PKL 8: ನವೀನ್ ಎಕ್ಸ್​ಪ್ರೆಸ್ ನಿಲ್ಲಿಸೋರೇ ಇಲ್ವಾ? ಸೋತ ವಾರಿಯರ್ಸ್; ಯೋದ್ಧಾ-ಜೈಂಟ್ಸ್ ಡ್ರಾ

Pro Kabaddi League 2021: ನಿನ್ನೆ ನಡೆದ ಪ್ರೋಕಬಡ್ಡಿ ಲೀಗ್​ನ 19ನೇ ಪಂದ್ಯದಲ್ಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ 35-52 ಅಂಕಗಳಿಂದ ಡಬಂಗ್ ಡೆಲ್ಲಿಗೆ ಶರಣಾಯಿತು. ಯುಪಿ ಯೋದ್ಧಾ-ಗುಜರಾತ್ ಜೇಂಟ್ಸ್ ನಡುವಿನ 20ನೇ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಇಂದಿನ ಎರಡು ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್ ಹರಿಯಾಣದ ಸವಾಲು ಎದುರಿಸುತ್ತಿದೆ.

ದಬಂಗ್ ಡೆಲ್ಲಿ-ಬೆಂಗಾಲ್ ವಾರಿಯರ್ಸ್; ಯುಪಿ ಯೋದ್ಧಾ-ಗುಜರಾತ್ ಜೈಂಟ್ಸ್ ಪಂದ್ಯಗಳ ಚಿತ್ರ

ದಬಂಗ್ ಡೆಲ್ಲಿ-ಬೆಂಗಾಲ್ ವಾರಿಯರ್ಸ್; ಯುಪಿ ಯೋದ್ಧಾ-ಗುಜರಾತ್ ಜೈಂಟ್ಸ್ ಪಂದ್ಯಗಳ ಚಿತ್ರ

  • News18
  • Last Updated :
  • Share this:
    ಬೆಂಗಳೂರು: ಪ್ರೋಕಬಡ್ಡಿ ಲೀಗ್ ಈ ಸೀಸನ್​ನಲ್ಲಿ ಪಂದ್ಯಗಳು ಉರುಳುತ್ತಿರುವಂತೆಯೇ ರೋಚಕತೆ ತೀವ್ರಗೊಳ್ಳುತ್ತಿದೆ. ನಿನ್ನೆ ನಡೆದ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ಸ್ ಬೆಂಗಾಲ್ ವಾರಿಯರ್ಸ್ ವಿರುದ್ಧ ಡಬಂಗ್ ಡೆಲ್ಲಿ 52-35 ಅಂಕಗಳಿಂದ ಮಣಿಸಿತು. ಎರಡನೇ ಪಂದ್ಯದಲ್ಲಿ ಯುಪಿ ಯೋದ್ಧಾ ಮತ್ತು ಗುಜರಾತ್ ಜೈಂಟ್ಸ್ ತಂಡಗಳು 32 ಅಂಕಗಳಿಂದ ಡ್ರಾ ಮಾಡಿಕೊಂಡವು.

    ಡಬಂಗ್ ಡೆಲ್ಲಿ ಮತ್ತು ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ನವೀನ್ ಎಕ್ಸ್​ಪ್ರೆಸ್ ಮತ್ತು ಬೆಂಗಾಲ್ ವಾರಿಯರ್ಸ್ ನಡುವಿನ ಹಣಾಹಣಿಯೇ ಆಗಿತ್ತು. ಮೂರನೇ ಸೀಸನ್ ಆಡುತ್ತಿರುವ 21 ವರ್ಷದ ನವೀನ್ ಅವರ ಅಗಾಧ ಪ್ರತಿಭೆಗೆ ವಾರಿಯರ್ಸ್ ಶರಣಾಗದೇ ಬೇರೆ ದಾರಿ ಇರಲಿಲ್ಲ. ಸತತ 25ನೇ ಬಾರಿಗೆ ನವೀನ್ ಸೂಪರ್ 10 ಅಂಕ ಗಳಿಸಿದರು. ಅಷ್ಟೇ ಅಲ್ಲ, ನಿನ್ನೆ ಒಂದೇ ಪಂದ್ಯದಲ್ಲಿ 24 ಅಂಕ ಗಳಿಸಿದ ನವೀನ್ ಕುಮಾರ್ ತಮ್ಮ ಮೇಲಿದ್ದ ನಿರೀಕ್ಷೆಯನ್ನ ಮೀರಿಸುವ ಪ್ರದರ್ಶನ ತೋರಿದರು.

    ನವೀನ್ ಈ ಸೀಸನ್​ನಲ್ಲಿ ನಾಲ್ಕು ಪಂದ್ಯಗಳಿಂದ 68 ಅಂಕಗಳನ್ನ ಗಳಿಸಿದ್ದಾರೆ. ಅತಿ ಹೆಚ್ಚು ಅಂಕ ಗಳಿಸಿದವರ ಪಟ್ಟಿಯಲ್ಲಿ ಮೊದಲಿಗರಾಗಿದ್ಧಾರೆ. ಬೆಂಗಾಲ್ ವಾರಿಯರ್ಸ್ ತಂಡದ ಮತ್ತೊಂದು ಕಬಡ್ಡಿ ಹುಲಿ ಮಣಿಂದರ್ ಸಿಂಗ್ ಕೂಡ ನಿನ್ನೆ ಅದ್ಭುತ ಲಯದಲ್ಲಿದ್ದರು. 16 ಅಂಕಗಳನ್ನ ಅವರು ಗಳಿಸಿದರೂ ನವೀನ್ ಎಕ್ಸ್​ಪ್ರೆಸ್ ಮಾಡಿದ ಹಾನಿಯನ್ನ ಅವರು ಸರಿಗಟ್ಟಲು ಆಗಲಿಲ್ಲ. ಕರ್ನಾಟಕದ ಸುಕೇಶ್ ಹೆಗ್ಡೆ 9 ಅಂಕ ಗಳಿಸಿದರೂ ಬೆಂಗಾಲ್ ವಾರಿಯರ್ಸ್ ತಂಡ ಸೋಲಿನ ಅಂತರವನ್ನ ತಗ್ಗಿಸಲು ಆಗಲಿಲ್ಲ.

    ಕರ್ನಾಟಕದ ಜೀವ ಕುಮಾರ್ ಅವರು ದಬಂಗ್ ಡೆಲ್ಲಿ ತಂಡಕ್ಕೆ ಭದ್ರ ರಕ್ಷಣೆಯಾಗಿ ನಿಂತಿದ್ದರು. ಆಲ್​ರೌಂಡರ್ ವಿಜಯ್ ಕೂಡ 10 ಅಂಕ ಗಳಿಸಿ ಬೆಂಗಾಲ್ ವಾರಿಯರ್ಸ್​ನ ಪ್ರತಿಹೋರಾಟ ತೀವ್ರಗೊಳ್ಳದಂತೆ ನೋಡಿಕೊಂಡರು. ಬೆಂಗಾಲ್ ವಾರಿಯರ್ಸ್ ತಂಡದ ಸ್ಟಾರ್ ಆಟಗಾರ ಇರಾನ್ ದೇಶದ ಮೊಹಮ್ಮದ್ ನಬಿಬಕ್ಷ್ ಅವರಿಗೆ ಇಂದು ಹೆಚ್ಚು ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಆರು ಬಾರಿ ರೇಡ್ ಮಾಡಿದ ನಬಿ ಯಶಸ್ಸು ಕಂಡಿದ್ದು ಒಮ್ಮೆ ಮಾತ್ರ. ಡಬಂಗ್ ಡೆಲ್ಲಿಯ ರಕ್ಷಣಾ ಆಟಗಾರರು ಮೂರು ಬಾರಿ ನಬಿಯನ್ನ ಹಿಡಿದುಹಾಕಿದ್ದರು.

    ಇದನ್ನೂ ಓದಿ: ಇವರು ನವೀನ್ ‘ಎಕ್ಸ್​ಪ್ರೆಸ್’- ಕಾಲಿಟ್ಟರೆ ಮಿಂಚಿನ ಸಂಚಾರ; 76 ರೇಡ್​ಗಳಲ್ಲಿ ಸಿಕ್ಕಿಬಿದ್ದಿರುವುದು 4 ಬಾರಿ

    ಯೋದ್ಧಾ-ಜೈಂಟ್ಸ್ ರೋಚಕ ಪಂದ್ಯ:

    ನಿನ್ನೆ ನಡೆದ ಎರಡನೇ ಪಂದ್ಯ ಪ್ರದೀಪ್ ನರ್ವಾಲ್ ಮತ್ತು ರಾಕೇಶ್ ನರ್ವಾಲ್ ನಡುವಿನ ಹಣಾಹಣಿಯಾಗಿತ್ತು. ಆರಂಭದಿಂದ ಕೊನೆಯವರೆಗೆ ಯು ಪಿ ಯೋದ್ಧಾ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ನಿಕಟ ಪೈಪೋಟಿ ನೀಡಿದರು. ಯಾರಿಗೂ ದೊಡ್ಡ ಮುನ್ನಡೆ ಸಿಗಲಿಲ್ಲ. ಯೋದ್ಧಾ ತಂಡದ ಪ್ರದೀಪ್ ನರ್ವಾಲ್ 20 ರೇಡ್ ಮಾಡಿ 11 ಅಂಕ ಗಳಿಸಿದರು. ಇನ್ನು, ಜೈಂಟ್ಸ್ ತಂಡದ ರಾಕೇಶ್ ನರ್ವಾಲ್ ಅವರ ಪ್ರದರ್ಶನ ಇದಕ್ಕಿಂತಲೂ ಉತ್ತಮವಾಗಿತ್ತು. ಅವರು 17 ಬಾರಿ ರೇಡ್ ಮಾಡಿ 13 ಅಂಕ ಗಳಿಸಿದರು.

    ಅತ್ತ, ಯುಪಿ ಯೋದ್ಧಾ ತಂಡದಲ್ಲಿ ಪ್ರದೀಪ್ ನರ್ವಾಲ್ ಅವರಿಗೆ ಸುರೇಂದರ್ ಗಿಲ್ ಉತ್ತಮ ಬೆಂಬಲ ನೀಡಿದರು. ಹಾಗೆಯೇ ಯೋದ್ಧಾ ತಂಡದ ಡಿಫೆಂಡರ್​ಗಳು ಇಂದು ಬಲಿಷ್ಠವೆನಿಸಿದರು. ಮೊದಲಾರ್ಧದಲ್ಲಿ ಗುಜರಾತ್ ಜೈಂಟ್ಸ್ ತುಸು ಮುನ್ನಡೆ ಹೊಂದಿದ್ದರೆ ದ್ವಿತೀಯಾರ್ಧದಲ್ಲಿ ಯೋದ್ಧಾ ತಂಡ ಕಂಬ್ಯಾಕ್ ಮಾಡಿ ಪಂದ್ಯವನ್ನ ಟೈ ಮಾಡಿಕೊಂಡಿತು.

    ಇಂದಿನ ಪಂದ್ಯಗಳು:

    1) ಜೈಪುರ್ ಪಿಂಕ್ ಪ್ಯಾಂಥರ್ಸ್ vs ಯು ಮುಂಬಾ, ಸಮಯ ಸಂಜೆ 7:30ಕ್ಕೆ

    2) ಹರ್ಯಾಣ ಸ್ಟೀಲರ್ಸ್ vs ಬೆಂಗಳೂರು ಬುಲ್ಸ್, ಸಮಯ ರಾತ್ರಿ 8:30ಕ್ಕೆ

    ಇದನ್ನೂ ಓದಿ: PKL 8: ಬೆಂಗಾಲ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ತಂಡಕ್ಕೆ ರೋಚಕ ಗೆಲುವು

    ಅಂಕಪಟ್ಟಿ:

    ಬೆಂಗಾಲ್ ವಾರಿಯರ್ಸ್ ತಂಡವನ್ನ ಸೋಲಿಸಿದ ದಬಂಗ್ ಡೆಲ್ಲಿ 18 ಅಂಕಗಳೊಂದಿಗೆ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ತಂಡ 12 ಅಂಕಗಳನ್ನ ಹೊಂದಿದೆ.

    1) ದಬಂಗ್ ಡೆಲ್ಲಿ: 18 ಅಂಕ
    2) ಗುಜರಾತ್ ಜೈಂಟ್ಸ್: 12 ಅಂಕ
    3) ಪಟ್ನಾ ಪೈರೇಟ್ಸ್: 11 ಅಂಕ
    4) ಜೈಪುರ್ ಪಿಂಕ್ ಪ್ಯಾಂಥರ್ಸ್: 11 ಅಂಕ
    5) ಬೆಂಗಾಲ್ ವಾರಿಯರ್ಸ್: 11 ಅಂಕ
    6) ಬೆಂಗಳೂರು ಬುಲ್ಸ್: 10 ಅಂಕ
    7) ಯುಪಿ ಯೋದ್ಧಾ: 10 ಅಂಕ
    8) ಯು ಮುಂಬಾ: 9 ಅಂಕ
    9) ಹರ್ಯಾಣ ಸ್ಟೀಲರ್ಸ್: 7 ಅಂಕ
    10) ತಮಿಳ್ ತಲೈವಾಸ್: 6 ಅಂಕ
    11) ತೆಲುಗು ಟೈಟಾನ್ಸ್: 5 ಅಂಕ
    12) ಪುಣೇರಿ ಪಲ್ಟಾನ್: 5 ಅಂಕ
    Published by:Vijayasarthy SN
    First published: