ಕಬಡ್ಡಿ: ಭಾರತಕ್ಕೆ ಸೋಲಿನ ಆಘಾತ; ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲು


Updated:August 20, 2018, 6:00 PM IST
ಕಬಡ್ಡಿ: ಭಾರತಕ್ಕೆ ಸೋಲಿನ ಆಘಾತ; ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲು
ಭಾರತ ಕಬಡ್ಡಿ ತಂಡ

Updated: August 20, 2018, 6:00 PM IST
- ನ್ಯೂಸ್18 ಕನ್ನಡ

ಜಕಾರ್ತ(ಆ. 20): ತನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಬೀಗುವ ಜಗಜಟ್ಟಿಗಳು ಈ ನೆಲದಲ್ಲಿ ಮಣ್ಣಾಗಿ ಹೋದ ಉದಾಹರಣೆಗಳುಂಟು. ಭಾರತದ ಕಬಡ್ಡಿ ತಂಡಕ್ಕೂ ಇಂಥದ್ದೇ ಗರ್ವಭಂಗವಾಗಿದೆ. ಕಬಡ್ಡಿ ಜಗತ್ತಿನ ಅನಭಿಷಿಕ್ತ ದೊರೆ ಎನಿಸಿದರುವ ಭಾರತ ತಂಡಕ್ಕೆ ಏಷ್ಯನ್ ಗೇಮ್ಸ್​ನಲ್ಲಿ ಸೋಲಿನ ಬರೆ ಸಿಕ್ಕಿದೆ. ಗೆದ್ದೇ ಗೆಲ್ಲುತ್ತೇವೆಂಬ ಹುಂಬ ಧೈರ್ಯದಲ್ಲಿದ್ದ ಭಾರತ ತಂಡಕ್ಕೆ ಕೊರಿಯನ್ನರು ಮರ್ಮಾಘಾತ ಕೊಟ್ಟಿದ್ದಾರೆ. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ಜಂಟಿ ತಂಡವು 24-23 ಅಂಕಗಳಿಂದ ಭಾರತವನ್ನ ರೋಚಕ ರೀತಿಯಲ್ಲಿ ಮಣಿಸಿದೆ. ಏಷ್ಯನ್ ಗೇಮ್ಸ್ ಇತಿಹಾದಲ್ಲಿ ಭಾರತದ ಕಬಡ್ಡಿ ತಂಡಕ್ಕೆ ಎರಗಿದ ಮೊದಲ ಸೋಲು ಇದಾಗಿದೆ.

2016ರ ಕಬಡ್ಡಿ ವಿಶ್ವಕಪ್​ನಲ್ಲಿ ಉದ್ಘಾಟನಾ ಪಂದ್ಯದಲ್ಲೇ ಭಾರತಕ್ಕೆ ಸೋಲಿನ ಆಘಾತವಾದ ಘಟನೆಯನ್ನು ಇಲ್ಲಿ ಸ್ಮರಿಸಬಹುದು. ಆಗ ಭಾರತಕ್ಕೆ ಸೋಲಿನ ರುಚಿ ನೀಡಿದ್ದು ದಕ್ಷಿಣ ಕೊರಿಯಾದವರೇ ಎಂಬುದು ಕಾಕತಾಳೀಯ. ಆ ವಿಶ್ವಕಪ್​ನಲ್ಲಿ ಆರಂಭದಲ್ಲೇ ಸಿಕ್ಕ ಸೋಲಿನಿಂದ ಪಾಠ ಕಲಿತ ಭಾರತ ತಂಡ ಆ ನಂತರ ಮತ್ಯಾವ ಪಂದ್ಯದಲ್ಲೂ ಮೈಮರೆಯಲಿಲ್ಲ. ಜಾಗ್ರತೆಯಿಂದ ಆಡಿ ಚಾಂಪಿಯನ್ ಎನಿಸಿತು. ಈಗ ಏಷ್ಯನ್ ಗೇಮ್ಸ್​ನಲ್ಲೂ ಮೈಮರೆವಿನಲ್ಲಿದ್ದ ಭಾರತಕ್ಕೆ ಕೊರಿಯನ್ನರು ಎಚ್ಚರಿಕೆಯ ಗಂಟೆ ಭಾರಿಸಿದ್ದಾರೆ. ಭಾರತ ನಿನ್ನೆ ನಡೆದ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳನ್ನ ಸೋಲಿಸಿತ್ತು. ಆ ಎರಡೂ ಪಂದ್ಯಗಳು ಏಕಪಕ್ಷೀಯವಾಗಿದ್ದರು.

ಇನ್ನು, ಇದೇ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಮಹಿಳಾ ಕಬಡ್ಡಿ ತಂಡವು 33-23 ಅಂಕಗಳಿಂದ ಇಂದು ಥಾಯ್ಲೆಂಡ್ ತಂಡವನ್ನು ಸೋಲಿಸಿತು.

ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಇದೆ. ಆದರೆ, ಪುರುಷರ ವಿಭಾಗದಲ್ಲಿ ಇರಾನ್ ಮತ್ತು ಕೊರಿಯಾ ತಂಡಗಳು ಭಾರತಕ್ಕೆ ತೀವ್ರ ಪೈಪೋಟಿ ನೀಡುವ ನಿರೀಕ್ಷೆ ಇದೆ. ಕೊರಿಯಾ ಈಗಾಗಲೇ ಶಾಕ್ ಕೊಟ್ಟಿದೆ. ಮುಂದೆ ಇರಾನ್ ತಂಡ ಕೂಡ ಭಾರತಕ್ಕೆ ಪ್ರಬಲ ಪ್ರತಿಸ್ಪರ್ಧೆಯೊಡ್ಡಬಹುದು.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ