ಬೆಂಗಳೂರು: ಸಿಲಿಕಾನ್ ಸಿಟಿಯ (Silicon City) ಮಾನ ಹರಾಜಾ ಆಗುವುದು ಮುಂದುವರಿದಿದೆ, ಇಷ್ಟು ದಿನ ರಸ್ತೆ ಗುಂಡಿಗಳಿಂದ (Pothole) ಮಾನ ಹರಾಜಾಗುತ್ತಿತ್ತು. ಆದರೆ ಈಗ ಪಾಲಿಕೆ ಮತ್ತೊಂದು ಎಡವಟ್ಟಿಗೆ ಗೂಗಲ್ (Google) ಮ್ಯಾಪ್‌ನಲ್ಲೂ ಮರ್ಯಾದೆ ಹರಾಜಾಗುತ್ತಿದೆ. ಈ ವಿಚಾರ ಕೇಳಿದರೆ ನಿಮಗೂ ಒಮ್ಮೆ ಆಶ್ಚರ್ಯ ಅಗುತ್ತೆ, ಏಕೆಂದರೆ ಈಜಿಪುರದಲ್ಲಿ (Ejipura) ಎಲ್ಲಿ ಸ್ಮಾರಕ (Memorial) ಇದೆ ಅನ್ನೋದು ಗೊತ್ತೇ ಇಲ್ಲ. ಆದರೆ ಇದೀಗ ಬಿಬಿಎಂಪಿ (BBMP) ಪಾಲಿಕೆ ಅಧಿಕಾರಿಗಳು ಮಾಡಿರುವ ಕಾರ್ಯಕ್ಕೆ ಈ ಪಟ್ಟ ಸಿಕ್ಕಿದೆ.
ಬೆಂಗಳೂರಿಗೆ ಮತ್ತೆ ಮುಜುಗರ!
ಈಜಿಪುರ ಫ್ಲೈಓವರ್ ಬೆಂಗಳೂರಿಗೆ ಮತ್ತೆ ಮುಜುಗರಕ್ಕೆ ಕಾರಣವಾಗಿದೆ, ಗೂಗಲ್ ಮ್ಯಾಪ್‌ನಲ್ಲಿ ಈ ಅರ್ಧಂಬರ್ಧ ಮಾಡಿ ಬಿಟ್ಟಿರುವ ಜಾಗವನ್ನು ಗೂಗಲ್‌ಮ್ಯಾಪ್ ಸ್ಮಾರಕ ಅಂತ ಗುರ್ತಿಸಿದೆ. ಏಕೆಂದರೆ ಫ್ಲೈಓವರ್ ಪೂರ್ಣಗೊಂಡು ಓಡಾಡೋಕೆ ಸೇವೆ ಕೊಡುತ್ತಿಲ್ಲ. ಇದರ ಬದಲಿಗೆ ಖಾಲಿ ಜಾಗ ಕೂಡಾ ಇಲ್ಲ. ಹೀಗಾಗಿ ಮ್ಯಾಪ್‌ನಲ್ಲಿ ಇದು ಸ್ಮಾರಕ ಅಂದ್ಕೊಂಡು ಈ ರೀತಿ ತೋರಿಸುತ್ತಿದೆ. ಈ ಮೂಲಕ ಬೆಂಗಳೂರು ಮತ್ತೆ ಮುಜುಗರಕ್ಕೆ ಒಳಗಾಗಿದೆ.
6 ವರ್ಷ ಆದರೂ ಮುಗಿಯದ ಕಾಮಗಾರಿ
2017 ರಲ್ಲಿ ಶುರುವಾದ ಮೇಲ್ಸೇತುವೆ ಕಾಮಗಾರಿ 2019 ರಲ್ಲಿ ಮುಗಿಸಲು ಹೇಳಲಾಗಿತ್ತು. ಆದರೆ ಕಾಮಗಾರಿ 2023 ಬಂದರೂ ಮುಗಿದಿಲ್ಲ. 143 ಕೋಟಿ ರೂಪಾಯಿ ವೆಚ್ಚದಲ್ಲಿ ಶುರುವಾದ ಕಾಮಗಾರಿ, 6 ವರ್ಷಗಳಾದರೂ ಕುಂಟುತ್ತಿದೆ. ಕೇವಲ 2.5 ಕಿಲೋ ಮೀಟರ್ ಉದ್ದದ ಫ್ಲೈಓವರ್ ಕೆಲಸ ಮುಗಿದಿಲ್ಲ. ಬರೀ ಪಿಲ್ಲರ್ ಹಾಕಿ ರಸ್ತೆಯುದ್ದಕ್ಕೂ ಹಾಗೆ ಬಿಡಲಾಗಿದೆ. ಎಷ್ಟು ಮಾರಿ ಮನವಿ ಮಾಡಿದ್ರು ನೆಪ ಹೇಳುತ್ತಿದ್ದಾರೆ ಅನ್ನೋದು ಜನರ ಆಕ್ರೋಶವಾಗಿದೆ.
ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ
ಈ ಕುರಿತಂತೆ ಮಾತನಾಡಿದ ಚಂದ್ರಕುಮಾರ್ ಎಂಬ ಸ್ಥಳೀಯರು, ಎಷ್ಟೋ ಬಾರಿ ನಾವು ಪ್ರತಿಭಟನೆ ಮಾಡಿ ಸರ್ಕಾರದ, ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಕೋರ್ಟ್ನಲ್ಲಿ ಈ ಸಂಬಂಧ ಕೇಸ್ ಇದೆ ಅಂತ ಅಧಿಕಾರಿಗಳು ಹೇಳುತ್ತಾರೆ. ಇದರಿಂದ ಸಾರ್ವಜನಿಕರಿಗೆ ಭಾರೀ ತೊಂದರೆ ಆಗುತ್ತಿದೆ. ಟ್ರಾಫಿಕ್ ಹೆಚ್ಚಿರುವ ಸಮಯದಲ್ಲಿ ವಾಹನಗಳಲ್ಲಿ ತೆರಳುವ ಸಾರ್ವಜನಿಕರು ತಾಸುಗಟ್ಟಲೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಸರ್ಕಾರ ಏನು ಕ್ರಮಕೈಗೊಳ್ಳುತ್ತೇ ಅಂತ ಈಗ ನಾವು ಕಾದುನೋಡುವ ಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರಿನ ಮರ್ಯಾದೆ ಹರಾಜು ಆಗೋದಕ್ಕೆ ಬಿಬಿಎಂಪಿ ಕಾರಣವಾಗಿದೆ. ಪಾಲಿಕೆ ಇನ್ನಾದರೂ ಎಚ್ಚೆತ್ತುಕೊಂಡು ಕಾಮಗಾರಿಯನ್ನು ಬೇಗ ಮುಗಿಸಬೇಕಿದೆ. ಇದರ ಪರಿಣಾಮ ಚುನಾವಣೆ ಮೇಲೆ ಬೀರಿದ್ರು ಅಚ್ಚರಿಯಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ