ಭಾರತೀಯ ಕ್ರಿಕೆಟ್ನಲ್ಲಿ ಅನೇಕ ಡ್ರೆಸ್ಸಿಂಗ್ ರೂಂ ಕಥೆಗಳಿವೆ. ಅವುಗಳು ತುಂಬಾ ಆಸಕ್ತಿದಾಯಕವೂ ಆಗಿದೆ. ಆಟಗಾರರ ಪರಸ್ಪರ ಜಗಳ, ಮೋಜು-ಮಸ್ತಿಗಳು, ಆಟಗಾರರ ಜೀವನಕ್ಕೆ ಸಂಬಂಧಿಸಿದ ಹಲವು ವಿಶೇಷ ಸಂಗತಿಗಳು ಡ್ರೆಸ್ಸಿಂಗ್ ರೂಂನಿಂದ ಕೇಳಿಬರುತ್ತಲಿರುತ್ತವೆ. ಆದರೆ ಏಪ್ರಿಲ್ 17, 1986ರಂದು ಭಾರತೀಯ (Team India) ಡ್ರೆಸ್ಸಿಂಗ್ ಕೋಣೆಯಲ್ಲಿ ನಡೆದದ್ದು ಅತ್ಯಂತ ಸ್ಮರಣೀಯವಾದುದಾಗಿದೆ. ಅದು ದುಬೈನ ಶಾರ್ಜಾ (Sharjah ) ಸ್ಟೇಡಿಯಂನಲ್ಲಿ 1987ರ ಏಷ್ಯಾಕಪ್ನ (Asia Cup) ಪ್ರಸಿದ್ಧ ಭಾರತ ಮತ್ತು ಪಾಕಿಸ್ತಾನದ ಫೈನಲ್ ಪಂದ್ಯದ ದಿನದ ಒಂದು ಮೊದಲು. ಅಂಡರ್ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ (Dawood Ibrahim) ಭಾರತೀಯ ಡ್ರೆಸ್ಸಿಂಗ್ ರೂಂಗೆ ಕಾಲಿಟ್ಟು ಆಟಗಾರರಿಗೆ ಆಫರ್ ನೀಡಿದ್ದರು.
ಆದರೆ ಕಪಿಲ್ ದೇವ್ ಡ್ರೆಸ್ಸಿಂಗ್ ಕೋಣೆಗೆ ಪ್ರವೇಶಿಸಿದ ತಕ್ಷಣ ದಾವೂದ್ ಇಬ್ರಾಹಿಂ ಅವರನ್ನು ಹೊರಗೆ ನಡೆಯುವಂತೆ ಸೂಚಿಸಿದ್ದರಂತೆ. ಭಾರತದ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕರ್ ಅವರು ಬಹಳ ಹಿಂದೆಯೇ ಕಾರ್ಯಕ್ರಮವೊಂದರಲ್ಲಿ ಈ ಘಟನೆಯ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ಕಪಿಲ್ ದೇವ್ ಕೂಡ ಈ ಘಟನೆಯನ್ನು ಖಚಿತಪಡಿಸಿದ್ದಾರೆ.
ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂಗೆ ದಾವೂದ್:
ದಿಲೀಪ್ ವೆಂಗ್ಸರ್ಕರ್ ಪ್ರಕಾರ, ದಾವೂದ್ ಇಬ್ರಾಹಿಂ ಪಂದ್ಯಕ್ಕೂ ಮುನ್ನ ನಮ್ಮ ಡ್ರೆಸ್ಸಿಂಗ್ ಕೋಣೆಗೆ ಬಂದಿದ್ದರು. ಅವರೊಂದಿಗೆ ಬಾಲಿವುಡ್ ಹಾಸ್ಯನಟ ಮೆಹಮೂದ್ ಕೂಡ ಇದ್ದರು. ದಾವೂದ್ ಡ್ರೆಸ್ಸಿಂಗ್ ರೂಮ್ಗೆ ಬಂದು ಆಟಗಾರರಿಗೆ ನಾಳೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದರೆ ಪ್ರತಿಯೊಬ್ಬ ಆಟಗಾರನಿಗೆ ಟೊಯೊಟಾ ಕಾರು ನೀಡುವುದಾಗಿ ಹೇಳಿದ್ದರಂತೆ. ಪಂದ್ಯದ ಪೂರ್ವಭಾವಿ ಪತ್ರಿಕಾಗೋಷ್ಠಿಯ ನಂತರ ಭಾರತ ತಂಡದ ನಾಯಕ ಕಪಿಲ್ ದೇವ್ ಡ್ರೆಸ್ಸಿಂಗ್ ಕೋಣೆಗೆ ಆಗಮಿಸಿದಾಗ ಎಲ್ಲಾ ಕ್ರಿಕೆಟಿಗರು ಒಬ್ಬರನ್ನೊಬ್ಬರು ನೋಡುತ್ತಿದ್ದರು. ಕಪಿಲ್ ದೇವ್ ಡ್ರೆಸ್ಸಿಂಗ್ ರೂಂಗೆ ಬಂದು ಆಟಗಾರರೊಂದಿಗೆ ಮಾತನಾಡಬೇಕಾಗಿದೆ ಎಂದು ಹೇಳಿದ ಬಳಿಕ ಮೆಹಮೂದ್ ಮತ್ತು ದಾವೂದ್ ಇಬ್ರಾಹಿಂ ಇಬ್ಬರೂ ಹೊರ ನಡೆದರಂತೆ.
ಆದಾಗ್ಯೂ, ಕಪಿಲ್ ದೇವ್ ಈ ಘಟನೆ ಕುರಿತು ಇದೀಗ ಮತ್ತೆ ಮಾತನಾಡಿದ್ದು, ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅವರು ಈ ಬಾರಿ ಸ್ವಲ್ಪ ವಿಭಿನ್ನವಾದ ಕಥೆಯನ್ನು ಹೇಳಿದರು. ‘ಹೌದು, ಶಾರ್ಜಾದಲ್ಲಿ ನಡೆದ ಪಂದ್ಯಕ್ಕೂ ಮುನ್ನ ಒಬ್ಬ ಸಂಭಾವಿತ ವ್ಯಕ್ತಿ ನಮ್ಮ ಡ್ರೆಸ್ಸಿಂಗ್ ಕೋಣೆಗೆ ಬಂದು ಆಟಗಾರರೊಂದಿಗೆ ಮಾತನಾಡಲು ಬಯಸಿದ್ದು ನನಗೆ ನೆನಪಿದೆ, ಆದರೆ ಹೊರಗಿನವರಿಗೆ ಇಲ್ಲಿ ಬರಲು ಅನುಮತಿಸದ ಕಾರಣ ತಕ್ಷಣ ಡ್ರೆಸ್ಸಿಂಗ್ ಕೋಣೆಯಿಂದ ಹೊರಹೋಗುವಂತೆ ನಾನು ಅವರಿಗೆ ಹೇಳಿದೆ‘ ಎಂದು ಕಪಿಲ್ ದೇವ್ ಹೇಳಿದ್ದಾರೆ. ನಂತರ ಯಾರೋ ಅವರ ಬಗ್ಗೆ ನನಗೆ ಹಹೇಳಿದರು, ಅವರೊಬ್ಬ ಬಾಂಬೆಯ ಕಳ್ಳಸಾಗಣೆದಾರ ಮತ್ತು ಅವನ ಹೆಸರು ದಾವೂದ್ ಇಬ್ರಾಹಿಂ ಎಂದು. ಇದಕ್ಕೂ ಮೊದಲು ನನಗೆ ಅವರ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: IND vs AUS: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಸ್ಟಾರ್ ಆಲ್ರೌಂಡರ್ ಕಂಬ್ಯಾಕ್, ಪಾಂಡ್ಯ ಔಟ್!
ಟೊಯೊಟಾ ಕಾರ್ ಆಫರ್:
ಆಟಗಾರರಿಗೆ ಟೊಯೊಟಾ ಕಾರುಗಳನ್ನು ನೀಡುವುದಾಗಿ ದಾವೂದ್ ಹೇಳಿರುವುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ. ನನಗೆ ತಿಳಿದಂತೆ ಆಗ ಅಂತಹ ಯಾವುದೇ ಪ್ರಸ್ತಾಪ ಬಂದಿರಲಿಲ್ಲ. ಜಲಗಾಂವ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೆಂಗ್ಸರ್ಕರ್ ಅವರು, ನೀವು ಪಂದ್ಯಾವಳಿಯನ್ನು ಗೆದ್ದರೆ, ನಾನು ನಿಮಗೆ ಪ್ರತಿಯೊಬ್ಬರಿಗೂ ಟೊಯೊಟಾ ಕಾರನ್ನು ನೀಡುತ್ತೇನೆ ಎಂದು ದಾವೂದ್ ಹೇಳಿದ್ದರು. ಆದರೆ ಆ ಆಫರ್ ಅನ್ನು ತಂಡವು ನಿರಾಕರಿಸಿತು ಎಂದು ಹೇಳಿದ್ದಾರೆ.
ಬಿಸಿಸಿಐನ ಮಾಜಿ ಕಾರ್ಯದರ್ಶಿ ಜಯವಂತ್ ಲೆಲೆ ಅವರು ತಮ್ಮ 'ಐ ವಾಸ್ ದೇರ್ - ಮೆಮೊಯಿರ್ಸ್ ಆಫ್ ಎ ಕ್ರಿಕೆಟ್ ಅಡ್ಮಿನಿಸ್ಟ್ರೇಟರ್' ಪುಸ್ತಕದಲ್ಲಿ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ. ಟೊಯೊಟಾ ಕಾರಿನ ಆಫರ್ ಬಗ್ಗೆ ಒಂದು ಅಧ್ಯಾಯದಲ್ಲಿ ಅವರು ಬರೆದಿದ್ದಾರೆ, "ಭಾರತೀಯ ತಂಡವು ಇಲ್ಲಿ ಚಾಂಪಿಯನ್ ಆಗಿದ್ದರೆ, ನಾನು ಅಧಿಕಾರಿಗಳು ಸೇರಿದಂತೆ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಭಾರತದಲ್ಲಿ ಅವರ ಮನೆ ಬಾಗಿಲಿಗೆ ಟೊಯೋಟಾ ಕಾರನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ಬರೆದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ