Tokyo Olympics- ಕುಸ್ತಿಯಲ್ಲಿ ಭಾರತದ ಚಿನ್ನದ ಕನಸು ಭಗ್ನ; ಬಲಿಷ್ಠ ಆಟಗಾರನಿಗೆ ಶರಣಾದ ಬಜರಂಗ್

ಭಾರತದ ಪ್ರಬಲ ಪೈಲ್ವಾನ್ ಎನಿಸಿದರೂ ಬಜರಂಗ್ ಪೂನಿಯಾ ಅವರ ದೌರ್ಬಲ್ಯ ಅವರ ಕಾಲುಗಳು. ತನ್ನ ಕಾಲನ್ನ ಎದುರಾಳಿ ಲಾಕ್ ಮಾಡಿದರೆ ಬಿಡಿಸಿಕೊಳ್ಳಲು ಪರದಾಡುತ್ತಾರೆ. ಸೆಮಿಫೈನಲ್​ನಲ್ಲಿ ಇದೇ ಅವರ ಸೋಲಿಗೆ ಕಾರಣವಾಯಿತು.

Bajrang Punia

Bajrang Punia

  • News18
  • Last Updated :
  • Share this:
ಬೆಂಗಳೂರು, ಆ. 06: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಭಾರತದ ಆಸೆ ಕಮರಿಹೋಗಿದೆ. ಚಿನ್ನ ಗೆಲ್ಲುವ ನೆಚ್ಚಿನ ಆಟಗಾರನೆನಿಸಿದ್ದ ಬಜರಂಗ್ ಪೂನಿಯಾ ಇಂದು ಸೆಮಿಫೈನಲ್​ನಲ್ಲಿ ಮುಗ್ಗರಿಸಿದರು. ಅಜರ್ ಬೈಜಾನ್ ದೇಶದ ಪೈಲ್ವಾನ್ ಹಾಜಿ ಆಲಿಯೆವ್ ವಿರುದ್ಧ ಬಜರಂಗ್ 5-12 ಅಂಕಗಳಿಂದ ಸೋಲಪ್ಪಿದರು. ಆದರೆ, ಅಂತಿಮ ಕ್ಷಣದವರೆಗೂ ಬಜರಂಗ್ ವೀರೋಚಿತ ಹೋರಾಟ ತೋರಿದರು. ಆದರೆ, ಮೂರು ಬಾರಿಯ ವಿಶ್ವ ಚಾಂಪಿಯನ್ ಎನಿಸಿದ ಎದುರಾಳಿ ಕುಸ್ತಿಪಟು ಎದುರು ಬಜರಂಗ್​ಗೆ ಮೇಲುಗೈ ಸಾಧಿಸಲು ಆಗಲಿಲ್ಲ. ಭಾರತದ ಅಗ್ರಮಾನ್ಯ ಪೈಲ್ವಾನ್ ಎನಿಸಿರುವ ಬಜರಂಗ್ ಅವರ ಪ್ರಮುಖ ದೌರ್ಬಲ್ಯ ಎಂದರೆ ಅವರ ಕಾಲು. ಎದುರಾಳಿಯು ತನ್ನ ಕಾಲಿಗೆ ಪಟ್ಟು ಹಾಕಿದರೆ ಅದರಿಂದ ಬಿಡಿಸಿಕೊಳ್ಳುವ ಚಾಕಚಕ್ಯತೆ ಬಜರಂಗ್​ಗೆ ಹೆಚ್ಚಿಲ್ಲ. ಇದೇ ದೌರ್ಬಲ್ಯವನ್ನು ಹಾಜಿ ಆಲಿಯೆವ್ ಸೆಮಿಫೈನಲ್​ನಲ್ಲಿ ಚೆನ್ನಾಗಿ ಬಳಸಿಕೊಂಡರು.

ಪಂದ್ಯದ ಮೊದಲ ಸುತ್ತಿನಲ್ಲಿ ಬಜರಂಗ್​ನ ಕಾಲುಗಳ ಮೇಲೆ ದಾಳಿ ಮಾಡಿ ಸುತ್ತಿಸಿ ಎರಡು ಪಾಯಿಂಟ್ ಕಲೆ ಹಾಕಿದರು. ಮತ್ತೊಂದು ಬಾರಿ ಇದೇ ರೀತಿ ಮಾಡಿ ಇನ್ನೆರಡು ಪಾಯಿಂಟ್ ಪಡೆದರು. ಎರಡನೇ ಅವಧಿಯಲ್ಲಿ ಹಾಜಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಸರಿಯಾದ ಸಮಯ ನೋಡಿ ಬಜರಂಗ್ ತೊಡೆಗೆ ತನ್ನ ತೋಳನ್ನ ಲಾಕ್ ಮಾಡಿ ಎತ್ತಿ ಬಿಸಾಡಿದರು. ಇದರಿಂದ 4 ಅಂಕಗಳು ದೊರೆತವು. ಅದಾದ ಬಳಿಕ ಬಜರಂಗ್ ತಿರುಗಿ ನಿಂತರು. ಎರಡು ಬಾರಿ ಎದುರಾಳಿಗೆ ಪಟ್ಟುಹಾಕಿ ಉರುಳುರುಳಿಸಿ 4 ಅಂಕ ಪಡೆದರು. ಆದರೆ ಪಂದ್ಯದ ಮೇಲೆ ಬಜರಂಗ್ ಮೇಲುಗೈ ಸಾಧಿಸುತ್ತಾರೆ ಎನ್ನುವಷ್ಟರಲ್ಲಿ ಕಾಲ ಮಿಂಚಿಹೋಗುತ್ತಿತ್ತು. ಇದನ್ನ ಅರಿತ ಅಜರ್ ಬೈಜಾನ್ ಕುಸ್ತಿಪಟು ಬಜರಂಗ್ ಪೂನಿಯಾರ ಬಾಡಿ ಲಾಕ್ ಮಾಡುವಲ್ಲಿ ಯಶಸ್ವಿಯಾದರು. ಇದರಿಂದ ಬಜರಂಗ್ ಹೆಚ್ಚು ಮಿಸುಕಾಡಲು ಸಾಧ್ಯವಾಗದೇ ಅಂಕ ಗಳಿಸುವ ಅವಕಾಶ ಕೈತಪ್ಪಿಹೋಗಿತ್ತು. ತಾನು ಸೋಲುವುದು ಖಚಿತವಾಗುತ್ತಿದ್ದಂತೆಯೇ ಅವಧಿ ಮುಗಿಯುವುದರೊಳಗೆ ಬಜರಂಗ್ ಹತಾಶೆಗೊಂಡು ಸೋಲೊಪ್ಪಿಕೊಂಡರು.

65 ಕಿಲೋ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಜರಂಗ್ ಪೂನಿಯಾ ಸೆಮಿಫೈನಲ್​ನಲ್ಲಿ ಸೋತರೂ ಕಂಚಿನ ಪದಕ ಗೆಲ್ಲುವ ಅವಕಾಶ ಹೊಂದಿದ್ದಾರೆ. ರಪೆಶಾಜ್ (Repechage Round) ಸುತ್ತಿನಲ್ಲಿ ಕಂಚಿನ ಪದಕಕ್ಕಾಗಿ ಅವರು ದೌಲತ್ ನಿಯಾಜ್​ಬೆಕೋವ್ ಅಥವಾ ಅದಾಮ ದಿಯಾಟ ಅವರಲ್ಲೊಬ್ಬರನ್ನ ಎದುರಿಸಲಿದ್ದಾರೆ.

ಇದನ್ನೂ ಓದಿ: Olympics Hockey: ಭಾರತ ಮಹಿಳಾ ಹಾಕಿ ತಂಡದ ಕಂಚು ಆಸೆ ಭಗ್ನ; ಬ್ರಿಟನ್ ವಿರುದ್ಧ ವೀರೋಚಿತ ಸೋಲು

ಭಾರತದ ಪರ ಭಾಗವಹಿಸಿದ್ದ ಏಳು ಕುಸ್ತಿಪಟುಗಳ ಪೈಕಿ ಪುರುಷರ 57 ಕಿಲೋ ವಿಭಾಗದಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಜಯಿಸಿದ್ದಾರೆ. ದೀಪಕ್ ಪೂನಿಯಾ ಅವರು ಸೆಮಿಫೈನಲ್ ಹಂತದವರೆಗೂ ಹೋಗಿ ಪದಕ ವಂಚಿತರಾದರು. ಈಗ ಬಜರಂಗ್ ಪೂನಿಯಾ ಕಂಚಿನ ಪದಕ ಗೆಲ್ಲುತ್ತಾರಾ ಕಾದು ನೋಡಬೇಕು. ಇನ್ನು, ಮಹಿಳೆಯರ ವಿಭಾಗದಲ್ಲಿ ಭಾರತದ ಎಲ್ಲಾ ನಾಲ್ಕು ಕುಸ್ತಿಪಟುಗಳು ನಿರಾಸೆ ಮೂಡಿಸಿದ್ಧಾರೆ. ವಿನೇಶ್ ಫೋಗಾಟ್ ಅವರೊಬ್ಬರೇ ಒಂದು ಪಂದ್ಯ ಗೆಲ್ಲಲು ಯಶಸ್ವಿಯಾಗಿದ್ದು. ಇನ್ನುಳಿದು ಮೂವರು ಕುಸ್ತಿಪಟುಗಳು ಒಂದೂ ಪಂದ್ಯ ಗೆಲ್ಲಲು ಶಕ್ಯರಾಗಲಿಲ್ಲ. 2016ರ ಒಲಿಂಪಿಕ್ಸ್​ನಲ್ಲಿ ಸುಶೀಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ಅವರು ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ಈಗ ರವಿ ದಹಿಯಾ ಬೆಳ್ಳಿ ಗೆದ್ದಿದ್ದಾರೆ. ಒಂದು ವೇಳೆ ಬಜರಂಗ್ ಕಂಚು ಗೆದ್ದರೆ ಹಿಂದಿನ ಒಲಿಂಪಿಕ್ಸ್ ಸಾಧನೆ ಸರಿಗಟ್ಟಿದಂತಾಗುತ್ತದೆ.

ಇನ್ನು, ಇವತ್ತು 20 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಇಬ್ಬರು ಮಹಿಳಾ ಅಥ್ಲೀಟ್​ಗಳು ನಿರಾಸೆ ಅನುಭವಿಸಿದರು. ಆದರೆ, ಪ್ರಿಯಾಂಕಾ ಗೋಸ್ವಾಮಿ 1:32:36 ಕಾಲದಲ್ಲಿ ಓಡಿ 17ನೇ ಸ್ಥಾನ ಪಡೆದರು. ಭಾವನಾ ಜಾಟ್ 1:37:38 ಗಂಟೆಯಲ್ಲಿ ತಲುಪಿ 32ನೇ ಸ್ಥಾನ ಪಡೆದರು. ಪ್ರಿಯಾಂಕಾ ಅವರ ವೈಯಕ್ತಿಕ ದಾಖಲೆ 1:28:45 ಇದೆ. ಭಾವನಾ ಜಾಟ್ ಕೂಡ 1:29 ಗಂಟೆಯಲ್ಲಿ 20 ಕಿಮೀ ನಡಿಗೆ ಪೂರ್ಣಗೊಳಿಸಿದ ದಾಖಲೆ ಇದೆ. ಈ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದ ಗೆದ್ದ ಇಟಲಿ ಆಟಗಾರ್ತಿ ತೆಗೆದುಕೊಂಡ ಅವಧಿ 1:29:12. ಪ್ರಿಯಾಂಕಾ ಮತ್ತು ಭಾವನಾ ಜಾಟ್ ಅವರು ತಮ್ಮ ವೈಯಕ್ತಿಕ ಸಾಧನೆಯನ್ನ ಮೀರಿದ್ದರೆ ಪದಕ ಗೆಲ್ಲುವ ಸಾಧ್ಯತೆ ದಟ್ಟವಾಗಿರುತ್ತಿತ್ತು. ದುರದೃಷ್ಟಕ್ಕೆ ಅವರಿಗೆ ಇದು ಸಾಧ್ಯವಾಗಲಿಲ್ಲ.

ಇನ್ನು, ಭಾರತ ಮಹಿಳಾ ಹಾಕಿ ತಂಡ ಇವತ್ತು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಬ್ರಿಟನ್ ಎದುರು ಸೋತಿತು. ಇವತ್ತು ಬಜರಂಗ್ ಪೂನಿಯಾ ಅವರ ಅಮೋಘ ಪ್ರದರ್ಶನದ ಮಧ್ಯೆ ಭಾರತದ ಗಮನ ಸೆಳೆದದ್ದು ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್. ಇಂದು ನಡೆದ ಮೂರನೇ ಸುತ್ತಿನ ಬಳಿಕ ಅವರು ಪಾರ್ ಅಂಡರ್ 12 ಸ್ಕೋರ್ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ. ನಾಳೆ ಕೊನೆಯ ಸುತ್ತಿನಲ್ಲಿ ಅದೃಷ್ಟ ಕುಲಾಯಿಸಿದರೆ ಬೆಂಗಳೂರಿನ ಹುಡುಗಿಗೆ ಚಿನ್ನದ ಪದಕ ದೊರೆತರೂ ಅಚ್ಚರಿ ಇಲ್ಲ.
Published by:Vijayasarthy SN
First published: