ಬೆಂಗಳೂರು, ಜ. 6: ಈ ಸೀಸನ್ನಲ್ಲಿ ಪಂದ್ಯಗಳು ಉರುಳಿದಂತೆ ಬೆಂಗಳೂರು ಬುಲ್ಸ್ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಂತಿದೆ. ಪವನ್ ಶೆರಾವತ್ ಅವರ ಐದನೇ ಸೂಪರ್10 ಅಂಕಗಳ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಇಂದು ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ 38-31 ಅಂಕಗಳಿಂದ ಮಣಿಸಿತು. ಮತ್ತೆ ಲೀಗ್ ಟಾಪರ್ ಆಗಿ ಮೇಲೇರಿತು.
ಪಂದ್ಯದ ಆರಂಭದಿಂದಲೂ ಬೆಂಗಳೂರು ಬುಲ್ಸ್ ತಂಡವೇ ಮೇಲುಗೈ ಸಾಧಿಸಿತು. ಅದರಲ್ಲೂ ಪವನ್ ಶೆರಾವತ್ ಅವರಂತೂ ಸರಾಗವಾಗಿ ಪಾಯಿಂಟ್ ಕಲೆಹಾಕಿದರು. 25 ಬಾರಿ ರೇಡಿಂಗ್ ಮಾಡಿದ ಅವರು 17 ರೇಡಿಂಗ್ ಅಂಕ ಗಳಿಸಿದರು. ಜೊತೆಗೆ ಒಂದು ಟ್ಯಾಕಲ್ ಅಂಕ ಗಳಿಸಿ ಆಲ್ರೌಂಡ್ ಆಟ ಪ್ರದರ್ಶನ ತೋರಿದರು.
ಅತ್ತ, ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಕ್ಕೆ ಅರ್ಜುನ್ ದೇಶವಾಲ್ ಹೊಸ ಸ್ಟಾರ್ ಆಗಿ ಉದಯಿಸಿದ್ದಾರೆ. ಆರನೇ ಬಾರಿ ಅವರು ಸೂಪರ್10 ಅಂಕಗಳನ್ನ ಗಳಿಸಿದ್ದಾರೆ. ನಾಯಕ ದೀಪಕ್ ನಿವಾಸ್ ಹೂಡಾ ಕೂಡ ಉತ್ತಮ ಪ್ರದರ್ಶನ ನೀಡಿದರು.
ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡ 7 ಪಂದ್ಯಗಳಿಂದ ಒಟ್ಟಾರೆ 28 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಏರಿತು. ಜೈಪುರ್ ಪಿಂಕ್ ಪ್ಯಾಂಥರ್ಸ್ ಈ ಪಂದ್ಯದಲ್ಲಿ ಸೋತರೂ ಒಂದು ಅಂಕ ಪಡೆಯುವಲ್ಲಿ ಯಶಸ್ವಿಯಾಗಿದೆ. ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಮುಂದುವರಿದಿದೆ.
ಇದನ್ನೂ ಓದಿ: PKL 8: ನವೀನ್, ರಜನೀಶ್ ಸೂಪರ್20 ರೇಡ್; ಟೈಟಾನ್ಸ್ಗೆ ವೀರೋಚಿತ ಸೋಲು; ಪುಣೇರಿಗೆ ಸುಲಭ ಗೆಲುವು
ಪಟ್ನಾ ಪೈರೇಟ್ಸ್ vs ತಮಿಳ್ ತಲೈವಾಸ್ ಪಂದ್ಯ ಡ್ರಾ:
ಇಂದು ನಡೆದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ಪಟ್ನಾ ಪೈರೇಟ್ಸ್ ಎದುರು 30-30 ಅಂಕಗಳಿಂದ ಡ್ರಾ ಮಾಡಿಕೊಂಡಿತು. ಮೊದಲಾರ್ಧದಲ್ಲಿ ಪಟ್ನಾ ತಂಡ ಸ್ವಲ್ಪ ಹೆಚ್ಚೇ ಮುಂದಿತ್ತು. ಆದರೆ, ಎರಡನೇ ಭಾಗದಲ್ಲಿ ತಮಿಳ್ ತಲೈವಾಸ್ ಪುಟಿದೆದ್ದು ಆಡಿತು.
ಪಟ್ನಾ ಪೈರೇಟ್ಸ್ ಪರ ರೇಡರ್ಸ್ ಮೋನು ಗೋಯತ್ ಮತ್ತು ಪ್ರಶಾಂತ್ ಕುಮಾರ್ ಉತ್ತಮ ಪ್ರದರ್ಶನ ನೀಡಿದರು. ತಮಿಳ್ ತಲೈವಾಸ್ ತಂಡದ ಪರ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಅಜಿಂಕ್ಯ ಪವಾರ್ ಇಂದೂ 12 ಅಂಕ ಗಳಿಸಿ ಅದ್ಭುತ ಆಟ ತೋರಿದರು. ಇದು ಅವರ ಎರಡನೇ ಸೂಪರ್10 ರೇಡ್ ಆಗಿತ್ತು. ಸುರ್ಜೀತ್ ಮತ್ತು ಭವಾನಿ ರಾಜಪೂತ್ ಅವರಿದ್ದ ತಲೈವಾಸ್ ಡಿಫೆನ್ಸ್ ಪ್ರಬಲವಾಗಿತ್ತು.
ಎರಡೂ ತಂಡಗಳು ಅಕ್ಷರಶಃ ಸಮಬಲ ಸಾಧಿಸಿದ್ದವು. ಎರಡೂ ತಂಡಗಳು ರೇಡಿಂಗ್ನಲ್ಲಿ 20 ಅಂಕ, ಟ್ಯಾಕಲ್ನಲ್ಲಿ 10 ಅಂಕಗಳನ್ನ ಗಳಿಸಿದವು. ಈ ಟೈ ಪಂದ್ಯದ ಬಳಿಕ ಪಟ್ನಾ ಪೈರೇಟ್ಸ್ ಮತ್ತು ತಮಿಳ್ ತಲೈವಾಸ್ ತಂಡಗಳು ಕ್ರಮವಾಗಿ 3 ಮತ್ತು 4ನೇ ಸ್ಥಾನಕ್ಕೆ ಏರಿವೆ.
ಇದನ್ನೂ ಓದಿ: PKL 8: ಅಂಕಪಟ್ಟಿ, ಅತಿಹೆಚ್ಚು ಯಶಸ್ವಿ ರೇಡ್, ಟ್ಯಾಕಲ್ನಲ್ಲಿ ಬಂಗಳೂರು ಬುಲ್ಸ್ ಮುಂದು
ನಾಳೆಯ ಪಂದ್ಯಗಳು:
1) ಬಂಗಾಲ್ ವಾರಿಯರ್ಸ್ vs ಹರ್ಯಾಣ ಸ್ಟೀಲರ್ಸ್, ಸಮಯ ಸಂಜೆ 7:30ಕ್ಕೆ
2) ಜೈಪುರ್ ಪಿಂಕ್ ಪ್ಯಾಂಥರ್ಸ್ vs ಪುಣೇರಿ ಪಲ್ಟನ್, ಸಮಯ ರಾತ್ರಿ 8:30ಕ್ಕೆ
ಅಂಕಪಟ್ಟಿ:
1) ಬೆಂಗಳೂರು ಬುಲ್ಸ್: 28 ಅಂಕ
2) ದಬಂಗ್ ಡೆಲ್ಲಿ: 26 ಅಂಕ
3) ಪಟ್ನಾ ಪೈರೇಟ್ಸ್: 24 ಅಂಕ
4) ತಮಿಳ್ ತಲೈವಾಸ್: 22 ಅಂಕ
5) ಯು ಮುಂಬಾ: 20 ಅಂಕ
6) ಬೆಂಗಾಲ್ ವಾರಿಯರ್ಸ್: 16 ಅಂಕ
7) ಹರ್ಯಾಣ ಸ್ಟೀಲರ್ಸ್: 15 ಅಂಕ
8) ಗುಜರಾತ್ ಜೈಂಟ್ಸ್; 14 ಅಂಕ
9) ಯು ಪಿ ಯೋದ್ಧಾ: 14 ಅಂಕ
10) ಜೈಪುರ್ ಪಿಂಕ್ ಪ್ಯಾಂಥರ್ಸ್: 13 ಅಂಕ
11) ತೆಲುಗು ಟೈಟಾನ್ಸ್: 10 ಅಂಕ
12) ಪುಣೇರಿ ಪಲ್ಟಾನ್: 10 ಅಂಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ