ಬೆಂಗಳೂರು, ಜ. 13: ಪ್ರೋಕಬಡ್ಡಿ ಲೀಗ್ನ ಅಂಕಪಟ್ಟಿಯಲ್ಲಿ ತಳದಲ್ಲಿರುವ ಬೆಂಗಾಲ್ ವಾರಿಯರ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳು ಇಂದು ಗೆಲುವಿನ ನಗೆ ಬೀರಿ ಒಂದು ಹಂತ ಮೇಲೇರಿವೆ. ಎರಡೂ ತಂಡಗಳು ದೊಡ್ಡ ಅಂತರದ ಗೆಲುವನ್ನೇ ದಕ್ಕಿಸಿಕೊಂಡಿವೆ. ಇಂದು ನಡೆದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ 37-28 ಅಂಕಗಳಿಂದ ಜಯ ಸಾಧಿಸಿತು. ಎರಡನೇ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ಪುಣೇರಿ ಪಲ್ಟನ್ 42-23 ಅಂಕಗಳಿಂದ ಗೆಲುವು ಪಡೆಯಿತು.
ಯು ಮುಂಬಾ ತಂಡಕ್ಕೆ ಇದು ಮೂರನೇ ಸೋಲಾದರೆ, ಪುಣೇರಿ ಪಲ್ಟನ್ ತಂಡಕ್ಕೆ ನಾಲ್ಕನೇ ಗೆಲುವಾಗಿದೆ. ಹಿಂದಿನ ಪಂದ್ಯಗಳಂತೆ ಈ ಪಂದ್ಯದಲ್ಲೂ ಪುಣೇರಿ ಪಲ್ಟನ್ ತಂಡದ ಡಿಫೆನ್ಸ್ ಬಲಿಷ್ಠವಾಗಿತ್ತು. ರೇಡಿಂಗ್ ವಿಭಾಗದಲ್ಲಿ ನಿತಿನ್ ತೋಮರ್, ಅಸ್ಲಮ್ ಇನಾಮ್ದಾರ್ ಮತ್ತು ಮೋಹಿತ್ ಗೋಯತ್ ಉಪಯುಕ್ತ ಅಂಕಗಳನ್ನ ಗಳಿಸಿದರು. ಇನ್ನುಳಿದಂತೆ ಡಿಫೆಂಡರ್ಗಳು ಯು ಮುಂಬಾ ರೇಡರ್ಗಳಿಗೆ ಹೆಚ್ಚು ಅಂಕ ಗಳಿಸಲು ಅವಕಾಶ ಕೊಡಲಿಲ್ಲ.
ಯು ಮುಂಬಾ ತಂಡದ ಸ್ಟಾರ್ ರೇಡರ್ ಅಭಿಷೇಕ್ ಸಿಂಗ್ ಅವರಿಗೆ ಇಂದು ನಿರಾಸೆಯ ದಿನ. 11 ರೇಡ್ ಮಾಡಿದ ಅವರು ಗಳಿಸಲು ಸಾಧ್ಯವಾಗಿದ್ದು ಕೇವಲ 4 ಅಂಕ ಮಾತ್ರ. ಆರು ಬಾರಿ ಅವರನ್ನ ಪುಣೇರಿ ಡಿಫೆಂಡರ್ಗಳು ಹಿಡಿದುಹಾಕಿದರು. ಹೀಗಾಗಿ, ಯು ಮುಂಬಾ ಹೆಚ್ಚು ಪೈಪೋಟಿ ನೀಡದೇ ಸೋಲಪ್ಪಿಕೊಂಡಿತು.
ಗೆಲುವಿನ ಹಾದಿಗೆ ಬಂದ ಬೆಂಗಾಲ್ ವಾರಿಯರ್ಸ್:
ಇದಕ್ಕೆ ಮುನ್ನ ನಡೆದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ 37-28 ಅಂಕಗಳಿಂದ ಗೆಲುವು ಪಡೆಯಿತು. ಸತತ ಸೋಲುಗಳಿಂದ ಕಂಗೆಟ್ಟಿದ್ದ ವಾರಿಯರ್ಸ್ ಮತ್ತೆ ಗೆಲುವಿನ ಹಾದಿಗೆ ಬಂದಂತಾಗಿದೆ. ಈ ಸೀಸನ್ನಲ್ಲಿ ಬೆಂಗಾಲ್ ತಂಡಕ್ಕೆ ಇದು ನಾಲ್ಕನೇ ಗೆಲುವಾಗಿದ್ದ 22 ಅಂಕಗಳೊಂದಿಗೆ 9ನೇ ಸ್ಥಾನಕ್ಕೆ ಏರಿದೆ.
ಇದನ್ನೂ ಓದಿ: PKL 8: ಪವನ್ ಸೂಪರ್ ರೇಡ್; ಬೆಂಗಳೂರು ಬುಲ್ಸ್ಗೆ ದಾಖಲೆ ಗೆಲುವು; ಮಣ್ಣುಮುಕ್ಕಿದ ದಬಂಗ್ ಡೆಲ್ಲಿ
ಈ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಗೆಲುವಿನಲ್ಲಿ ಅದರ ನಾಯಕ ಮಣಿಂದರ್ ಸಿಂಗ್ ಅವರ ಅಮೋಘ ಆಟ ಮತ್ತೊಮ್ಮೆ ಕಾರಣವಾಯಿತು. ಮಣಿಂದರ್ ಸಿಂಗ್ ಮತ್ತೊಂದು ಸೂಪರ್ 10 ರೇಡ್ ಮಾಡಿದರು. 19 ರೇಡ್ಗಳನ್ನ ಮಾಡಿದ ಅವರು ಒಟ್ಟು 12 ಅಂಕಗಳನ್ನ ಪ್ರಾಪ್ತ ಮಾಡಿಕೊಂಡರು.
ಬೆಂಗಾಲ್ ತಂಡದ ಸ್ಟಾರ್ ಡಿಫೆಂಡರ್ ಅಮಿತ್ ನರ್ವಾಲ್ ಕೂಡ ಈ ಪಂದ್ಯದಲ್ಲಿ ಮಿಂಚಿದರು. ಒಂದು ಸೂಪರ್ ಟ್ಯಾಕಲ್ ಸೇರಿ ಒಟ್ಟು 5 ಅಂಕಗಳನ್ನ ಅವರು ಗಳಿಸಿದರು. ರಣ್ ಸಿಂಗ್ ಮತ್ತು ಮೊಹಮ್ಮದ್ ನಬಿಬಕ್ಷ್ ಕೂಡ ಡಿಫೆನ್ಸ್ ವಿಭಾಗದಲ್ಲಿ ಮಿಂಚಿದರು.
ತಮಿಳ್ ತಲೈವಾಸ್ ತಂಡದ ರೇಡರ್ಗಳಿಗೆ ಇಂದು ಅಂಕಗಳನ್ನ ಗಳಿಸಲು ಹೆಚ್ಚು ಅವಕಾಶ ಸಿಗಲಿಲ್ಲ. ಯಾರಿಂದಲೂ ಸೂಪರ್ 10 ರೇಡ್ ಬರಲಿಲ್ಲ. ಮಂಜಿತ್ ಕೇವಲ 8 ಅಂಕಗಳಿಗೆ ಸೀಮಿತಗೊಂಡರು. ಅಜಿಂಕ್ಯ ಪವಾರ್ ನಿರಾಸೆಗೊಳಿಸಿದರು. ಭವಾನಿ ರಾಜಪೂತ್ 5 ಅಂಕ ಮಾತ್ರ ಗಳಿಸಿದರು.
ನಾಳೆಯ ಪಂದ್ಯಗಳು:
1) ಜೈಪುರ್ ಪಿಂಕ್ ಪ್ಯಾಂಥರ್ಸ್ vs ಪಟ್ನಾ ಪೈರೇಟ್ಸ್, ಸಮಯ ಸಂಜೆ 7:30ಕ್ಕೆ
2) ಗುಜರಾತ್ ಜೈಂಟ್ಸ್ vs ಬೆಂಗಳೂರು ಬುಲ್ಸ್, ಸಮಯ ರಾತ್ರಿ 8:30ಕ್ಕೆ
ಇದನ್ನೂ ಓದಿ: PKL 8: ತೆಲುಗು ಟೈಟಾನ್ಸ್ಗೆ 8ನೇ ಪಂದ್ಯದಲ್ಲೂ ಸಿಗದ ಜಯ; ಪಟ್ನಾ ಪೈರೇಟ್ಸ್ ಅಗ್ರಸ್ಥಾನಕ್ಕೆ
ಅಂಕಪಟ್ಟಿ:
1) ಪಟ್ನಾ ಪೈರೇಟ್ಸ್: 34 ಅಂಕ
2) ಬೆಂಗಳೂರು ಬುಲ್ಸ್: 33 ಅಂಕ
3) ದಬಂಗ್ ಡೆಲ್ಲಿ: 32 ಅಂಕ
4) ತಮಿಳ್ ತಲೈವಾಸ್: 27 ಅಂಕ
5) ಯು ಮುಂಬಾ: 25 ಅಂಕ
6) ಯು ಪಿ ಯೋದ್ಧಾ: 23 ಅಂಕ
7) ಜೈಪುರ್ ಪಿಂಕ್ ಪ್ಯಾಂಥರ್ಸ್: 23 ಅಂಕ
8) ಹರ್ಯಾಣ ಸ್ಟೀಲರ್ಸ್: 23 ಅಂಕ
9) ಬೆಂಗಾಲ್ ವಾರಿಯರ್ಸ್: 22 ಅಂಕ
10) ಪುಣೇರಿ ಪಲ್ಟನ್: 21 ಅಂಕ
11) ಗುಜರಾತ್ ಜೈಂಟ್ಸ್: 20 ಅಂಕ
12) ತೆಲುಗು ಟೈಟಾನ್ಸ್: 10 ಅಂಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ