ಕೋಲ್ಕತಾ(ಮಾ. 09): ಹಾಲಿ ಫುಟ್ಬಾಲ್ ಚಾಂಪಿಯನ್ಸ್ ಬೆಂಗಳೂರು ಫುಟ್ಬಾಲ್ ಕ್ಲಬ್ ಕಳಪೆ ಪ್ರದರ್ಶನ ಮುಂದುವರಿದಿದೆ. ಎಎಫ್ಸಿ ಕಪ್ನ ಪ್ರಧಾನ ಹಂತ ತಲುಪುವ ಮುನ್ನವೇ ನಿರ್ಮಿಸಿದ್ದ ಬೆಂಗಳೂರಿಗರು ಈಗ ಇಂಡಿಯನ್ ಸೂಪರ್ ಲೀಗ್ನಿಂದಲೂ ಹೊರನಡೆದಿದೆ. ನಿನ್ನೆ ನಡೆದ ಸೆಮಿಫೈನಲ್ ಹಣಾಹಣಿಯ ಎರಡನೆ ಲೆಗ್ ಪಂದ್ಯದಲ್ಲಿ 1-3 ಗೋಲುಗಳಿಂದ ಕೋಲ್ಕತಾ ವಿರುದ್ಧ ಸೋಲನುಭವಿಸಿತು. ಮೊದಲ ಲೆಗ್ನಲ್ಲಿ 1-0ಯಿಂದ ಗೆದ್ದಿದ್ದ ಬಿಎಫ್ಸಿ ಎರಡನೇ ಲೆಗ್ನಲ್ಲಿ ನಿರಾಸೆಯ ಪ್ರದರ್ಶನ ತೋರಿತು. ಇದರೊಂದಿಗೆ ಎರಡೂ ಲೆಗ್ ಸೇರಿ 2-3 ಗೋಲುಗಳ ಅಂತರದಿಂದ ಬೆಂಗಳೂರು ಎಫ್ಸಿ ಸೋತಿತು. ಅಥ್ಲೆಟಿಕೋ ಕೋಲ್ಕತಾ (ಎಟಿಕೆ) ಮಾರ್ಚ್ 14ರಂದು ನಡೆಯುವ ಫೈನಲ್ನಲ್ಲಿ ಚೆನ್ನೈಯಿನ್ ಎಫ್ಸಿ ತಂಡವನ್ನು ಎದುರುಗೊಳ್ಳಲಿದೆ.
ಇಲ್ಲಿಯ ವಿವೇಕಾನಂದ ಯುಬ ಭಾರತಿ ಕ್ರೀರಂಗನ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಲೆಗ್ ಪಂದ್ಯದಲ್ಲಿ ಬೆಂಗಳೂರಿಗರು 5ನೇ ನಿಮಿಷದಲ್ಲಿ ಗೋಲು ಗಳಿಸಿ ಫೈನಲ್ ಆಸೆ ಬಲಪಡಿಸಿಕೊಂಡಿದ್ದರು. ಎಟಿಕೆ ತಂಡದ ಡೇವಿಡ್ ವಿಲಿಯಮ್ಸ್ ಎರಡು ಗೋಲು ಗಳಿಸಿ ಬೆಂಗಳೂರಿಗರ ಆಸೆಗೆ ತಣ್ಣೀರೆರಚಿದರು. ರಾಯ್ ಕೃಷ್ಣ ಕೂಡ ಒಂದು ಗೋಲು ಗಳಿಸಿದರು. ಬೆಂಗಳೂರಿಗರು ಹರಸಾಹಸ ನಡೆಸಿದರೂ ಎರಡನೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಬೆಂಗಳೂರು ಎಫ್ಸಿ ಇನ್ನೊಂದು ಗೋಲು ಭಾರಿಸಿದ್ದರೂ ಫೈನಲ್ ತಲುಪುವ ಸಾಧ್ಯತೆ ಇತ್ತು. ಆದರೆ, ಕೋಲ್ಕತಾ ತಂಡದ ಡಿಫೆನ್ಸ್ ಆಟಗಾರರು ಅಮೋಘ ಪ್ರದರ್ಶನ ನೀಡಿ ಬೆಂಗಳೂರಿಗರ ದಾಳಿಗಳನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಿದರು. ಬೆಂಗಳೂರಿನ ಪರ ಆಶಿಕ್ ಕುರಿಯನ್ ಏಕೈಕ ಗೋಲು ಭಾರಿಸಿದರು.
ಇದನ್ನೂ ಓದಿ: ನಮ್ಮ ಬೆಂಗಳೂರು ಕುಟುಂಬ ರೆಡಿನಾ; ಚಹಾಲ್ ಕನ್ನಡ ಟ್ವೀಟ್ಗೆ ಬೆಂಗಳೂರು ಅಭಿಮಾನಿಗಳು ಫಿದಾ!
ಮಾರ್ಚ್ 14, ಶನಿವಾರದಂದು ನಡೆಯುವ ಫೈನಲ್ನಲ್ಲಿ ಅಥ್ಲೆಟಿಕೋ ಡೀ ಕೋಲ್ಕತಾ ಮತ್ತು ಗೋವಾ ಎಫ್ಸಿ ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಎರಡು ಬಾರಿ ಚಾಂಪಿಯನ್ಸ್ ಆಗಿದ್ದು, ಪ್ರಬಲ ಪೈಪೋಟಿಯ ನಿರೀಕ್ಷೆ ಇದೆ.
ಇತ್ತ, ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ ಮುಂದಿನ ವರ್ಷದ ಎಎಫ್ಸಿ ಕಪ್ನಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತವಾದಂತಾಗಿದೆ. ಈ ವರ್ಷದ ಎಎಫ್ಸಿ ಕಪ್ನ ಅರ್ಹತಾ ಹಂತದಲ್ಲಿ ಮಾಲ್ಡೀವ್ಸ್ನ ಮಝಿಯಾ ತಂಡದ ಎದುರು ಸೋತು ನಿರಾಸೆ ಅನುಭವಿಸಿತ್ತು. ಇಂಡಿಯನ್ ಸೂಪರ್ ಲೀಗ್ ಮತ್ತು ಐ-ಲೀಗ್ನಲ್ಲಿ ಚಾಂಪಿಯನ್ ಆದ ತಂಡಗಳು ಎಎಫ್ಸಿ ಕಪ್ನಲ್ಲಿ ಆಡುವ ಅವಕಾಶ ಪಡೆಯುತ್ತವೆ. ಈಗ ಐಎಸ್ಎಲ್ನಿಂದ ನಿರ್ಗಮಿಸಿರುವುದರಿಂದ ಬೆಂಗಳೂರಿಗರಿಗೆ ಆ ಅವಕಾಶ ಇಲ್ಲದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ