ನವದೆಹಲಿ: ಫೆಬ್ರವರಿ ತಿಂಗಳಲ್ಲಿ ಬೀಜಿಂಗ್ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ನ ಎರಡು ಸ್ಪರ್ಧೆಗಳಿಗೆ ಭಾರತದ ಅರಿಫ್ ಮೊಹಮ್ಮದ್ ಖಾನ್ ಅರ್ಹತೆ ಗಿಟ್ಟಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಲ್ಪೈನ್ ಸ್ಕೈಯರ್ (Alpine Skier) ಅರಿಫ್ ಮೊಹಮ್ಮದ್ ನಿನ್ನೆ ಬೃಹತ್ ಸ್ಲಾಲೋಮ್ (Giant Slalom) ಸ್ಪರ್ಧೆಗೆ ಕ್ವಾಲಿಫೈ ಆದರು. ಯೂರೋಪ್ನ ಮಾಂಟೆನೆಗ್ರೊ ದೇಶದ ಕೊಲಾಸಿನ್ (Kolasin of Montenegro country) ನಗರದಲ್ಲಿ ನ ಡೆದ ಎಫ್ಐಎಸ್ ಸ್ಕೈಯಿಂಗ್ ಕ್ರೀಡಾಕೂಟದಲ್ಲಿ ಅರಿಫ್ ಮೊಹ್ಮಮದ್ ಅವರು ಬೃಹತ್ ಸ್ಲಾಲೋಮ್ ಸ್ಪರ್ಧೆಯಲ್ಲಿ (Slalom Event) ತಮ್ಮ ಸಾಧನೆ ಮೂಲಕ ವಿಂಟರ್ ಒಲಿಪಿಕ್ಸ್ಗೆ ಅರ್ಹತೆ ಪಡೆದರು. ಕಳೆದ ತಿಂಗಳಷ್ಟೇ ದುಬೈನಲ್ಲಿ ನಡೆದ ಸ್ಲಾಲೋಮ್ ಸ್ಪರ್ಧೆಯಲ್ಲಿ ಅವರು ವಿಂಟರ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದರು. ಈಗ ಸ್ಲಾಲೋಮ್ ಮತ್ತು ಜೈಂಟ್ ಸ್ಲಾಲೋಮ್ ಎರಡು ಸ್ಪರ್ಧೆಗಳಲ್ಲಿ ಅವರು ಚಳಿಗಾಲದ ಒಲಿಂಪಿಕ್ಸ್ಗೆ ಅರ್ಹತೆ ಪಡೆದಂತಾಗುತ್ತದೆ.
ವಿಂಟರ್ ಒಲಿಂಪಿಕ್ಸ್ ಇತಿಹಾಸದಲ್ಲಿ ಒಂದೇ ಕ್ರೀಡಾಕೂಟದಲ್ಲಿ ಎರಡು ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಮೊದಲ ಭಾರತೀಯ ಎಂಬ ಐತಿಹಾಸಿಕ ದಾಖಲೆ ಅರಿಫ್ ಮೊಹಮ್ಮದ್ ಖಾನ್ ಅವರದ್ಧಾಗಿದೆ. ಸದ್ಯ ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿರುವ ಏಕೈಕ ಭಾರತೀಯನೂ ಅವರೇ ಆಗಿದ್ದಾರೆ. ಜಮ್ಮು ಕಾಶ್ಮೀರದವರೇ ಆದ ಮಹಿಳಾ ಸ್ಪರ್ದಿ ಆಂಚಲ್ ಠಾಕೂರ್ ಅವರೂ ಕೂಡ ಜೈಂಟ್ ಸ್ಲಾಲೋಮ್ ಇವೆಂಟ್ನಲ್ಲಿ ಒಲಿಂಪಿಕ್ಸ್ಗೆ ಕ್ವಾಲಿಫೈ ಆಗುವ ಹಾದಿಯಲ್ಲಿದ್ದಾರೆ. 2018ರಲ್ಲಿ ಸೌತ್ ಕೊರಿಯಾದ ಪ್ಯೋಂಗ್ಚಾಂಗ್ನಲ್ಲಿ ನಡೆದ ವಿಂಟರ್ ಒಲಿಂಪಿಕ್ಸ್ನಲ್ಲಿ 14 ಕಿಮೀ ಫ್ರೀಸ್ಟೈಲ್ ಕ್ರಾಸ್ ಕಂಟ್ರಿ ಸ್ಕೈಯಿಂಗ್ ಮತ್ತು ಲೂಜ್ ಸ್ಕೈಯಿಂಗ್ ಸ್ಪರ್ಧೆಗಳಲ್ಲಿ ಭಾರತದ ಜಗದೀಶ್ ಸಿಂಗ್ ಮತ್ತು ಶಿವಕೇಶವನ್ ಅವರು ಆಡಿದ್ದರು.
ಫೆಬ್ರವರಿ 4ರಂದು ಆರಂಭವಾಗುವ ಬೀಜಿಂಗ್ ವಿಂಟರ್ ಒಲಿಂಪಿಕ್ಸ್ ಫೆ. 20ವರೆಗೂ ನಡೆಯುತ್ತದೆ. ಫೆಬ್ರವರಿ 13ರಂದು ಪುರುಷರ ಜೈಂಟ್ ಸ್ಲಾಲೋಮ್ ಇವೆಂಟ್ ನಡೆದರೆ, ಫೆಬ್ರವರಿ 16ರಂದು ಸ್ಲಾಲೋಮ್ ಇವೆಂಟ್ ಇದೆ. ವಿಂಟರ್ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಒಮ್ಮೆಯೂ ಪದಕ ಗೆದ್ದಿಲ್ಲ. ಈ ಬಾರಿ ಹೊಸ ಇತಿಹಾಸ ಪುಟ ತೆರೆಯುತ್ತದಾ ನೋಡಬೇಕು.
ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಕಾಯಲು ಹೇಳಿದ್ದೆವು, ಕೇಳಲಿಲ್ಲ: ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ
ಏನಿದು ಸ್ಲಾಲೋಮ್ ಸ್ಪರ್ಧೆ?
ಇದು ಸ್ಕೈಯಿಂಗ್ ಶೈಲಿಯ ಒಂದು ಕ್ರೀಡೆ. ಸ್ಕೈಯಿಂಗ್ ಎಂದರೆ ಹಿಮದಲ್ಲಿ ಮಾಡುವ ಸ್ಕೇಟಿಂಗ್. ಸ್ಲಾಲೋಮ್ ಎಂದರೆ ಹಿಮಬೆಟ್ಟದ ಇಳಿಜಾರಿನಲ್ಲಿ ಸ್ಕೈಯಿಂಗ್ ಮಾಡುವುದು. ನಿರ್ದಿಷ್ಟ ದೂರದಲ್ಲಿ ಹತ್ತಾರು ಕಿರಿದಾದ ಗೇಟ್ಗಳನ್ನ ಇರಿಸಲಾಗಿರುತ್ತದೆ. ಸ್ಪರ್ಧಿಗಳು ಸ್ಕೈಯಿಂಗ್ ಮಾಡುತ್ತಾ ಆ ಗೇಟ್ಗಳನ್ನ ಯಶಸ್ವಿಯಾಗಿ ಹೋಗಬೇಕು. ಒಂದು ಗೇಟ್ ಮಿಸ್ ಮಾಡಿದರೂ ಸ್ಪರ್ಧಿ ಔಟ್. ಯಾರು ಬೇಗ ಎಲ್ಲಾ ಗೇಟ್ಗಳನ್ನ ಹಾದುಹೋಗುತ್ತಾರೋ ಅವರು ಗೆದ್ದಂತೆ.
ಇನ್ನು, ಜೈಂಟ್ ಸ್ಲಾಲೋಮ್ಗೂ ಸ್ಲಾಲೋಮ್ಗೂ ವ್ಯತ್ಯಾಸ ಎಂದರೆ ಜೈಂಟ್ ಸ್ಲಾಲೋಮ್ನಲ್ಲಿ ಗೇಟ್ಗಳು ದೊಡ್ಡದಾಗಿರುತ್ತವೆ. ಅಂತರ ಕೂಡ ಹೆಚ್ಚು ಇರುತ್ತದೆ.
ಒಲಿಂಪಿಕ್ಸ್ನಲ್ಲಿ ಸ್ಲಾಲೋಮ್ ಇವೆಂಟ್ನಲ್ಲಿ ಆರಂಭ ಸ್ಥಾನದಿಂದ ಕೊನೆಯ ಸ್ಥಾನಕ್ಕಿರುವ ಅಂತರ ಸುಮಾರು 180-220 ಮೀಟರ್. ಗೇಟ್ಗಳ ಸಂಖ್ಯೆ 55ರಿಂದ 75 ಇರುತ್ತದೆ. ಅಂದರೆ ಒಂದು ಗೇಟ್ನಿಂದ ಮತ್ತೊಂದು ಗೇಟ್ ನಡುವೆ ಅಂತರ 10 ಅಡಿಗಿಂತ ಹೆಚ್ಚಿರುವುದಿಲ್ಲ.
ಇದನ್ನೂ ಓದಿ: PKL 8: ಒಂದೇ ರೇಡ್ನಲ್ಲಿ ಎದುರಾಳಿ ಪಾಳಯ ಆಲೌಟ್ ಮಾಡಿದ ಮೋನು ಗೋಯಟ್; ಪಟ್ನಾ, ತಲೈವಾಸ್ಗೆ ಜಯಭೇರಿ
ಸ್ಲಾಲೋಮ್ನಲ್ಲಿ ಸ್ಕೈಯಿಂಗ್ ಸ್ಪರ್ಧಿಯ ಕೌಶಲತೆ ಒರೆಗೆ ಹಚ್ಚಲಾಗುತ್ತದೆ. ಜೈಂಟ್ ಸ್ಲಾಲೋಮ್ನಲ್ಲಿ ವೇಗವೇ ಪ್ರಧಾನವಾಗಿರುತ್ತದೆ.
ಒಲಿಂಪಿಕ್ಸ್ಗೂ ವಿಂಟರ್ ಒಲಿಂಪಿಕ್ಸ್ಗೂ ಏನು ವ್ಯತ್ಯಾಸ:
ಸಾಂಪ್ರದಾಯಿಕವಾಗಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟ ಸಮ್ಮರ್ ಒಲಿಂಪಿಕ್ಸ್ ಆಗಿರುತ್ತದೆ. ವಿಂಟರ್ ಒಲಿಂಪಿಕ್ಸ್ನಲ್ಲಿ ಹಿಮದಲ್ಲಿ ಆಡುವ ಕ್ರೀಡೆಗಳು ಇರುತ್ತವೆ. ಸ್ಕೈಯಿಂಗ್, ಐಸ್ ಹಾಕಿ ಇತ್ಯಾದಿ ಆಟಗಳು ಇರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ