ ಚಾಂಪಿಯನ್ ತಂಡವೆನಿಸಿದ ಶಬಾಬ್ ಅಲ್ ಅಹ್ಲಿ ದುಬೈ ಎಫ್​ಸಿ ತಂಡದ ವಿರುದ್ಧ ಬೆಂಗಳೂರಿಗರು 1-5 ಗೋಲುಗಳಿಂದ ಪರಾಭವಗೊಂಡರು. ಮೊದಲಾರ್ಧದಲ್ಲಿ ಅರಬ್ಬರ ಎದುರು ಬೆಂಗಳೂರಿಗರು ಸಮಾನ ಹೋರಾಟ ನೀಡಿ 1-1ರಲ್ಲಿ ಸಮಬಲ ಸಾಧಿಸಿದರು. ಆದರೆ, ದ್ವಿತೀಯಾರ್ಧದಲ್ಲಿ ಶಬಾಬ್ ಅಲ್ ಅಹ್ಲಿ ತಂಡ 4 ಗೋಲು ಗಳಿಸಿ ಬಿಎಫ್​ಸಿ ಆಟಗಾರರನ್ನು ತಬ್ಬಿಬ್ಬುಗೊಳಿಸಿತು. ಬೆಂಗಳೂರಿಗರು ಗೋಲು ಗಳಿಸಲು ಹರಸಾಹಸ ಮಾಡಿತಾದರೂ ಅರಬ್ಬರ ರಕ್ಷಣಾ ಕೋಟೆಯನ್ನು ಭೇದಿಸಲು ಆಗಲಿಲ್ಲ.

ಕಳೆದ ಬಾರಿಯ ಎಎಫ್​ಸಿ ಚಾಂಪಿಯನ್ಸ್ ಲೀಗ್​ನ ರನ್ನರ್ ಅಪ್ ಆಗಿರುವ ಶಬಾಬ್ ಅಲ್ ಅಹ್ಲಿ ತಂಡ ಎಲ್ಲಾ ವಿಭಾಗದಲ್ಲೂ ಬೆಂಗಳೂರಿಗರನ್ನು ಮೀರಿಸಿತು. ಭಾರತೀಯ ಸೂಪರ್ ಕಪ್​ನ ಚಾಂಪಿಯನ್ ಆಗಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ ಈ ಸೀಸನ್​ಗೆ ಮುಂಚಿನ ತಯಾರಿಯಾಗಿ ಸ್ಪೇನ್ ಪ್ರವಾಸ ಕೈಗೊಂಡಿದೆ. ಮೂರು ದಿನಗಳ ಹಿಂದೆ ಅಥ್ಲೆಟಿಕೋ ಸೆಗುಂಟಿನೋ ತಂಡದ ವಿರುದ್ಧ ಬೆಂಗಳೂರು ಎಫ್​ಸಿ 1-2 ಗೋಲುಗಳಿಂದ ವೀರೋಚಿತ ಸೋಲನುಭವಿಸಿತು. ಆಗಸ್ಟ್ 11ರಂದು ಬೆಂಗಳೂರು ತನ್ನ ಮೂರನೇ ಪಂದ್ಯದಲ್ಲಿ ವಿಲ್ಲಾ ರಿಯಲ್ ಬಿ ತಂಡವನ್ನು ಎದುರಿಸಲಿದೆ.

ಸ್ಪೇನ್ ಪ್ರವಾಸದ ಬಳಿಕ ಬೆಂಗಳೂರು ಎಫ್​ಸಿ ತಂಡ ಎಎಫ್​ಸಿ ಕಪ್ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ. ಆ. 22ರಂದು ತುರ್ಕ್​ಮೆನಿಸ್ತಾನದ ಆಲ್ಟೈನ್ ಅಸಿರ್ ಎಫ್​ಸಿ ತಂಡದ ವಿರುದ್ಧದ ಸೆಮಿಫೈನಲ್​ನ ಮೊದಲ ಚರಣದಲ್ಲಿ ಆಡಲಿದೆ. ಅದಾದ ನಂತರ ಇಂಡಿಯನ್ ಸೂಪರ್ ಲೀಗ್​ನ ಸೀಸನ್ ಪ್ರಾರಂಭವಾಗುತ್ತದೆ. ಕಳೆದ ಬಾರಿಯ ಐಎಸ್​ಎಲ್​ನಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾದ ಹಿನ್ನೆಲೆಯಲ್ಲಿ ಬೆಂಗಳೂರು ಎಫ್​ಸಿ ತಂಡ ಮುಂದಿನ ವರ್ಷದ ಎಎಫ್​ಸಿ ಕಪ್ ಟೂರ್ನಿಯಲ್ಲಿ ಆಡುವ ಅರ್ಹತೆ ಕಳೆದುಕೊಂಡಿದೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ