ಬೆಂಗಳೂರು, ಜ. 01: ಬಾಹುಬಲಿ ಜೊತೆಗಿದ್ದರೂ ತೆಲುಗು ಟೈಟಾನ್ಸ್ ತಂಡಕ್ಕೆ ಈ ಸೀಸನ್ನಲ್ಲಿ ಇನ್ನೂ ಒಂದು ಗೆಲುವು ಸಿಕ್ಕಿಲ್ಲ. ಇಂದು ಬೆಂಗಳೂರು ಬುಲ್ಸ್ ವಿರುದ್ಧ ತೆಲುಗು ಟೈಟಾನ್ಸ್ (Bengaluru Bulls vs Telugu Titans) ಸೆಣಸುತ್ತಾ ಚೊಚ್ಚಲ ಗೆಲುವಿಗಾಗಿ ತವಕಿಸುತ್ತಿದೆ. ತೆಲುಗು ಟೈಟಾನ್ಸ್ ತಂಡದಲ್ಲಿ ಬಾಹುಬಲಿ ಎಂದು ಖ್ಯಾತರಾಗಿರುವ ಸಿದ್ಧಾರ್ಥ್ ದೇಸಾಯಿ (Siddharth Bahubali Desai) ಅವರ ಶಕ್ತಿ ಇದೆ. ಆದರೂ ನಿರೀಕ್ಷಿತ ರೀತಿಯಲ್ಲಿ ತೆಲುಗು ಟೈಟಾನ್ಸ್ ತಂಡಕ್ಕೆ ಫಲಿತಾಂಶ ಬಂದಿಲ್ಲ. ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ (Tamil Thalaivas) ಎದುರು ರೋಚಕ ಡ್ರಾ ಮಾಡಿಕೊಂಡ ಬಳಿಕ ತೆಲುಗು ಟೈಟಾನ್ಸ್ ಎರಡು ಪಂದ್ಯಗಳನ್ನ ಸೋತಿದೆ. ಸಿದ್ಧಾರ್ಥ್ ಬಾಹುಬಲಿ ದೇಸಾಯಿ 3 ಪಂದ್ಯಗಳಿದ 34 ಅಂಕಗಳನ್ನ ಗಳಿಸಿದ್ದಾರೆ.
ಇನ್ನೊಂದೆಡೆ ಬೆಂಗಳೂರು ಬುಲ್ಸ್ ತಂಡ ಮೊದಲ ಪಂದ್ಯದಲ್ಲಿ ಯು ಮುಂಬಾ ವಿರುದ್ಧ ದೊಡ್ಡ ಅಂತರದಿಂದ ಸೋತು ಆಘಾತಕಾರಿ ಆರಂಭ ಪಡೆಯಿತು. ಆ ಬಳಿಕ ಚೇತರಿಸಿಕೊಂಡು ಸತತ ಮೂರು ಪಂದ್ಯಗಳನ್ನ ಗೆದ್ದು ಸದ್ಯ ಆತ್ಮವಿಶ್ವಾಸದಲ್ಲಿದೆ. ತಂಡದ ಸ್ಟಾರ್ ರೇಡರ್ ಪವನ್ ಶೆರಾವತ್ ನಿರೀಕ್ಷಿತ ಮಟ್ಟದಲ್ಲಿ ಆಡುತ್ತಿದ್ದಾರೆ. ಕಳೆದೆರಡು ಸೀಸನ್ನಲ್ಲಿ ಟಾಪ್ ಸ್ಕೋರರ್ ಆಗಿದ್ದ ಅವರು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ನ ಎಕ್ಸ್ಪ್ರೆಸ್ ರೇಡರ್ ನವೀನ್ ಕುಮಾರ್ ಮತ್ತು ತಮಿಳ್ ತಲೈವಾಸ್ ನಾಯಕ ಮಣಿಂದರ್ ಸಿಂಗ್ ಅವರಿಗಿಂತ ಸ್ವಲ್ಪ ಹಿಂದಿದ್ದಾರೆ. ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಇವತ್ತಿನ ಪಂದ್ಯ ಪವನ್ ಶೆರಾವತ್ ವರ್ಸಸ್ ಬಾಹುಬಲಿ ಸಿದ್ಧಾರ್ಥ್ ದೇಸಾಯಿ ನಡುವಿನ ಹಣಾಹಣಿ ಎನಿಸಿದೆ.
ಯು ಮುಂಬಾ vs ಯುಪಿ ಯೋದ್ಧಾ:
ಇವತ್ತಿನ ಮೂರು ಪಂದ್ಯಗಳಲ್ಲಿ ಮೊದಲ ಪಂದ್ಯ ಯು ಮುಂಬಾ ಮತ್ತು ಯುಪಿ ಯೋದ್ಧಾ ನಡುವೆ ಇದೆ. ಯು ಮುಂಬಾ 4 ಪಂದ್ಯಗಳಿಂದ ಎರಡರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಯುಪಿ ಯೋದ್ಧಾ ಒಂದು ಗೆಲುವಿನೊಂದಿಗೆ 9ನೇ ಸ್ಥಾನದಲ್ಲಿದೆ.
ಅಭಿಷೇಕ್ ಸಿಂಗ್ ಮತ್ತು ವಿ ಅಜಿತ್ ಯು ಮುಂಬಾದ ರೇಡಿಂಗ್ ಶಕ್ತಿಯಾಗಿದ್ದಾರೆ. ನಅಯಕ ಅಟ್ರಾಚಲಿ ಮತ್ತು ರಿಂಕು ಡಿಫೆನ್ಸ್ನಲ್ಲಿ ಬಲಿಷ್ಟರಾಗಿದ್ದಾರೆ. ಯುಪಿ ಯೋದ್ಧಾ ತಂಡಕ್ಕೆ ಪ್ರದೀಪ್ ನರ್ವಾಲ್ ಶಕ್ತಿ ಎನಿಸಿದ್ದಾರೆ.
ಇದನ್ನೂ ಓದಿ: PKL 8: ಒಂದೇ ರೇಡ್ನಲ್ಲಿ ಎದುರಾಳಿ ಪಾಳಯ ಆಲೌಟ್ ಮಾಡಿದ ಮೋನು ಗೋಯಟ್; ಪಟ್ನಾ, ತಲೈವಾಸ್ಗೆ ಜಯಭೇರಿ
ದಬಂಗ್ ಡೆಲ್ಲಿ vs ತಮಿಳ್ ತಲೈವಾಸ್:
ಇಂದಿನ ಮೂರು ಪಂದ್ಯಗಳಲ್ಲಿ ಕೊನೆಯದ್ದು ಇದು. ನವೀನ್ ಎಕ್ಸ್ಪ್ರೆಸ್ ಕುಮಾರ್ ಮೇಲೆ ಎಲ್ಲರ ಗಮನ ಇದೆ. ಸರಿಸಾಟಿ ಇಲ್ಲದ ರೀತಿಯಲ್ಲಿ ನವೀನ್ ಆಡುತ್ತಿದ್ದಾರೆ. ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇವರನ್ನ ಹಿಡಿದು ನಿಲ್ಲಿಸುವವರೇ ಇಲ್ಲದಂತೆ ಆಡುತ್ತಿದ್ದಾರೆ. ಸತತ 24 ಬಾರಿ ಸೂಪರ್ 10 ಅಂಕ ಗಳಿಸಿದ್ದಾರೆ. ಮೊನ್ನೆಯ ಪಂದ್ಯದಲ್ಲಿ ಇವರು 20ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ. ದಬಂಗ್ ಡೆಲ್ಲಿ ಈ ಸೀಸನ್ನಲ್ಲಿ ಗಳಿಸಿರುವ ಯಶಸ್ಸು ಬಹುತೇಕ ನವೀನ್ ಕುಮಾರ್ ಅವರಿಂದಲೇ ಸಂದಾಯವಾಗಿರುವುದು.
ಸಿದ್ಧಾರ್ಥ್ ದೇಸಾಯಿಗೆ ಬಾಹುಬಲಿ ಹೆಸರ್ಯಾಕೆ?
ಸಿದ್ಧಾರ್ಥ್ ದೇಸಾಯಿ ಅಗಾಧ ಶಕ್ತಿ ಇರುವ ರೇಡರ್. ಅನೇಕ ಬಾರಿ ಇವರು ಸುತ್ತುವರಿದ ಡಿಫೆಂಡರ್ಗಳನ್ನ ನೂಕಿ ಗೆರೆ ಮುಟ್ಟಿದ ನಿದರ್ಶನಗಳಿವೆ. ಇವರನ್ನ ಹಿಡಿಯುವುದು ಅಷ್ಟು ಸುಲಭವಲ್ಲ. ಸರಿಯಾದ ಪಟ್ಟು ಹಾಕಿ ಸಾಂಘಿಕವಾಗಿ ಹಿಡಿದು ನಿಲ್ಲಿಸಬಹುದು ಅಷ್ಟೇ. ಈ ವರ್ಷ ಇವರು ತೆಲುಗು ಟೈಟಾನ್ಸ್ ತಂಡ ಸೇರ್ಪಡೆಯಾಗಿದ್ದಾರೆ. ತೆಲುಗು ಚಿತ್ರರಂಗದ ಸೂಪರ್ ಡೂಪರ್ ಹಿಟ್ ಆಗಿರುವ ಬಾಹುಬಲಿ ಕ್ಯಾರೆಕ್ಟರ್ನ ಹೆಸರನ್ನ ಸಿದ್ಧಾರ್ಥ್ ದೇಸಾಯಿ ಅವರಿಗೆ ಹಾಕಲಾಗಿದೆ. ರೀಲ್ನ ಬಾಹುಬಲಿಯಂತೆ ರಿಯಲ್ ಸಿದ್ಧಾರ್ಥ್ ದೇಸಾಯಿ ಮಹಾಶಕ್ತಿಶಾಲಿ ಆಟಗಾರ ಎನ್ನುವುದು ನಿಜ.
ಇದನ್ನೂ ಓದಿ: PKL 8: ನವೀನ್ ಎಕ್ಸ್ಪ್ರೆಸ್ ನಿಲ್ಲಿಸೋರೇ ಇಲ್ವಾ? ಸೋತ ವಾರಿಯರ್ಸ್; ಯೋದ್ಧಾ-ಜೈಂಟ್ಸ್ ಡ್ರಾ
ಅಂಕಪಟ್ಟಿ:
1) ದಬಂಗ್ ಡೆಲ್ಲಿ: 18 ಅಂಕ
2) ಪಟ್ನಾ ಪೈರೇಟ್ಸ್: 16 ಅಂಕ
3) ಬೆಂಗಳೂರು ಬುಲ್ಸ್: 15 ಅಂಕ
4) ಯು ಮುಂಬಾ: 14 ಅಂಕ
5) ಗುಜರಾತ್ ಜೈಂಟ್ಸ್: 12 ಅಂಕ
6) ತಮಿಳ್ ತಲೈವಾಸ್: 11 ಅಂಕ
7) ಜೈಪುರ್ ಪಿಂಕ್ ಪ್ಯಾಂಥರ್ಸ್: 11 ಅಂಕ
8) ಬೆಂಗಾಲ್ ವಾರಿಯರ್ಸ್: 11 ಅಂಕ
9) ಯು ಪಿ ಯೋದ್ಧಾ: 10 ಅಂಕ
10) ಹರ್ಯಾಣ ಸ್ಟೀಲರ್ಸ್: 7 ಅಂಕ
11) ತೆಲುಗು ಟೈಟಾನ್ಸ್: 5 ಅಂಕ
12) ಪುಣೇರಿ ಪಲ್ಟಾನ್ಸ್: 5 ಅಂಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ