ಪ್ರೋಕಬಡ್ಡಿ: ಫೈನಲ್​ಗೆ ಬೆಂಗಳೂರು ಬುಲ್ಸ್; 2ನೇ ಕ್ವಾಲಿಫಯರ್ ಹಂತಕ್ಕೆ ಯುಪಿ ಯೋದ್ಧಾ

ಬೆಂಗಳೂರು ಬುಲ್ಸ್ ತಂಡ ನೇರವಾಗಿ ಫೈನಲ್ ಪ್ರವೇಶಿಸಿದೆ. ಯುಪಿ ಯೋದ್ಧಾ ಹಾಗೂ ಗುಜರಾತ್ ನಡುವಿನ ಪಂದ್ಯದ ವಿಜೇತರು ಪ್ರಶಸ್ತಿಗಾಗಿ ಬೆಂಗಳೂರಿಗರನ್ನು ಎದಿರುಗೊಳ್ಳಲಿದ್ದಾರೆ.

Vijayasarthy SN | news18
Updated:January 1, 2019, 3:22 PM IST
ಪ್ರೋಕಬಡ್ಡಿ: ಫೈನಲ್​ಗೆ ಬೆಂಗಳೂರು ಬುಲ್ಸ್; 2ನೇ ಕ್ವಾಲಿಫಯರ್ ಹಂತಕ್ಕೆ ಯುಪಿ ಯೋದ್ಧಾ
ಗುಜರಾತ್ ತಂಡದ ರೇಡರ್​ನನ್ನು ಹಿಡಿಯುವ ಪ್ರಯತ್ನದಲ್ಲಿ ಬೆಂಗಳೂರು ಬುಲ್ಸ್ ಆಟಗಾರರು
  • News18
  • Last Updated: January 1, 2019, 3:22 PM IST
  • Share this:
ಕೊಚ್ಚಿ(ಡಿ. 31): ಈ ಸೀಸನ್​ನ ಪ್ರೋಕಬಡ್ಡಿ ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಬೆಂಗಳೂರು ಬುಲ್ಸ್ ತಂಡ ಫೈನಲ್ ತಲುಪಿದೆ. ಇಂದು ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 41-29 ಅಂಕಗಳಿಂದ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವನ್ನು ಬಗ್ಗುಬಡಿಯಿತು. ಎರಡನೇ ಸೀಸನ್​ನ ನಂತರ ಬೆಂಗಳೂರಿಗರು ಪ್ರೋಕಬಡ್ಡಿ ಫೈನಲ್ ಪ್ರವೇಶಿಸಿದ್ದು ಇದೇ ಮೊದಲ ಬಾರಿಯಾಗಿದೆ.

ಇಂದು ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡದ ಆಟಗಾರರೇ ಹೆಚ್ಚು ವಿಜೃಂಬಿಸಿದರು. ರೇಡಿಂಗ್​ನಲ್ಲಿ ಪವನ್ ಕುಮಾರ್ ಮಿಂಚಿ 13 ಪಾಯಿಂಟ್ ಕಲೆಹಾಕಿದರು. ರೋಹಿತ್ ಕುಮಾರ್ ಆಲ್​ರೌಂಡ್ ಆಟವಾಡಿ 11 ಅಂಕ ಪಡೆದರು. ಮಹೇಂದರ್ ಸಿಂಗ್ ಡಿಫೆನ್ಸ್​ನಲ್ಲಿ ಭದ್ರಬಾಹು ಎನಿಸಿದರು.

ಈ ಮೊದಲ ಕ್ವಾಲಿಫಯರ್​ನಲ್ಲಿ ಸಿಕ್ಕ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ನೇರವಾಗಿ ಫೈನಲ್ ಪ್ರವೇಶಿಸಿದೆ. ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡ ಈ ಪಂದ್ಯ ಸೋತರೂ ಫೈನಲ್ ತಲುಪುವ ಅವಕಾಶ ಜೀವಂತವಾಗಿಯೇ ಇದೆ.

ನಿನ್ನೆ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಯುಪಿ ಯೋದ್ಧಾ ಗೆಲುವು ಸಾಧಿಸಿತು. ಹಾಗೆಯೇ, ಎರಡನೇ ಎಲಿನಿಮಿನೇಟರ್ ಪಂದ್ಯದಲ್ಲಿ ಬೆಂಗಾಳ್ ವಾರಿಯರ್ಸ್ ವಿರುದ್ಧ ದಬಾಂಗ್ ಡೆಲ್ಲಿ ಜಯ ಕಂಡಿತು. ಈ ಎರಡು ಎಲಿಮಿನೇಟರ್ ಪಂದ್ಯಗಳಲ್ಲಿ ಗೆಲುವು ಕಂಡ ಯುಪಿ ಯೋದ್ಧಾ ಹಾಗು ದಬಾಂಗ್ ಡೆಲ್ಲಿ ನಡುವೆ ನಡೆದ ಮೂರನೇ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ಯೋದ್ಧಾ ಗೆಲುವಿನ ನಗೆ ಬೀರಿತು. ಇದರೊಂದಿಗೆ ಯು ಮುಂಬಾ, ಬೆಂಗಾಳ್ ವಾರಿಯರ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ಟೂರ್ನಿಯಿಂದ ನಿರ್ಗಮಿಸಿದಂತಾಗಿದೆ.

ನಾಳೆ ಮಂಗಳವಾರದಂದು ಗುಜರಾತ್ ಫಾರ್ಚೂನ್ ಜೈಂಟ್ಸ್ ಹಾಗೂ ಯುಪಿ ಯೋದ್ಧಾ ನಡುವೆ ಎರಡನೇ ಕ್ವಾಲಿಫಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದವರು ಪ್ರಶಸ್ತಿಗಾಗಿ ಬೆಂಗಳೂರು ಬುಲ್ಸ್ ಜೊತೆ ಸೆಣಸಲಿದ್ದಾರೆ.
First published:December 31, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ