ಪ್ರಸ್ತುತ BCCI ಕಾರ್ಯದರ್ಶಿ ಜಯ್ ಶಾ (Jay Shah ) ಇಂದು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಚೇತನ್ ಶರ್ಮಾ (Chetan Sharma) ಅವರು ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಹುದ್ದೆಯನ್ನು ಮುಂದುವರಿಸಲಿದ್ದಾರೆ ಎಂದು ಜಯ್ ಶಾ ಅವರು ಅಧಿಕೃತವಾಗಿ ತಿಳಿಸಿದ್ದಾರೆ. ಸುಲಕ್ಷಣ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜ್ಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (CAC) ವಿಶೇಷ ಸಂದರ್ಶನದ ಆಧಾರದ ಮೇಲೆ ಆಯ್ಕೆ ಸಮಿತಿಗೆ ಚೇತನ್ ಶರ್ಮಾ, ಶಿವಸುಂದರ್ ದಾಸ್, ಸುಬ್ರೋತೊ ಬ್ಯಾನರ್ಜಿ, ಸಲೀಲ್ ಅಂಕೋಲಾ, ಶ್ರೀಧರನ್ ಶರತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಟ್ವಿಟರ್ ಮೂಲಕ ತಿಳಿಸಿದೆ.
ಮರು ಆಯ್ಕೆ ಆದ ಚೇತನ್ ಶರ್ಮಾ:
ಇನ್ನು, ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸೋತ ಬಳಿಕ ಬಿಸಿಸಿಐ ಅನೇಖ ಮಹತ್ವದ ಬದಲಾವಣೆಗಳನ್ನು ಮಾಡಲಾರಂಭಿಸಿತ್ತು. ಅದರ ಭಾಗವಾಗಿ ಮೊದಲಿಗೆ ಆಯ್ಕೆಗಾರರ ಸಮಿತಿಯನ್ನು ವಜಾಗೊಳಿಸಿತ್ತು. ಹೊಸದಾಗಿ ಆಯ್ಕೆಗಾರರ ಸಮಿತಿಯನ್ನು ರಚಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಅದರಂತೆ ಇದೀಗ ಬಿಸಿಸಿಐ ಆಯ್ಕೆಗಾರರ ಸಮಿತಿಯನ್ನು ಘೋಷಣೆ ಮಾಡಿದ್ದು, ಮತ್ತೊಮ್ಮೆ ಚೇತನ್ ಶರ್ಮಾ ಅವರನ್ನೇ ಆಯ್ಕೆಗಾರರ ಸಮಿತಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
NEWS 🚨- BCCI announces All-India Senior Men Selection Committee appointments.
Mr Chetan Sharma recommended for the role of Chairman of the senior men’s selection committee.
More details 👇👇https://t.co/K5EUPk454Y
— BCCI (@BCCI) January 7, 2023
ಚೇತನ್ ಶರ್ಮಾ ಅಧಿಕಾರಾವಧಿಯಲ್ಲಿ ಭಾರತದ ಪ್ರದರ್ಶನ:
ಚೇತನ್ ಶರ್ಮಾ ಅವರ ಕೊನೆಯ ಅವಧಿಯಲ್ಲಿ ಭಾರತ ತಂಡದ ಪ್ರದರ್ಶನ ವಿಶೇಷವೇನೂ ಆಗಿರಲಿಲ್ಲ. 2021 ಮತ್ತು 2022ರ ಟಿ20 ವಿಶ್ವಕಪ್ನಿಂದ ಭಾರತ ಹೊರಗುಳಿಯಬೇಕಾಯಿತು. 2022ರ ಏಷ್ಯಾಕಪ್ನ ಸೂಪರ್ 4 ಪಂದ್ಯದಲ್ಲೂ ಇದೇ ಭಾರತ ತಂಡ ಸೋತಿತ್ತು. ಕಳೆದ ವರ್ಷ ಜೂನ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲೂ ಭಾರತ ಹೊರಬಿದ್ದಿತ್ತು. ಈ ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ನವೆಂಬರ್ 18ರಂದು ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು. ಆದರೆ ಮತ್ತೆ ಅದೇ ತಪ್ಪನ್ನು ಬಿಸಿಸಿಐ ಮಾಡಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದ್ದು, ಅನೇಕರು ಇದರ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಹಿರಿಯ ಪುರುಷರ ರಾಷ್ಟ್ರೀಯ ಆಯ್ಕೆ ಸಮಿತಿ:
ಚೇತನ್ ಶರ್ಮಾ
ಶಿವಸುಂದರ್ ದಾಸ್
ಸುಬ್ರೋತೋ ಬ್ಯಾನರ್ಜಿ
ಸಲೀಲ್ ಅಂಕೋಲಾ
ಶ್ರೀಧರನ್ ಶರತ್
ಸಮಿತಿಯು ಚೇತನ್ ಶರ್ಮಾ ಅವರನ್ನು ಹಿರಿಯ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಈ ಸಮಿತಿಯು ಟೀಂ ಇಂಡಿಯಾದ ಮುಂದಿನ ನ್ಯೂಜಿಲ್ಯಾಂಡ್ ಸರಣಿಗೆ ತಂಡವನ್ನು ಆಯ್ಕೆ ಮಾಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ