ಜಾವೆಲಿನ್ ಎಸೆತ: ನೀರಜ್ ಚೋಪ್ರಾ ರಾಷ್ಟ್ರೀಯ ದಾಖಲೆ; ಭಾರತಕ್ಕೆ 8ನೇ ಚಿನ್ನ


Updated:August 27, 2018, 8:04 PM IST
ಜಾವೆಲಿನ್ ಎಸೆತ: ನೀರಜ್ ಚೋಪ್ರಾ ರಾಷ್ಟ್ರೀಯ ದಾಖಲೆ; ಭಾರತಕ್ಕೆ 8ನೇ ಚಿನ್ನ
ನೀರಜ್ ಚೋಪ್ರಾ

Updated: August 27, 2018, 8:04 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 27): ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಇಂದು ಸೋಮವಾರ ಎಂಟನೇ ಚಿನ್ನ ಸಿಕ್ಕಿದೆ. ಭರ್ಜಿ ಎಸೆತದಲ್ಲಿ (ಜಾವೆಲಿನ್ ಥ್ರೋ) ನೀರಜ್ ಚೋಪ್ರಾ ಅಗ್ರಸ್ಥಾನ ಪಡೆದಿದ್ದಾರೆ. 88.03 ದೂರ ಭರ್ಜಿ ಎಸೆದ ನೀರಜ್ ಚೋಪ್ರಾ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಈ ಮೂಲಕ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆಯನ್ನು ಚೋಪ್ರಾ ಉಳಿಸಿಕೊಂಡರು. ಏಷ್ಯನ್ ಗೇಮ್ಸ್ ಜಾವೆಲಿನ್ ಥ್ರೋನಲ್ಲಿ ಭಾರತ ಕೊನೆಯ ಬಾರಿ ಚಿನ್ನ ಗಳಿಸಿದ್ದು 1982ರಲ್ಲಿ. ಅಂದರೆ, 36 ವರ್ಷಗಳ ನಂತರ ನೀರಜ್ ಚೋಪ್ರಾ ಅವರ ಮೂಲಕ ಭಾರತಕ್ಕೆ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಲಭಿಸಿದೆ.

ನೀರಜ್ ಚೋಪ್ರಾ ತಮ್ಮ ಮೂರನೇ ಪ್ರಯತ್ನದಲ್ಲಿ 88.03 ಮೀಟರ್ ದೂರಕ್ಕೆ ಭರ್ಜಿ ಎಸೆದರು. ಅವರ ಇತರ ಐದು ಪ್ರಯತ್ನಗಳು ಈ ಮಟ್ಟಕ್ಕೆ ಬರಲಿಲ್ಲ. ಆದರೆ, ಅವರ ಮೂರನೇ ಯತ್ನದ ಎಸೆತವು ಚಿನ್ನ ದಕ್ಕಿಸಿಕೊಳ್ಳಲು ಯಶಸ್ವಿಯಾಯಿತು.

ನೀರಜ್ ಚೋಪ್ರಾ ಅವರು ಶಿರಸಿ ಮೂಲದ ಜಾವೆಲಿನ್ ಪಟು ಕಾಶಿನಾಥ್ ನಾಯ್ಕ್ ಅವರ ಗರಡಿಯಲ್ಲಿ ಅಭ್ಯಾಸ ಮಾಡಿದವರಾಗಿದ್ದಾರೆ. ಚೋಪ್ರಾ ಸದ್ಯ ದೇಶದ ನಂಬರ್ ಒನ್ ಜಾವೆಲಿನ್ ಥ್ರೋ ಪಟುವಾಗಿದ್ಧಾರೆ. ಇವರಿಂದ ಚಿನ್ನದ ಪದಕದ ನಿರೀಕ್ಷೆಯು ಕ್ರೀಡಾಕೂಟದ ಮುನ್ನವೇ ಇತ್ತು. ಆದರೆ, ಕಳೆದ ವರ್ಷದಂದು ಚೈನೀ ಥೈಪೆ ದೇಶದ ಅಥ್ಲೀಟ್ ಎಸೆದ 91.36 ಮೀಟರ್ ದಾಖಲೆಯನ್ನು ಮುರಿಯುವ ಅವಕಾಶ ಚೋಪ್ರಾ ಕೈತಪ್ಪಿತು. 1997ರಲ್ಲಿ ಚೆಕೋಸ್ಲಾವಾವಿಕಾ ದೇಶದ ಜಾನ್ ಜೆಲೆಜ್ನಿ ಅವರು 98.48 ಮೀಟರ್ ದೂರ ಎಸೆದದ್ದು ಈಗಲೂ ವಿಶ್ವದಾಖಲೆಯಾಗಿಯೇ ಉಳಿದಿದೆ.

ಇನ್ನೂ 20 ವರ್ಷದ ವಯಸ್ಸಿನ ನೀರಜ್ ಚೋಪ್ರಾ ಅವರ ಸಾಧನೆಯನ್ನು ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಹಲವರು ಶ್ಲಾಘಿಸಿ ಟ್ವೀಟ್ ಮಾಡಿದ್ಧಾರೆ.











ನೀರಜ್ ಚೋಪ್ರಾ ಮೂಲಕ ಭಾರತಕ್ಕೆ ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್​ನಲ್ಲಿ ಎರಡನೇ ಚಿನ್ನ ಸಿಕ್ಕಂತಾಗಿದೆ. ಮೊನ್ನೆಯಷ್ಟೇ ಪುರುಷರ ಶಾಟ್​ಪುಟ್ ಎಸೆತದ ಸ್ಪರ್ಧೆಯಲ್ಲಿ ತೇಜಿಂದರ್ ಸಿಂಗ್ ತೂರ್ ಅವರು 20.75 ಮೀಟರ್ ದೂರ ಎಸೆದು ಹೊಸ ರಾಷ್ಟ್ರೀಯ ದಾಖಲೆಯೊಂದಿಗೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ಜಯಿಸಿದ್ದರು.

ಅಥ್ಲೆಟಿಕ್ಸ್​ನಲ್ಲಿ ಇವೆರಡು ಚಿನ್ನ ಬಿಟ್ಟರೆ, ಐದಾರು ಬೆಳ್ಳಿ ಪದಕಗಳು ದಕ್ಕಿವೆ. ದ್ಯುತಿ ಚಂದ್, ಹಿಮಾ ದಾಸ್ ಮತ್ತು ಮೊಹಮ್ಮದ್ ಅನಾಸ್ ನಿನ್ನೆ ರಾಷ್ಟ್ರೀಯ ದಾಖಲೆಯೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು. ಇಂದು ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ಓಟದ ಸ್ಪರ್ಧೆಯಲ್ಲಿ ಸುಧಾ ಸಿಂಗ್, ಪುರುಷರ 400 ಮೀಟರ್ ಹರ್ಡಲ್ಸ್​ನಲ್ಲಿ ಧರುಣ್ ಅಯ್ಯಸ್ವಾಮಿ, ಮಹಿಳೆಯರ ಲಾಂಗ್ ಜಂಪ್​ನಲ್ಲಿ ನೀನಾ ವರಾಕಿಲ್ ಅವರೂ ಸಿಲ್ವರ್ ಮೆಡಲ್ ಪಡೆದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

ಸೋಮವಾರ ಸಂಜೆಯ ವೇಳೆಗೆ ಭಾರತ 8 ಚಿನ್ನ, 13 ಬೆಳ್ಳಿ ಮತ್ತು 20 ಕಂಚು ಹೀಗೆ ಒಟ್ಟು 41 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕಳೆದ ಬಾರಿಯ ಕ್ರೀಡಾಕೂಟದಲ್ಲಿ ಭಾರತ 11 ಚಿನ್ನ ಗೆಲ್ಲಲು ಯಶಸ್ವಿಯಾಗಿತ್ತು. ಈವರೆಗೆ 15 ಚಿನ್ನ ಗೆದ್ದಿರುವುದೇ ಭಾರತದ ಗರಿಷ್ಠ ಚಿನ್ನದ ಸಾಧನೆಯಾಗಿದೆ. ಒಟ್ಟಾರೆ ಪದಕಕ್ಕೆ ಬಂದರೆ 2010ರಲ್ಲಿ 65 ಪದಕ ಗೆದ್ದಿದ್ದು ಈವರೆಗಿನ ಭಾರತದ ಬೆಸ್ಟ್ ಪರ್ಫಾರ್ಮೆನ್ಸ್ ಆಗಿದೆ. ಇದೀಗ ಭಾರತವು ಈ ಸಾಧನೆಯನ್ನು ಹಿಂದಿಕ್ಕುತ್ತದಾ ಎಂದು ಕಾದುನೋಡಬೇಕು. ಬ್ಯಾಡ್ಮಿಂಟನ್, ಹಾಕಿ, ಬಾಕ್ಸಿಂಗ್ ಕ್ರೀಡೆಗಳಲ್ಲಿ ಭಾರತಕ್ಕೆ ಚಿನ್ನ ಗೆಲ್ಲುವ ಅವಕಾಶ ಇನ್ನೂ ಇದೆ. ಏಷ್ಯನ್ ಗೇಮ್ಸ್​ನಲ್ಲಿ ಇನ್ನೂ 6 ದಿನಗಳು ಬಾಕಿ ಉಳಿದಿವೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ