ಬೆಂಗಳೂರು: ಏಷ್ಯನ್ ಫುಟ್ಬಾಲ್ ಕ್ಲಬ್ಗಳ ನಡುವೆ ನಡೆಯುವ ಎಎಫ್ಸಿ ಕಪ್ ಟೂರ್ನಿಯಲ್ಲಿ ಭಾರತೀಯ ತಂಡಗಳಿಗೆ ಮಿಶ್ರಫಲ ಸಿಕ್ಕಿದೆ. ನಿನ್ನೆ ನಡೆದ ಗ್ರೂಪ್ ಡಿ ಪಂದ್ಯಗಳಲ್ಲಿ ಬೆಂಗಳೂರು ಎಫ್ಸಿ ಡ್ರಾ ಸಾಧಿಸಿದರೆ, ಐ-ಲೀಗ್ ಚಾಂಪಿಯನ್ ಮೋಹನ್ ಬಗಾನ್ ಗೆಲುವು ಸಾಧಿಸಿ ಕ್ವಾರ್ಟರ್ಫೈನಲ್ನತ್ತ ದಾಪುಗಾಲಿಕ್ಕುತ್ತಿದೆ. ಇಂಡಿಯನ್ ಸೂಪರ್ ಲೀಗ್ನಲ್ಲಿ 3ನೇ ಸ್ಥಾನ ಪಡೆದಿದ್ದ ಬೆಂಗಳೂರು ಫುಟ್ಬಾಲ್ ಕ್ಲಬ್ನ ಕಳಪೆ ಫಾರ್ಮ್ ಮುಂದುವರಿದಿದೆ. ಎಎಫ್ಸಿ ಕಪ್ನ ಡಿ ಗುಂಪಿನ ಮೊದಲ ಸುತ್ತಿನಲ್ಲಿ ಮೋಹನ್ ಬಗಾನ್ ವಿರುದ್ಧ ಸೋತಿದ್ದ ಬೆಂಗಳೂರು ಎಫ್ಸಿ ನಿನ್ನೆ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಬಾಂಗ್ಲಾದೇಶ ಲೀಗ್ ಚಾಂಪಿಯನ್ ಬಶುಂಧರಾ ಕಿಂಗ್ಸ್ ತಂಡದ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿತು. ಇದರೊಂದಿಗೆ ಬೆಂಗಳೂರು ತಂಡ ಕ್ವಾರ್ಟರ್ ಫೈನಲ್ ತಲುಪುವ ಅವಕಾಶ ಕೈಚೆಲ್ಲಿತು.
ಇದೇ ವೇಳೆ, ಮೋಹನ್ ಬಗಾನ್ ತಂಡ ಮಾಲ್ಡೀವ್ಸ್ ಚಾಂಪಿಯನ್ ಮಾಜಿಯಾ ಕ್ಲಬ್ ವಿರುದ್ಧ 3-1 ಗೋಲುಗಳಿಂದ ಸೋಲಿಸಿತು. ಮೋಹನ್ ಬಗಾನ್ಗೆ ಇದು ಸತತ ಎರಡನೇ ಗೆಲುವು. ಹಿಂದಿನ ಪಂದ್ಯದಲ್ಲಿ ಬೆಂಗಳೂರು ಎಫ್ಸಿಯನ್ನ 2-0 ಗೋಲುಗಳಿಂದ ಮಣಿಸಿದ್ದ ಮೋಹನ್ ಬಗಾನ್ ಇದೀಗ ಕ್ವಾರ್ಟರ್ ಫೈನಲ್ ಹೊಸ್ತಿಲಿನಲ್ಲಿದೆ. ನಾಲ್ಕು ತಂಡಗಳಿರುವ ಡಿ ಗುಂಪಿನಲ್ಲಿ ಇನ್ನೊಂದು ಸುತ್ತು ಬಾಕಿ ಇದೆ. ಆರು ಅಂಕಗಳನ್ನ ಹೊಂದಿರುವ ಮೋಹನ್ ಬಗಾನ್ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ಬಶುಂಧರಾ ಕಿಂಗ್ಸ್ ಅನ್ನು ಎದುರುಗೊಳ್ಳಲಿದೆ. ಈ ಪಂದ್ಯವನ್ನ ಡ್ರಾ ಮಾಡಿಕೊಂಡರೂ ಮೋಹನ್ ಬಗಾನ್ ಎಂಟರ ಹಂತ ಪ್ರವೇಶಿಸಬಲ್ಲುದು. ಇನ್ನು, ಎಎಫ್ಸಿ ಕಪ್ನಲ್ಲಿ ಕೆಲವು ಬಾರಿ ಕೀರ್ತಿಪತಾಕೆ ಹಾರಿಸಿದ್ದ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ ತನ್ನ ಕೊನೆಯ ಪಂದ್ಯದಲ್ಲಿ ಮಾಲ್ಡೀವ್ಸ್ನ ಮಾಜಿಯಾ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಆಡಲಿದೆ. ಮಾನ ಉಳಿಸಿಕೊಳ್ಳುವ ಅವಕಾಶವಷ್ಟೇ ಸದ್ಯ ಬೆಂಗಳೂರಿಗೆ ಇದೆ.
ಇತ್ತೀಚಿನ ದಿನಗಳಲ್ಲಿ ಕೋಚ್ಗಳ ಬದಲಾವಣೆ ಇತ್ಯಾದಿಯಿಂದ ಬೆಂಗಳೂರು ಎಫ್ಸಿ ತನ್ನ ಮೂಲ ಗತ್ತನ್ನು ಕಳೆದುಕೊಂಡಂತಿದೆ. ಎರಡು ಬಾರಿ ಐ ಲೀಗ್ ಮತ್ತು ಒಂದು ಬಾರಿ ಐಎಸ್ಎಲ್ ಚಾಂಪಿಯನ್ ಆಗಿರುವ ಬೆಂಗಳೂರು ತಂಡ ಎಎಫ್ಸಿ ಟೂರ್ನಿಯಲ್ಲೂ ಈ ಹಿಂದೆ ಗಮನಾರ್ಹ ಪ್ರದರ್ಶನ ನೀಡಿತ್ತು. ಇದೀಗ ಕಳೆಗುಂದಿದಂತಿರುವ ಬೆಂಗಳೂರು ಎಫ್ಸಿ ತಂಡ ನೂತನ ಕೋಚ್ ಮಾರ್ಕೋ ಪೆಜೋಲಿ ನೇತೃತ್ವದಲ್ಲಿ ಪುಟಿದೇಳುವ ತವಕದಲ್ಲಿದೆ. ಸದ್ಯ ಇಂಡಿಯನ್ ಸೂಪರ್ ಲೀಗ್ನಲ್ಲಿ 7ನೇ ಸ್ಥಾನದಲ್ಲಿರುವ ಬೆಂಗಳೂರಿಗೆ ಚಾಂಪಿಯನ್ ಆಗುವ ಅವಕಾಶ ಇಲ್ಲ. ಬೆಂಗಳೂರು 20 ಪಂದ್ಯಗಳಿಂದ 22 ಅಂಕಗಳನ್ನ ಹೊಂದಿದೆ. ಇದೇ ವೇಳೆ, 40 ಅಂಕ ಹೊಂದಿರುವ ಮುಂಬೈ ಸಿಟಿ ಮತ್ತು ಮೋಹನ್ ಬಗಾನ್ ಅಗ್ರಸ್ಥಾನದಲ್ಲಿವೆ.
ಇದನ್ನೂ ಓದಿ: ಪಿಚ್ ರೋಲರ್ ಕದ್ದ ಆರೋಪ: ಕೆರಳಿ ಕೆಂಡವಾದ ಟೀಮ್ ಇಂಡಿಯಾ ಕ್ರಿಕೆಟಿಗ ಪರ್ವೆಜ್ ರಸೂಲ್
ಭಾರತದಲ್ಲಿ ಎರಡು ಪ್ರಮುಖ ಫುಟ್ಬಾಲ್ ಕ್ಲಬ್ ಲೀಗ್ಗಳಿವೆ. ಇಂಡಿಯನ್ ಸೂಪರ್ ಲೀಗ್ ಮತ್ತು ಐ-ಲೀಗ್. ಏಷ್ಯನ್ ಫುಟ್ಬಾಲ್ ಕ್ಲಬ್ಗಳ ಮಧ್ಯೆ ಎರಡು ಪ್ರಮುಖ ಟೂರ್ನಿಗಳು ನಡೆಯುತ್ತವೆ. ಏಷ್ಯನ್ ಚಾಂಪಿಯನ್ ಲೀಗ್ ಮತ್ತು ಎಎಫ್ಸಿ ಕಪ್. ಐಎಸ್ಎಲ್ನಲ್ಲಿ ಚಾಂಪಿಯನ್ ಆದ ತಂಡವು ಏಷ್ಯನ್ ಚಾಂಪಿಯನ್ ಲೀಗ್ನಲ್ಲಿ ಆಡುವ ಅವಕಾಶ ಪಡೆಯುತ್ತವೆ. ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಹಾಗೂ ಐ ಲೀಗ್ನಲ್ಲಿ ಮೊದಲ ಸ್ಥಾನ ಪಡೆದ ತಂಡ ಹೀಗೆ ಮುರು ತಂಡಗಳು ಎಎಫ್ಸಿ ಕಪ್ ಟೂರ್ನಿಯಲ್ಲಿ ಸೆಣಸಲಿವೆ. ಬೆಂಗಳೂರು ಎಫ್ಸಿ ತಂಡ ಒಮ್ಮೆ ಎಎಫ್ಸಿ ಕಪ್ ಫೈನಲ್ ತಲುಪಿದ್ದೇ ಭಾರತದ ಈವರೆಗಿನ ಗರಿಷ್ಠ ಸಾಧನೆ ಆಗಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ