ತಾಷ್ಕೆಂಟ್(ಸೆ. 20): ಎಎಫ್ಸಿ ಅಂಡರ್-16 ಚಾಂಪಿಯನ್ಶಿಪ್ನ ಅರ್ಹತಾ ಟೂರ್ನಿಯಲ್ಲಿ ಭಾರತದ ಭರ್ಜರಿ ಪ್ರದರ್ಶನ ಮುಂದುವರಿದಿದೆ. ಬಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ತುರ್ಕ್ಮೆನಿಸ್ತಾನ ವಿರುದ್ಧ 5-0 ಗೋಲುಗಳಿಂದ ಗೆದ್ದು ಶುಭಾರಂಭ ಮಾಡಿದ್ದ ಭಾರತೀಯ ಬಾಲಕರು ತಮ್ಮ ಎರಡನೇ ಪಂದ್ಯದಲ್ಲಿ ಬಹರೇನ್ ತಂಡವನ್ನು ಅಷ್ಟೇ ಅಂತರದಿಂದ ಸದೆಬಡಿದಿದ್ದಾರೆ. ಇದರೊಂದಿಗೆ ಚಾಂಪಿಯನ್ಶಿಪ್ಗೆ ಅರ್ಹತೆ ಗಿಟ್ಟಿಸುವ ಸಾಧ್ಯತೆಯನ್ನು ಬಲಪಡಿಸಿಕೊಂಡಿದ್ದಾರೆ.
ಉಜ್ಬೆಕಿಸ್ತಾನದ ತಾಷ್ಕೆಂಟ್ನ ಜೆಎಆರ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಶ್ರೀಧರ್ತ್(4 ಮತ್ತು 28ನೇ ನಿಮಿಷ) ಮತ್ತು ಶುಭೋ ಪೌಲ್ (45 ಮತ್ತು 75ನೇ ನಿಮಿಷ) ತಲಾ ಎರಡು ಗೋಲು ಗಳಿಸಿದರು. ಪ್ರೀತಮ್ 25ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿದರು. ಮೊದಲಾರ್ಧದಲ್ಲೇ ಭಾರತದ ಹುಡುಗರು 4 ಗೋಲು ಗಳಿಸಿದ್ದರು.
ಇದನ್ನೂ ಓದಿ: ಎಎಫ್ಸಿ ಅಂಡರ್-16 ಫುಟ್ಬಾಲ್: ತುರ್ಕ್ಮೆನಿಸ್ತಾನ್ ವಿರುದ್ಧ ಭಾರತಕ್ಕೆ 5-0 ಗೆಲುವು
ಕೋಚ್ ಬಿಬಿಯಾನೋ ಫರ್ನಾಂಡಿಸ್ ಅವರ ಗರಡಿಯಲ್ಲಿ ಪಳಗುತ್ತಿರುವ ಭಾರತ ಅಂಡರ್-16 ತಂಡ ಎರಡು ಪಂದ್ಯಗಳಿಂದ 6 ಪಾಯಿಂಟ್ ಕಲೆಹಾಕಿ ಬಿ ಗುಂಪಿನಲ್ಲಿ ಉಜ್ಬೆಕಿಸ್ತಾನ ತಂಡದೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದೆ. ಆತಿಥೇಯ ಉಜ್ಬೆಕಿಸ್ತಾನ ಕೂಡ ಸತತ ಎರಡು ಪಂದ್ಯ ಗೆದ್ದಿದೆ. ಬಹರೇನ್ ವಿರುದ್ಧ ಮೊದಲ ಪಂದ್ಯದಲ್ಲಿ 3-1 ಗೋಲುಗಳಿಂದ ಗೆದ್ದಿದ್ದ ಉಜ್ಬೆಕಿಸ್ತಾನೀ ಹುಡುಗರು ಎರಡನೇ ಪಂದ್ಯದಲ್ಲಿ ತುರ್ಕ್ಮೆನಿಸ್ತಾನ ವಿರುದ್ಧ 3-2 ಗೋಲುಗಳಿಂದ ಪ್ರಯಾಸಕರ ಗೆಲುವು ಸಂಪಾದಿಸಿದ್ದಾರೆ. ಒಟ್ಟಾರೆ, ಎರಡು ಸುತ್ತುಗಳ ಬಳಿಕ ಗೋಲು ಸರಾಸರಿ ಆಧಾರದ ಮೇಲೆ ಭಾರತವೇ ಅಗ್ರಸ್ಥಾನದಲ್ಲಿದೆ.
ಭಾನುವಾರ ಉಜ್ಬೆಕಿಸ್ತಾನ ಮತ್ತು ಭಾರತದ ಮಧ್ಯೆ ಗುಂಪಿನ ಕೊನೆಯ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದವರು ಎಎಫ್ಸಿ ಚಾಂಪಿಯನ್ಶಿಪ್ನ ಪ್ರಧಾನ ಹಂತಕ್ಕೆ ನೇರವಾಗಿ ಅರ್ಹತೆ ಗಿಟ್ಟಿಸಲಿದ್ದಾರೆ. ಟೂರ್ನಿಯಲ್ಲಿ 8ನೇ ಕ್ರಮಾಂಕದಲ್ಲಿರುವ ಭಾರತ ಈ ಮೂರನೇ ಪಂದ್ಯವನ್ನ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.
ಇದನ್ನೂ ಓದಿ: ಅಂದು ಒಪ್ಪೊತ್ತಿನ ಊಟಕ್ಕಾಗಿ ವಿಶ್ವದ ಶ್ರೀಮಂತ ಫುಟ್ಬಾಲ್ ಆಟಗಾರನ ಪರದಾಟ: ಇಂದು ತುಂಡು ಬರ್ಗರ್ ನೀಡಿದವರಿಗಾಗಿ ಹುಡುಕಾಟ
ಒಟ್ಟು 47 ತಂಡಗಳು ಈ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಂಡಿವೆ. ಈ 47 ತಂಡಗಳನ್ನು 11 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತೀ ಗುಂಪಿನಲ್ಲಿ ಪ್ರತೀ ತಂಡವು ಗುಂಪಿನ ಇತರ ತಂಡಗಳ ಮೇಲೆ ಒಂದೊಂದು ಪಂದ್ಯ ಆಡಲಿದೆ. ಪ್ರತೀ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳು ಪ್ರಧಾನ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಇವುಗಳ ಪೈಕಿ ಎಎಫ್ಸಿ ಚಾಂಪಿಯನ್ಶಿಪ್ ಟೂರ್ನಿ ಆಯೋಜಿಸುತ್ತಿರುವ ಬಹರೇನ್ ತಂಡ ಆತಿಥೇಯ ರಾಷ್ಟ್ರವಾಗಿ ಪ್ರಧಾನ ಹಂತಕ್ಕೆ ನೇರ ಪ್ರವೇಶ ಮಾಡುತ್ತದೆ.
ಒಟ್ಟಾರೆಯಾಗಿ, 16 ತಂಡಗಳು ಅಂಡರ್-16 ಎಎಫ್ಸಿ ಚಾಂಪಿಯನ್ಶಿಪ್ನ ಪ್ರಧಾನ ಹಂತದ ಟೂರ್ನಿಗೆ ಪ್ರವೇಶ ಗಿಟ್ಟಿಸಲಿವೆ. ಆತಿಥೇಯ ಬಹರೇನ್ ಜೊತೆಗೆ 11 ಗುಂಪುಗಳ ಅಗ್ರಸ್ಥಾನಿಗರು ಅರ್ಹತೆ ಪಡೆಯುತ್ತಾರೆ. ಇವರನ್ನು ಹೊರತುಪಡಿಸಿ ಅರ್ಹತಾ ಟೂರ್ನಿಯಲ್ಲಿ ಅತೀ ಹೆಚ್ಚು ಪಾಯಿಂಟ್ ಗಳಿಸುವ 4-5 ತಂಡಗಳಿಗೂ ಪ್ರಧಾನ ಹಂತ ಪ್ರವೇಶದ ಅವಕಾಶವಿರುತ್ತದೆ. ಭಾರತ ಈ ಮೊದಲು ಒಮ್ಮೆ ಟೂರ್ನಿಯ ಪ್ರಧಾನ ಹಂತ ಪ್ರವೇಶಿಸಿದೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.