ಬೆಂಗಳೂರು, ಜ. 1: ಇಂದು ನಡೆದ ಎಲ್ಲಾ ಮೂರು ಪಂದ್ಯಗಳೂ ರೋಚಕವಾಗಿದ್ದವು, ಮೂರೂ ಕೂಡ ಡ್ರಾನಲ್ಲಿ ಅಂತ್ಯಗೊಂಡವು. ಪ್ರೋಕಬಡ್ಡಿ ಇತಿಹಾಸದಲ್ಲಿ ಒಂದು ದಿನದಲ್ಲಿ ನಡೆದ ಎಲ್ಲಾ ಮೂರು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದು ಇದೇ ಮೊದಲಿರಬೇಕು. ಮೂರು ಕೂಡ ಲೋ ಸ್ಕೋರಿಂಗ್ ಮ್ಯಾಚ್ಗಳಾಗಿದ್ದವು. ಯು ಮುಂಬಾ ಮತ್ತು ಯುಪಿ ಯೋದ್ಧಾ ನಡುವಿನ ಪಂದ್ಯ 28-28 ಅಂಕಗಳಿಂದ ಡ್ರಾನಲ್ಲಿ ಅಂತ್ಯಗೊಂಡಿತು. ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಪಂದ್ಯ ಕೂಡ 34-34 ಅಂಕಗಳಿಂದ ಡ್ರಾ ಆಯಿತು. ಮೂರನೇ ಪಂದ್ಯದಲ್ಲಿ ದಬಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ಪಂದ್ಯ 30-30 ಅಂಕಗಳಿಂದ ಡ್ರಾ ಆಯಿತು. ಮೊದಲೆರಡು ಪಂದ್ಯಗಳಲ್ಲಿ ಡಿಫೆಂಡರ್ಗಳದ್ದೇ ಆರ್ಭಟವಾದರೆ, ಮೂರನೇ ಪಂದ್ಯದಲ್ಲಿ ದಬಂಗ್ ಡೆಲ್ಲಿಯ ರೇಡರ್ ನವೀನ್ ಕುಮಾರ್ ಅವರ ಎಕ್ಸ್ಪ್ರೆಸ್ ಓಟದ ದಾಖಲೆ ಮುಂದುವರಿಯಿತು.
ಯು ಮುಂಬಾ- ಯುಪಿ ಯೋದ್ಧಾ ಪಂದ್ಯ:
ಮೊದಲ ಪಂದ್ಯದಲ್ಲಿ ರೇಡಿಂಗ್ ಪಾಯಿಂಟ್ಸ್ಗಿಂತ ಹೆಚ್ಚಾಗಿ ಟ್ಯಾಕಲ್ ಪಾಯಿಂಟ್ಗಲೇ ಹೆಚ್ಚಾಗಿ ಬಂದವು. ಯು ಮುಂಬಾ ಮತ್ತು ಯುಪಿ ಯೋದ್ಧಾ ತಂಡಗಳ ಡಿಫೆನ್ಸ್ ಬಹಳ ಸ್ಟ್ರಾಂಗ್ ಆಗಿತ್ತು. ಯು ಮುಂಬಾ ತಂಡಕ್ಕೆ ಇಂದು ಸ್ಟಾರ್ ರೇಡರ್ ಎನಿಸಿದ್ದು ವಿ ಅಜಿತ್. ಅಚ್ಚರಿ ಎಂಬಂತೆ ಅಭಿಷೇಕ್ ಸಿಂಗ್ ಸ್ವಲ್ಪ ಮಂಕಾಗಿದ್ದರು. ರಾಹುಲ್ ಸೇತಪಾಲ್, ರಿಂಕು, ಮೊಹ್ಸೆನ್ ಮಗ್ಸೂದ್ಲೂ ಮತ್ತು ಅಹರೇಂದರ್ ಸಿಂಗ್ ಅವರು ಡಿಫೆನ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದರು.
ಯುಪಿ ಯೋದ್ಧಾದ ಸುರೇಂದರ್ ಗಿಲ್ ಉತ್ತಮ ರೇಡಿಂಗ್ ಮಾಡಿದರು. ಡಿಫೆನ್ಸ್ನಲ್ಲಿ ಸುಮಿತ್ ಅಸಾಧಾರಣ ಎನಿಸಿದರು.
ಬೆಂಗಳೂರು ಬುಲ್ಸ್ಗೆ ರೋಚಕ ಟೈ:
ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ಡ್ರಾ ಮಾಡಿಕೊಂಡವು. ತೆಲುಗು ಟೈಟಾನ್ಸ್ ಹೆಚ್ಚು ಬಲಿಷ್ಠ ಮತ್ತು ಆಕ್ರಮಣಕಾರಿ ಎನಿಸಿತಾದರೂ ಗೆಲುವು ದಕ್ಕಲಿಲ್ಲ. ಬೆಂಗಳೂರು ಬುಲ್ಸ್ ಇಂದು ಗಳಿಸಿದ ರೇಡಿಂಗ್ ಪಾಯಿಂಟ್ಗಳಲ್ಲಿ ಹೆಚ್ಚಿನವು ಬೋನಸ್ಗಳಿಂದಲೇ ಬಂದವು. ಪವನ್ ಶೆರಾವತ್ ಕೂಡ ಇಂದು ಮಂಕಾಗಿದ್ದರು. ಅವರಿಗೆ ಕೋರ್ಟ್ಗೆ ಬರಲು ಹೆಚ್ಚಿನ ಅವಕಾಶವೇ ಸಿಗಲಿಲ್ಲ.
ಇದನ್ನೂ ಓದಿ: Pro Kabaddi: ಕಬಡ್ಡಿ ಅಂಗಳ ಅಳತೆ, ವಿವಿಧ ನಿಯಮಗಳು, ಫೌಲ್, ಎಲ್ಲಾ ಡೀಟೇಲ್ಸ್
ತೆಲುಗು ಟೈಟಾನ್ಸ್ ತಂಡದ ಡಿಫೆನ್ಸ್ ಸಖತ್ತಾಗಿತ್ತು. ಕರ್ನಾಟಕದ ಹುಡುಗ ರಾಕೇಶ್ ಗೌಡ ಮತ್ತು ಅಂಕಿತ್ ಬೆನಿವಾಲ್ ರೇಡಿಂಗ್ನಲ್ಲಿ ಒಂದಷ್ಟು ಮಿಂಚಿನ ಸಂಚಾರ ನಡೆಸಿದರು. ಕೊನೆಯಲ್ಲಿ ತೆಲುಗು ಟೈಟಾನ್ಸ್ ಗೆಲುವು ಬಹುತೇಕ ಖಚಿತ ಎನ್ನುವಾಗ ಬೆಂಗಳೂರು ಬುಲ್ಸ್ ತಂಡ ಕೊನೆ ಕ್ಷಣಗಳಲ್ಲಿ ಒಂದೆರಡು ಅಂಕಗಳನ್ನ ಗಳಿಸಿ ಸ್ಕೋರು ಸಮ ಮಾಡಿಕೊಂಡಿತು.
ಚೊಚ್ಚಲ ಗೆಲುವಿನ ಹೊಸ್ತಿಲಿನಲ್ಲಿ ತೆಲುಗು ಟೈಟಾನ್ಸ್ ಎಡವಿತು. ತನ್ನ ನಾಲ್ಕನೇ ಪಂದ್ಯದಲ್ಲೂ ತೆಲುಗು ಟೈಟಾನ್ಸ್ಗೆ ಗೆಲುವು ಸಿಗಲಿಲ್ಲ. ಆದರೆ, ಬಾಹುಬಲಿ ಸಿದ್ಧಾರ್ಥ್ ದೇಸಾಯಿ ಅನುಪಸ್ಥಿತಿ ತೆಲುಗು ಟೈಟಾನ್ಸ್ ತಂಡಕ್ಕೆ ಕಾಡಿದಂತಿತ್ತು.
ನವೀನ್ ವರ್ಸಸ್ ತಮಿಳ್ ತಲೈವಾಸ್:
ದಬಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ನಡುವಿನ ಕೊನೆಯ ಪಂದ್ಯ ನವೀನ್ vs ತಮಿಳ್ ತಲೈವಾಸ್ ಎಂಬಂತಾಗಿತ್ತು. ನವೀನ್ ಸತತ 26ನೇ ಬಾರಿ ಸೂಪರ್10 ಅಂಕ ಗಳಿಸಿ ತಮ್ಮ ದಾಖಲೆಯ ಓಟವನ್ನು ಮುಂದುವರಿಸಿದರು. ಆದರೆ, ತಮಿಳ್ ತಲೈವಾಸ್ ವೀರೋಚಿತ ಹೋರಾಟ ತೋರಿತು. ಸರಾಗವಾಗಿ ಸ್ಕೋರ್ ಮಾಡುತ್ತಿದ್ದ ನವೀನ್ ಕುಮಾರ್ ಅವರನ್ನ ಮೂರು ಬಾರಿ ಕೆಡವಿ ಹಾಕಿದರು. ತಮಿಳ್ ತಂಡದ ಡಿಫೆನ್ಸ್ನಲ್ಲಿ ಇದ್ದ ಸಾಗರ್ ಪ್ರದರ್ಶನ ಅಮೋಘವಾಗಿತ್ತು. ಜೊತೆಗೆ ಮೋಹಿತ್ ಮತ್ತು ಸುರ್ಜೀತ್ ಅವರೂ ಒಳ್ಳೊಳ್ಳೆಯ ಟ್ಯಾಕಲ್ ಮಾಡಿದರು.
ಇದನ್ನೂ ಓದಿ: ಇವರು ನವೀನ್ ‘ಎಕ್ಸ್ಪ್ರೆಸ್’- ಕಾಲಿಟ್ಟರೆ ಮಿಂಚಿನ ಸಂಚಾರ; 76 ರೇಡ್ಗಳಲ್ಲಿ ಸಿಕ್ಕಿಬಿದ್ದಿರುವುದು 4 ಬಾರಿ
ದಬಂಗ್ ಡೆಲ್ಲಿ ತಂಡದ ರೇಡಿಂಗ್ ವಿಭಾಗ ಸಂಪೂರ್ಣವಾಗಿ ನವೀನ್ ಕುಮಾರ್ ಮೇಲೆ ಅವಲಂಬಿತವಾಗಿತ್ತು. ಅದು ಬಿಟ್ಟರೆ ಡೆಲ್ಲಿಯ ಡಿಫೆನ್ಸ್ ಆರಂಭದಲ್ಲಿ ಮೆತ್ತಗೆ ಇದ್ದರೂ ದ್ವಿತೀಯಾರ್ಧದಲ್ಲಿ ಬಲಿಷ್ಠವೆನಿಸಿತು. ಕರ್ನಾಟಕದ ಜೀವಕುಮಾರ್, ಜೋಗಿಂದರ್ ನರವಾಲ್, ಮಂಜಿತ್ ಚಿಲ್ಲರ್ ಅವರು ಡಬಂಗ್ ಡೆಲ್ಲಿಗೆ ಬಲಿಷ್ಠ ರಕ್ಷಣೆ ಒದಗಿಸಿದ್ದರು.
ಅಂತಿಮವಾಗಿ ತಮಿಳ್ ತಲೈವಾಸ್ ಈ ಪಂದ್ಯವನ್ನ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಬುಲ್ಸ್ ಸ್ಥಾನ ಏರಿಕೆ:
ಇವತ್ತಿನ ಪಂದ್ಯದ ಬಳಿಕ ಬೆಂಗಳೂರು ಬುಲ್ಸ್ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದೆ. ಡಬಂಗ್ ಡೆಲ್ಲಿ ಅಗ್ರಸ್ಥಾನ ಇನ್ನಷ್ಟು ಭದ್ರಗೊಂಡಿದೆ. ತಮಿಳ್ ತಲೈವಾಸ್ ಒಂದೇ ಗೆಲುವು ಇದ್ದರೂ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ತೆಲುಗು ಟೈಟಾನ್ಸ್ ಒಂದೂ ಗೆಲುವು ಇಲ್ಲದಿದ್ದರೂ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ