PKL 8: ಶೆರಾವತ್ ಮಿಂಚು- ಬೆಂಗಳೂರು ಬುಲ್ಸ್​ಗೆ ಮತ್ತೊಂದು ಭರ್ಜರಿ ಜಯ; ಪಟ್ನಾಗೆ ಸೋಲಿನ ಕಹಿ

Pro Kabaddi League 2022: ಪಟ್ನಾ ಪೈರೇಟ್ಸ್ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ಸ್ 38-28 ಅಂಕಗಳಿಂದ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಜೈಪುರ್ 4ನೇ ಸ್ಥಾನಕ್ಕೆ ಏರಿತು. ಬೆಂಗಳೂರು ಬುಲ್ಸ್ 46-37 ಅಂಕಗಳಿಂದ ಗುಜರಾತ್ ವಿರುದ್ಧ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿತು.

ಪವನ್ ಶೆರಾವತ್

ಪವನ್ ಶೆರಾವತ್

  • News18
  • Last Updated :
  • Share this:
    ಬೆಂಗಳೂರು, ಜ. 14: ಪ್ರೋಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್ ಭರ್ಜರಿ ಓಟ ಮುಂದುವರಿದಿದೆ. ಹೈ ಫ್ಲಯರ್ ಪವನ್ ಶೆರಾವತ್ ಅವರು ಮತ್ತೊಮ್ಮೆ ಸೂಪರ್ ಮಿಂಚು ಹರಿಸಿ ಬುಲ್ಸ್ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 46-37 ಅಂಕಗಳಿಂದ ಬೆಂಗಳೂರು ಬುಲ್ಸ್ ಜಯಭೇರಿ ಭಾರಿಸಿತು.

    ಈ ಪಂದ್ಯದಲ್ಲಿ ಪವನ್ ಶೆರಾವತ್ 19 ಅಂಕ ಗಳಿಸಿದರು. ಈ ಸೀಸನ್​ನಲ್ಲಿ ಅವರು ಗಳಿಸಿದ ಪಾಯಿಂಟ್​ಗಳ ಮೊತ್ತ 146ಕ್ಕೆ ಏರಿತು. ಅತಿ ಹೆಚ್ಚು ಅಂಕ ಗಳಿಸಿದವರ ಪಟ್ಟಿಯಲ್ಲಿ ಪವನ್ ಶೆರಾವತ್ ನವೀನ್ ಕುಮಾರ್ ಅವರನ್ನ ಹಿಂದಿಕ್ಕಿದ್ಧಾರೆ. ಅತಿ ಹೆಚ್ಚು ರೇಡಿಂಗ್ ಪಾಯಿಂಟ್ ಮತ್ತು ಅತಿ ಹೆಚ್ಚು ಯಶಸ್ವಿ ರೇಡ್​ಗಳಲ್ಲೂ ಪವನ್ ಶೆರಾವತ್ ಮುಂದಿದ್ಧಾರೆ.

    ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಸುಲಭಕ್ಕೆ ಸೋಲಪ್ಪಲಿಲ್ಲ. ಮೊದಲಾರ್ಧದಲ್ಲಿ ಬೆಂಗಳೂರು ಬುಲ್ಸ್ ಪೂರ್ಣ ಪ್ರಾಬಲ್ಯ ಮೆರೆದರೂ ಎರಡನೇ ಅವಧಿಯ ಆರಂಭದಲ್ಲಿ ಗುಜರಾತ್ ಜೈಂಟ್ಸ್ ಪ್ರಬಲ ಪೈಪೋಟಿ ನೀಡಿತು. ಜೇಂಟ್ಸ್ ರೇಡರ್ ರಾಕೇಶ್ 14 ಅಂಕ ಗಳಿಸಿದರೂ ಬುಲ್ಸ್ ತಂಡವನ್ನು ಮಣಿಸಲು ಸಾಧ್ಯವಾಗಲಿಲ್ಲ.

    ಬೆಂಗಳೂರು ಬುಲ್ಸ್ ತಂಡ ಈ ಗೆಲುವಿನೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿತು. ಪಟ್ನಾ ಪೈರೇಟ್ಸ್ ಎರಡನೇ ಸ್ಥಾನಕ್ಕೆ ಇಳಿದಿದೆ.

    ಟೇಬಲ್ ಟಾಪರ್ ಪಟ್ನಾಗೆ ಸೋಲು:

    ಇಂದು ನಡೆದ ಮತ್ತೊಂದು ಪಂದ್ಯದಲ್ಲಿ ಮೂರು ಬಾರಿ ಚಾಂಪಿಯನ್, ಹಾಗೂ ಈ ಸೀಸನ್​​ನ ಟೇಬಲ್ ಟಾಪರ್ ಆಗಿರುವ ಪಟ್ನಾ ಪೈರೇಟ್ಸ್ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ಸ್ 38-28 ಅಂಕಗಳಿಂದ ಗೆಲುವು ಸಾಧಿಸಿತು. ದೀಪಕ್ ನಿವಾಸ್ ಹೂಡಾ ಮತ್ತು ಅರ್ಜುನ್ ದೇಶವಾಲ್ ಅವರು ಜೈಪುರ್ ಗೆಲುವಿಗೆ ಕಾರಣರಾದರು. 9 ಅಂಕ ಗಳಿಸಿದ ಅರ್ಜುನ್ ದೇಶವಾಲ್ ಈ ಸೀಸನ್​ನಲ್ಲಿ ಮೊದಲ ಬಾರಿಗೆ ಸೂಪರ್10 ರೇಡ್​ನಿಂದ ವಂಚಿತರಾದರು. 16 ರೇಡ್​ಗಳಿಂದ ಅವರು 9 ಅಂಕ ಗಳಿಸಿದರು.

    ಇದನ್ನೂ ಓದಿ: Virat Controversy: ಸ್ಟಂಪ್ ಮೈಕ್ ಬಳಿ ಕೂಗಾಡಿದ ಕೊಹ್ಲಿ; ಕ್ಯಾಪ್ಟನ್ ಅಮಾನತಿಗೆ ವಾನ್ ಒತ್ತಾಯ

    ದೀಪಕ್ ನಿವಾಸ್ ಹೂಡ ಸೂಪರ್ 10 ರೇಡ್ ಮಾಡಿದ್ದು ವಿಶೇಷ. ಈ ಸೀಸನ್​ನಲ್ಲಿ ಮೊದಲ ಬಾರಿಗೆ ಅವರು ಅರ್ಜುನ್ ದೇಶವಾಲ್ ಅವರಿಗಿಂತ ಹೆಚ್ಚು ಅಂಕ ಗಳಿಸಿದರು. ಆದರೆ, ಅರ್ಜುನ್ ದೇಶವಾಲ್ ಈ ಸೀಸನ್​ನಲ್ಲಿ 100 ರೇಡ್ ಪಾಯಿಂಟ್ಸ್ ಮೈಲಿಗಲ್ಲು ಮುಟ್ಟಿದರು. ಪವನ್ ಶೆರಾವತ್, ನವೀನ್ ಕುಮಾರ್ ಮತ್ತು ಮಣಿಂದರ್ ಸಿಂಗ್ ಅವರು ಮಾತ್ರ ಅರ್ಜುನ್​ಗಿಂತ ಹೆಚ್ಚು ರೇಡಿಂಗ್ ಅಂಕ ಗಳಿಸಿದ್ದಾರೆ.

    ಇನ್ನೊಂದೆಡೆ ಪಟ್ನಾ ಪೈರೇಟ್ಸ್ ತಂಡ ರೇಡಿಂಗ್ ಮತ್ತು ಡಿಫೆನ್ಸ್ ಎರಡರಲ್ಲೂ ದುರ್ಬಲವಾಗಿ ಕಂಡಿತು. ಪಟ್ನಾ ನಾಯಕ ಕರ್ನಾಟಕದ ಪ್ರಶಾಂತ್ ಕುಮಾರ್ ರೈ 6 ಅಂಕ ಗಳಿಸಿದರು. ತಂಡದ ಸ್ಟಾರ್ ರೇಡರ್ ಮೋನು ಗೋಯತ್ 7 ಅಂಕ ಮಾತ್ರ ಗಳಿಸಿದರು. ತಂಡದ ಟಾಪ್ ಸ್ಕೋರರ್ ಸಚಿನ್ ಕೇವಲ 3 ಅಂಕಕ್ಕೆ ತೃಪ್ತಿಪಡಬೇಕಾಯಿತು.

    ಪಟ್ನಾ ಪೈರೇಟ್ಸ್ ಈ ಸೋಲಿನ ನಡುವೆಯೂ ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನದಲ್ಲಿ ಮುಂದುವರಿದಿದೆ. ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡಕ್ಕೆ ಇದು ಐದನೇ ಗೆಲುವಾಗಿದೆ. ಕೆಲ ಸುತ್ತುಗಳ ಹಿಂದೆ ಅಂಕಪಟ್ಟಿಯಲ್ಲಿ ಕೆಳಗೆ ಇದ್ದ ಜೈಪುರ್ ಇದೀಗ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.

    ನಾಳೆ ಟ್ರಿಪಲ್ ಧಮಾಕ:

    1) ಹರ್ಯಾಣ ಸ್ಟೀಲರ್ಸ್ vs ದಬಂಗ್ ಡೆಲ್ಲಿ, ಸಮಯ ಸಂಜೆ 7:30ಕ್ಕೆ

    2) ಯು ಪಿ ಯೋದ್ಧಾ vs ತೆಲುಗು ಟೈಟಾನ್ಸ್, ಸಮಯ ರಾತ್ರಿ 8:30ಕ್ಕೆ

    3) ಯು ಮುಂಬಾ vs ಬೆಂಗಾಲ್ ವಾರಿಯರ್ಸ್, ಸಮಯ ರಾತ್ರಿ 9:30ಕ್ಕೆ

    ಇದನ್ನೂ ಓದಿ: PKL 8: ಬೆಂಗಾಲ್ ವಾರಿಯರ್ಸ್ ಮತ್ತು ಪುಣೇರಿ ಪಲ್ಟನ್​ಗೆ ಗೆಲುವಿನ ಸಿಂಚನ

    ಅಂಕಪಟ್ಟಿ:

    1) ಬೆಂಗಳೂರು ಬುಲ್ಸ್: 38 ಅಂಕ
    ಪಟ್ನಾ ಪೈರೇಟ್ಸ್: 34 ಅಂಕ
    3) ದಬಂಗ್ ಡೆಲ್ಲಿ: 32 ಅಂಕ
    4) ಜೈಪುರ್ ಪಿಂಕ್ ಪ್ಯಾಂಥರ್ಸ್: 28 ಅಂಕ
    5) ತಮಿಳ್ ತಲೈವಾಸ್: 27 ಅಂಕ
    6) ಯು ಮುಂಬಾ: 25 ಅಂಕ
    7) ಯು ಪಿ ಯೋದ್ಧಾ: 23 ಅಂಕ
    8) ಹರ್ಯಾಣ ಸ್ಟೀಲರ್ಸ್: 23 ಅಂಕ
    9) ಬೆಂಗಾಲ್ ವಾರಿಯರ್ಸ್: 22 ಅಂಕ
    10) ಪುಣೇರಿ ಪಲ್ಟನ್: 21 ಅಂಕ
    11) ಗುಜರಾತ್ ಜೈಂಟ್ಸ್: 20 ಅಂಕ
    12) ತೆಲುಗು ಟೈಟಾನ್ಸ್: 10 ಅಂಕ
    Published by:Vijayasarthy SN
    First published: