ಭಾರತದಲ್ಲಿ ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ನಡೆಯಲ್ಲಿರುವ 4 ಟೆಸ್ಟ್ ಪಂದ್ಯಗಳ ಬಾರ್ಡರ್- ಗವಾಸ್ಕರ್ (Border - Gavaskar) ಟೆಸ್ಟ್ ಸರಣಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ(Cricket Australia) 18 ಸದಸ್ಯರ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಯುವ ಸ್ಪಿನ್ನರ್ ಟಾಡ್ ಮರ್ಫಿಗೆ(Todd Murphy) ಅವಕಾಶ ಪಡೆದುಕೊಂಡಿದ್ದಾರೆ. ಉಪಖಂಡದಲ್ಲಿ ಸರಣಿ ನಡೆಯುತ್ತಿರುವುದರಿಂದ ಆಯ್ಕೆ ಸಮಿತಿ 4 ಸ್ಪಿನ್ನರ್ಗಳನ್ನು ಆಯ್ಕೆ ಮಾಡಿದೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿರುವ ಆತ್ಮವಿಶ್ವಾಸದಲ್ಲಿರುವ ಆಸ್ಟ್ರೇಲಿಯಾ ತಂಡ ಭಾರತದಲ್ಲಿ ಭಾರತ ತಂಡವನ್ನು ಮಣಿಸುವ ಆಶಯದೊಂದಿಗೆ ಭಾರತಕ್ಕೆ ಕಾಲಿಡಲಿದೆ. ತವರಿನಲ್ಲಿ ನಡೆದಿದ್ದ ಕಳೆದ ಬಾರ್ಡರ್ ಗವಾಸ್ಕರ್ ಸರಣಿಯನ್ನು ಆಸ್ಟ್ರೇಲಿಯಾ 1-2 ರಲ್ಲಿ ಸೋಲು ಕಂಡಿತ್ತು.
ನಾಲ್ವರು ಸ್ಪಿನ್ನರ್ಗಳಿಗೆ ಅವಕಾಶ
ಭಾರತದ ನೆಲದಲ್ಲಿ ಸರಣಿ ನಡೆಯುವುದನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಆಯ್ಕೆ ಸಮಿತಿ ಟೆಸ್ಟ್ ತಂಡದಲ್ಲಿ 4 ಸ್ಪಿನ್ನರ್ಗಳಿಗೆ ಸ್ಥಾನ ನೀಡಿದೆ. ಹಿರಿಯ ಸ್ಪಿನ್ನರ್ ನೇಥನ್ ಲಿಯಾನ್, ಆಷ್ಟನ್ ಅಗರ್ ಮತ್ತು ಮಿಚೆಲ್ ಸ್ವೆಪ್ಸನ್ ಜೊತೆಗೆ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಮಿಂಚುತ್ತಿರುವ ವಿಕ್ಟೋರಿಯಾದ ಉದಯೋನ್ಮುಖ ಸ್ಪಿನ್ನರ್ ಟಾಡ್ ಮರ್ಫಿ ಕೂಡ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮಧ್ಯದಲ್ಲಿ ಅವಕಾಶ ಪಡೆದಿದ್ದ ವಿಕೆಟ್ ಕೀಪರ್ ಬ್ಯಾಟರ್ ಪೀಟರ್ ಹ್ಯಾಂಡ್ಸ್ಕಾಂಬ್ ಕೂಡ 3 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಇವರ ಜೊತೆಗೆ ಬ್ಯಾಟಿಂಗ್ ಬ್ಯಾಕ್ ಅಪ್ ಆಗಿ ಮ್ಯಾಥ್ಯೂ ರೆನ್ಷಾ ಅವಕಾಶ ಪಡೆದಿದ್ದಾರೆ.
ಆಸ್ಟ್ರೇಲಿಯಾ 18 ಸದಸ್ಯರ ಟೆಸ್ಟ್ ತಂಡ
ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಜೋಶ್ ಹೆಜಲ್ವುಡ್, ಟ್ರಾವಿಸ್ ಹೆಡ್, ಆಷ್ಟನ್ ಅಗರ್, ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲಾಬುಶೇನ್, ನೇಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಷಾ, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ಮಿಚೆಲ್ ಸ್ವೆಪ್ಸನ್, ಪೀಟರ್ ಹ್ಯಾಂಡ್ಸ್ಕಾಂಬ್
ಪಂದ್ಯಗಳ ವೇಳಾಪಟ್ಟಿ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಸ್ಟ್ ಪಂದ್ಯ ಫೆಬ್ರವರಿ 9-13ರವರೆಗೆ ನಾಗ್ಪುರದಲ್ಲಿ ನಡೆಯಲಿದೆ. 2ನೇ ಟೆಸ್ಟ್ ಫೆಬ್ರವರಿ 17-21, 3ನೇ ಟೆಸ್ಟ್ ಧರ್ಮಸಾಲದಲ್ಲಿ ಮಾರ್ಚ್ 1-5ರವರೆ ಹಾಗೂ ಕೊನೆಯ ಟೆಸ್ಟ್ ಅಹ್ಮದಾಬಾದ್ನಲ್ಲಿ 9-13ರವರೆಗೆ ನಡೆಯಲಿದೆ. ಟೆಸ್ಟ್ ಸರಣಿಯ ನಂತರ 3 ಪಂದ್ಯಗಳ ಏಕದಿನ ಪಂದ್ಯ ನಡೆಯಲಿದ್ದು, ಮೊದಲನೇ ಪಂದ್ಯ ಮಾರ್ಚ್ 17ರಂದು ಮುಂಬೈನ ವಾಂಖೆಡೆಯಲ್ಲಿ, 2ನೇ ಪಂದ್ಯ ವಿಶಾಖಪಟ್ಟಣದ ವೈ ಎಸ್ ರಾಜಶೇಖರ್ ರೆಡ್ಡಿ ಸ್ಟೇಡಿಯಂನಲ್ಲಿ ಹಾಗೂ ಮೂರನೇ ಪಂದ್ಯ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.
ಬಾರ್ಡರ್-ಗಾವಾಸ್ಕರ್ ಟ್ರೋಪಿ ಅಂಕಿ-ಅಂಶ
ಎರಡು ತಂಡಗಳ ನಡುವೆ 1996/7ರವರೆಗ ಒಟ್ಟು 15 ಬಾರ್ಡರ್ ಗವಾಸ್ಕರ್ ಸರಣಿ ನಡೆದಿದ್ದು, ಅದರಲ್ಲಿ ಭಾರತ ತಂಡ ಸಿಂಹ ಪಾಲು ಪಡೆದುಕೊಂಡಿದೆ. ಭಾರತ ತಂಡ ಒಟ್ಟು 9 ಬಾರಿ ಟ್ರೋಪಿಯನ್ನು ತನ್ನದಾಗಿಸಿಕೊಂಡಿದ್ದರೆ, ಆಸ್ಟ್ರೇಲಿಯಾ 5 ಬಾರಿ ಗೆಲುವು ಸಾಧಿಸಿದೆ. ಒಂದು ಸರಣಿ ಡ್ರಾನಲ್ಲಿ ಅಂತ್ಯಗೊಂಡಿದೆ.
18 ವರ್ಷಗಳಿಂದ ತವರಿನಲ್ಲಿ ಭಾರತಕ್ಕೆ ಸೋಲಿಲ್ಲ
15 ಸರಣಿಗಳಲ್ಲಿ ಭಾರತದಲ್ಲಿ 8 ಆಸ್ಟ್ರೇಲಿಯಾದಲ್ಲಿ 7 ಸರಣಿ ನಡೆದಿವೆ. ಭಾರತ ತಂಡದ ತವರಿನಲ್ಲಿ ಕಳೆದ 18 ವರ್ಷಗಳಿಂದ ಕಾಂಗರೂ ಪಡೆದ ವಿರುದ್ಧ ಸರಣಿ ಕಳೆದುಕೊಂಡಿಲ್ಲ. 2004-5ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ 2-1ರಲ್ಲಿ ಗೆಲುವು ಸಾಧಿಸಿತ್ತು. ಇನ್ನು ತವರಿನಲ್ಲಿ ನಡೆದಿರುವ 8 ಸರಣಿಗಳಲ್ಲಿ ಭಾರತ ತಂಡ 7 ರಲ್ಲಿ ಗೆಲುವು ಸಾದಿಸಿ ಒಮ್ಮೆ ಮಾತ್ರ ಸೋಲು ಕಂಡಿದೆ. ಇನ್ನು ಆಸ್ಟ್ರೇಲಿಯಾದಲ್ಲಿ ನಡೆದಿರುವ 7 ಸರಣಿಗಳಲ್ಲಿ ಆಸ್ಟ್ರೇಲಿಯಾ 4 ಹಾಗೂ ಭಾರತ 2 ಬಾರಿ ಟ್ರೋಫಿ ತನ್ನದಾಗಿಸಿಕೊಂಡಿದೆ. ಒಂದು ಬಾರಿ ಡ್ರಾನಲ್ಲಿ ಅಂತ್ಯಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ