ರಿಯೋ ಡೀ ಜನೇರೋ (ಜೂನ್ 11): ಫುಟ್ಬಾಲ್ ಮ್ಯಾಜಿಕ್ ಮ್ಯಾನ್ ಎಂದು ಖ್ಯಾತರಾಗಿರುವ ಲಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ದಕ್ಷಿಣ ಅಮೆರಿಕ ಖಂಡದ ಚಾಂಪಿಯನ್ ಆಗಿದೆ. ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಆತಿಥೇಯ ಬ್ರೆಜಿಲ್ ವಿರುದ್ಧ ಅರ್ಜೆಂಟೀನಾ 1-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿತು. ಏಳು ವರ್ಷಗಳಿಂದ ತವರಿನಲ್ಲಿ ಸೋಲನ್ನೇ ಕಾಣದ ಬ್ರೆಜಿಲ್ ತಂಡ ಇಂದು ಆಘಾತ ಅನುಭವಿಸಿತು. 28 ವರ್ಷಗಳಿಂದ ಪ್ರಮುಖ ಟೂರ್ನಿ ಗೆಲ್ಲದೇ ಬರ ಎದುರಿಸುತ್ತಿದ್ದ ಅರ್ಜೆಂಟೀನಾ ಇಂದು ಪ್ರಶಸ್ತಿ ಗೆದ್ದು ಬೀಗಿತು. ಕ್ಲಬ್ ಫುಟ್ಬಾಲ್ನಲ್ಲಿ ಅನೇಕ ಬಾರಿ ತಮ್ಮ ತಂಡಗಳಿಗೆ ಪ್ರಶಸ್ತಿ ಗೆಲ್ಲಿಸಿದ್ದ ಮೆಸ್ಸಿ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನು ದೊಡ್ಡ ಟೂರ್ನಿಯ ದಡ ಮುಟ್ಟಿಸಿದ್ದಾರೆ.
ಇಂದು ಬ್ರೆಜಿಲ್ ರಾಜಧಾನಿ ರಯೋ ಡೀ ಜನೇರೋದ ಮರಕಾನ ಸ್ಟೇಡಿಯಂನದಲ್ಲಿ ನಡೆದ ಫೈನಲ್ ಪಂದ್ಯ ತುರುಸಿನ ಪೈಪೋಟಿ ಕಂಡಿತು. 22ನೇ ನಿಮಿಷದಲ್ಲಿ ಅರ್ಜೆಂಟೀನಾದ 33 ವರ್ಷದ ಸ್ಟ್ರೈಕರ್ ಏಂಜೆಲ್ ಡೀ ಮಾರಿಯಾ ಗೋಲು ಗಳಿಸಿ ಗೆಲುವಿನ ಮುನ್ನಡೆ ತಂದರು. ರೋಡ್ರಿಗೋ ಡೀ ಪೌಲ್ ನೀಡಿದ ಲಾಂಗ್ ಪಾಸ್ ಅನ್ನು ಗೋಲ್ಕೀಪರ್ ಎಡೆರ್ಸನ್ ಕೈಗೆಟುಕದಂತೆ ಚೆಂಡು ಮೇಲೋಗುವಂತೆ ಲಾಬ್ ಮಾಡಿ ಗೋಲು ಗಳಿಸಿದರು. ಇದು ಇಡೀ ಟೂರ್ನಿಯಲ್ಲಿ ಬ್ರೆಜಿಲ್ ತಮ್ಮ ಎದುರಾಳಿಗಳಿಗೆ ಬಿಟ್ಟುಕೊಟ್ಟ ಮೂರನೇ ಗೋಲು ಮಾತ್ರ.
ಅದಾದ ಬಳಿಕ ಬ್ರೆಜಿಲ್ ತಂಡದ ಸ್ಟಾರ್ ಆಟಗಾರ ನೆಯ್ಮರ್ ಗೋಲು ಗಳಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಚೆಂಡು ಅರ್ಜೆಂಟೀನಾ ಗೋಲ್ ಕೀಪರ್ ದಾಟಿ ಗೋಲು ಪೆಟ್ಟಿಗೆ ಸೇರಲಿಲ್ಲ. ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಬ್ರೆಜಿಲ್ ತಂಡಕ್ಕೆ ಪಂದ್ಯವೊಂದರಲ್ಲಿ ಗೋಲು ಗಳಿಸಲು ಸಾಧ್ಯವಾಗದೇ ಹೋಗಿದ್ದು.
ಇದನ್ನೂ ಓದಿ: Sachin Tendulkar| ಮಾಸ್ಟರ್ ಬ್ಲಾಸ್ಟರ್ ಅಡುಗೆ ಮಾಡಿದ ವಿಡಿಯೋ ನೋಡಿ ಬೌಲ್ಡ್ ಆದ ಅಭಿಮಾನಿಗಳು
ಈ ಟೂರ್ನಿಯಾದ್ಯಂತ ಆಕರ್ಷಕ ಪ್ರದರ್ಶನ ನೀಡಿದ್ದ ಲಯೋನೆಲ್ ಮೆಸ್ಸಿ ಅವರಿಂದ ಫೈನಲ್ ಪಂದ್ಯದಲ್ಲಿ ನಿರೀಕ್ಷಿತ ಆಟ ಬರಲಿಲ್ಲ. 88ನೇ ನಿಮಿಷದಲ್ಲಿ ಗೋಲು ಗಳಿಸುವ ಸನಿಹಕ್ಕೆ ಹೋದರಾದರೂ ಸಾಧ್ಯವಾಗಲಿಲ್ಲ. ಆದರೆ, ನಾಯಕನಾಗಿ ಅರ್ಜೆಂಟೀನಾ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟ ಸಮಾಧಾನ ಮೆಸ್ಸಿಗೆ ಸಿಕ್ಕಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ